ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ವೈಮನಸಿನಿಂದ 64 ವರ್ಷದ ವ್ಯಕ್ತಿಯನ್ನು ಪೂರ್ವಯೋಜಿತವಾಗಿ ಕೊಲೆ ಮಾಡಿ, ಮೃತದೇಹವನ್ನು ತುಂಡರಿಸಿ ಎರಡು ಟ್ರಂಕ್‌ಗಳಲ್ಲಿ ತುಂಬಿ ಬಾವಿಗೆ ಎಸೆದಿದ್ದ ಭೀಕರ ಪ್ರಕರಣವನ್ನು ಹುನಗುಂದ ಪೊಲೀಸರು ಭೇದಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ವೈಮನಸಿನಿಂದ 64 ವರ್ಷದ ವ್ಯಕ್ತಿಯನ್ನು ಪೂರ್ವಯೋಜಿತವಾಗಿ ಕೊಲೆ ಮಾಡಿ, ಮೃತದೇಹವನ್ನು ತುಂಡರಿಸಿ ಎರಡು ಟ್ರಂಕ್‌ಗಳಲ್ಲಿ ತುಂಬಿ ಬಾವಿಗೆ ಎಸೆದಿದ್ದ ಭೀಕರ ಪ್ರಕರಣವನ್ನು ಹುನಗುಂದ ಪೊಲೀಸರು ಭೇದಿಸಿದ್ದಾರೆ. ಹುನಗುಂದ ತಾಲೂಕಿನ ಹೂವನೂರ ಗ್ರಾಮದ ಅಶೋಕ ಗುರುಪಾದಪ್ಪ ಅಂಗಡಿ (64) ಕೊಲೆಯಾದವರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀಪ ಶಿವರುದ್ರಪ್ಪ ಡೆಂಗಿ (24), ಸಂದೀಪ ಶಿವರುದ್ರಪ್ಪ ಡೆಂಗಿ (25), ರಮೇಶ ಮಲ್ಲಿಕಾರ್ಜುನ ಜಾಲವಾದಿ (22) ಹಾಗೂ ಸಂಗನಗೌಡ ಸಂಗಮೇಶ ಶಂಕುಗೌಡ ಗೊಟಗುಣಕಿ (20) ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಇನ್ನಿಬ್ಬರು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಸಿದ್ದಾರೆ.

ಕೊಲೆ ಪ್ರಕರಣ ಬಯಲಾಗಿದ್ದು ಹೇಗೆ?:ಮೃತ ಅಶೋಕ ಅಂಗಡಿ 2026ರ ಮಾರ್ಚ್ 12ರಂದು ಸಂಜೆ ಮನೆಯಿಂದ ಹೊರಗೆ ಹೋದವರು ಮರಳಿ ಬಾರದ ಹಿನ್ನೆಲೆ ಪತ್ನಿ ಮಹಾದೇವಿ ಮಾರ್ಚ್ 14ರಂದು ಹುನಗುಂದ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಕುರಿತು ವ್ಯಕ್ತಿ ಕಾಣೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದರು. ನವೆಂಬರ್ 16ರಂದು ಪತ್ನಿ ಮಹಾದೇವಿ ಅವರು ಮತ್ತೊಂದು ದೂರು ಸಲ್ಲಿಸಿ, ಸುದೀಪ, ಸಂದೀಪ ಹಾಗೂ ಇತರರು ಹಣಕಾಸಿನ ವ್ಯವಹಾರದ ಹಿನ್ನೆಲೆ ತಮ್ಮ ಪತಿಯನ್ನು ಕೊಲೆ ಮಾಡಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಈ ದೂರಿನ ಆಧಾರದ ಮೇಲೆ ಕೊಲೆ ಪ್ರಕರಣ ದಾಖಲಿಸಿ ತನಿಖೆ ಚುರುಕುಗೊಳಿಸಲಾಗಿತ್ತು.

ಸಾಲದ ಹಣ, ಬಾಡಿಗೆ ವಿಚಾರವೇ ಕೊಲೆಗೆ ಕಾರಣ:ಮೃತ ಅಶೋಕ ಅಂಗಡಿಗೆ ಕೂಡಲಸಂಗಮ ಕ್ರಾಸ್ ಸಮೀಪ ವಾಣಿಜ್ಯ ಸಂಕೀರ್ಣವಿತ್ತು. ಎರಡು ವರ್ಷಗಳಿಂದ ಸುದೀಪ ಮತ್ತು ಸಂದೀಪ ಸಹೋದರರು ಈ ಸಂಕೀರ್ಣದಲ್ಲಿ ಖಾಸಗಿ ಆಸ್ಪತ್ರೆ ಹಾಗೂ ಮೆಡಿಕಲ್ ಸ್ಟೋರ್ ನಡೆಸುತ್ತಿದ್ದರು. ಸಂಕೀರ್ಣದ ಹಿಂಭಾಗದ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದರು. ಆಸ್ಪತ್ರೆ ಆರಂಭಿಸುವ ಸಂದರ್ಭದಲ್ಲಿ ಅಶೋಕ ಅಂಗಡಿ ಸಹೋದರರಿಗೆ ಲಕ್ಷಾಂತರ ರೂಪಾಯಿ ಹಣವನ್ನು ಕೈಗಡವಾಗಿ ನೀಡಿದ್ದರು. ಪಡೆದ ಹಣ ಹಿಂದಿರುಗಿಸಿರಲಿಲ್ಲ. ವಾಣಿಜ್ಯ ಸಂಕೀರ್ಣ ಹಾಗೂ ಮನೆಯ ಬಾಡಿಗೆಯನ್ನೂ ಸರಿಯಾಗಿ ಪಾವತಿಸಿರಲಿಲ್ಲ ಎನ್ನಲಾಗಿದೆ. ಹಣ ಮತ್ತು ಬಾಕಿ ಬಾಡಿಗೆ ಹಿಂದಿರುಗಿಸುವಂತೆ ಅಶೋಕ ಅಂಗಡಿ ಪದೇ ಪದೆ ಒತ್ತಾಯಿಸುತ್ತಿದ್ದರಿಂದ ಆರೋಪಿಗಳು ಹಾಗೂ ಮೃತರ ನಡುವೆ ವೈಮನಸ್ಸು ಉಂಟಾಗಿತ್ತು. ಇದೇ ದ್ವೇಷ ಕೊಲೆಗೆ ಕಾರಣವಾಗಿದೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

ಕಾರಿನಲ್ಲಿ ಮೃತದೇಹ ಸಾಗಣೆ:ಪೊಲೀಸರ ತನಿಖೆಯ ಪ್ರಕಾರ, ಮಾ.12ರಂದು ಸಂಜೆ ಅಶೋಕ ಅಂಗಡಿಯನ್ನು ಸುದೀಪ ಮತ್ತು ಸಂದೀಪ ತಮ್ಮ ಹೂವನೂರ ಗ್ರಾಮದ ಮನೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಇತರೆ ಆರೋಪಿಗಳೊಂದಿಗೆ ಸೇರಿ ಕಬ್ಬಿಣದ ರಾಡುಗಳಿಂದ ತಲೆಗೆ ಹೊಡೆದು, ಕುತ್ತಿಗೆ ಹಿಸುಕಿ ಕೊಲೆ ಮಾಡಿ ಮೃತದೇಹವನ್ನು ಚೀಲದಲ್ಲಿ ಹಾಕಿ ಕಾರಿನ ಡಿಕ್ಕಿಯಲ್ಲಿಟ್ಟು ಸಾಗಿಸಿದ್ದಾರೆ. ಸುದೀಪ, ರಮೇಶ ಹಾಗೂ ಸಂಗನಗೌಡ ಕಾರಿನಲ್ಲಿ ಮೃತದೇಹವನ್ನು ವಿಜಯಪುರದ ಕಡೆಗೆ ಕೊಂಡೊಯ್ದಿದ್ದು, ಮಾರ್ಗಮಧ್ಯೆ ಪೊಲೀಸರ ಕಣ್ತಪ್ಪಿಸಲು ಆಲಮಟ್ಟಿ ಹಾಗೂ ವಿಜಯಪುರ ಟೋಲ್‌ಗಳನ್ನು ತಪ್ಪಿಸಿ ಒಳಮಾರ್ಗಗಳ ಮೂಲಕ ಪ್ರಯಾಣಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ದೇಹ ತುಂಡರಿಸಿ ಟ್ರಂಕ್‌ಗಳಲ್ಲಿ ತುಂಬಿ ಬಾವಿಗೆ ಎಸೆದರು:ವಿಜಯಪುರ ನಗರದ ಹೊರವಲಯದ ಕೈಗಾರಿಕಾ ಪ್ರದೇಶದ ಸಮೀಪದ ಲೇಔಟ್‌ನಲ್ಲಿರುವ ಬಾವಿಯ ಬಳಿಗೆ ಮೃತದೇಹ ಒಯ್ದಿದ್ದು, ಅಲ್ಲಿಗೆ ಐದನೇ ಮತ್ತು ಆರನೇ ಆರೋಪಿಗಳನ್ನು ಕರೆಸಿಕೊಂಡಿದ್ದು, ಕೊಡಲಿ ಹಾಗೂ ಎರಡು ಟ್ರಂಕ್‌ಗಳನ್ನು ಸ್ಥಳಕ್ಕೆ ತಂದಿದ್ದು, ಕೊಡಲಿಯಿಂದ ಮೃತದೇಹ ತುಂಡರಿಸಿ, ಅವಶೇಷಗಳನ್ನು ಎರಡು ಟ್ರಂಕ್‌ಗಳಲ್ಲಿ ತುಂಬಿ ಟ್ರಂಕ್‌ಗಳಿಗೆ ಕಲ್ಲುಗಳನ್ನು ಕಟ್ಟಿ, ಬಾವಿಗೆ ಎಸೆದಿದ್ದಾರೆ ಎಂದು ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದಿದೆ.

ಬಂಧಿತ ಆರೋಪಿಗಳ ವಿಚಾರಣೆ ಹಾಗೂ ತನಿಖೆಯಿಂದ ದೊರೆತ ಸುಳಿವಿನ ಆಧಾರದ ಮೇಲೆ ಪೊಲೀಸರು ವಿಜಯಪುರ ನಗರದ ಹೊರವಲಯದಲ್ಲಿರುವ ಬಾವಿ ಪತ್ತೆಹಚ್ಚಿ ಬಾವಿಯೊಳಗೆ ಎಸೆಯಲಾಗಿದ್ದ ಎರಡು ಟ್ರಂಕ್‌ ಹೊರತೆಗೆದು, ಅವುಗಳಲ್ಲಿದ್ದ ಅಶೋಕ ಅಂಗಡಿಯ ಮೃತದೇಹದ ಅವಶೇಷ ವಶಪಡಿಸಿಕೊಂಡಿದ್ದಾರೆ.

ಮೃತದೇಹವನ್ನು ತುಂಡರಿಸಲು ಬಳಸಿದ ಕೊಡಲಿ, ಕೊಲೆಗೆ ಬಳಸಿದ ಕಬ್ಬಿಣದ ರಾಡುಗಳು, ಮೃತದೇಹ ಸಾಗಣೆ ಹಾಗೂ ವಿಲೇವಾರಿಗೆ ಬಳಸಿದ ಎರಡು ಟ್ರಂಕ್‌ಗಳು ಸೇರಿ ಕೃತ್ಯಕ್ಕೆ ಸಂಬಂಧಿಸಿದ ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಾಗಲಕೋಟೆ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿದ್ದಾರ್ಥ ಗೋಯಲ್, ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ ಎಂ. ಹಾಗೂ ಹುನಗುಂದ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಸಂತೋಷ ಬಟ್ಟಿ ಅವರ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆಯಲ್ಲಿ ಹುನಗುಂದ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕ ಶರಣಬಸಪ್ಪ ಆಜೂರ ಅವರ ನೇತೃತ್ವದಲ್ಲಿ ಹುನಗುಂದ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಪ್ರಕರಣದ ತನಿಖೆ ನಡೆಸಿದ್ದಾರೆ.