ಸಾರಾಂಶ
ಅಂಕೋಲಾ:
ಪ್ರಜಾಪ್ರಭುತ್ವ ವ್ಯವಸ್ಥೆ ವಿರೋಧಿಸುವ, ಸಂವಿಧಾನ ಬದಲಿಸುತ್ತೇನೆ ಎನ್ನುವ ಮಾತುಗಳನ್ನಾಡುವ ಅನಂತಕುಮಾರ ಹೆಗಡೆ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕು. ಅವರಿಗೆ ಸರಿಯಾದ ಶಾಸ್ತ್ರಿ ನಾವು ಮಾಡುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮ, ಸಂಸ್ಕ್ರತಿ ಪ್ರೀತಿಸುವ ಜನರು ಕರಾವಳಿ ಭಾಗದಲ್ಲಿ ಹೆಚ್ಚಿದ್ದಾರೆ. ಅವರ ಭಾವನೆಗಳೊಂದಿಗೆ ಚೆಲ್ಲಾಟವಾಡಿ ರಾಜಕೀಯ ಲಾಭ ಪಡೆಯುವುದು ಬಿಜೆಪಿಯ ಕೆಟ್ಟ ಗುಣ. ಹಿಂದಿನಂತೆ ಕೋಮು ಸೌಹಾರ್ದತೆ ಕದಡುವವರಿಗೆ ಜನರ ಮನ್ನಣೆ ಸಿಗದು ಎಂದರು.ನಾಲ್ಕು ವರ್ಷ ಜನರಿಂದ ದೂರವಿದ್ದು ಚುನಾವಣೆ ಸಮೀಪಿಸಿದಾಗ ಸಮಾಜದ ಸಾಮರಸ್ಯ ಕದಡುವ ಮಾತುಗಳನ್ನಾಡಲು ಬರುವವರನ್ನು ದೂರ ಇಡಬೇಕು ಎಂದು ಜನರಿಗೆ ಕರೆ ನೀಡಿದ ಮಧು, ವಿಧಾನಸಭೆ ಚುನಾವಣೆಯಲ್ಲಿ ಭರವಸೆ ನೀಡಿ ಗೆಲುವು ಸಾಧಿಸಿದ್ದೇವು. ಭರವಸೆ ಈಡೇರಿಸಿದ ವಿಶ್ವಾಸದಲ್ಲಿ ಲೋಕಸಭೆ ಚುನಾವಣೆಗೆ ಮತ ಕೇಳಲಿದ್ದೇವೆ. ಜನರು ಅಭೂತಪೂರ್ವ ಗೆಲುವು ನೀಡುವ ನಂಬಿಕೆ ಇದೆ. ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣಕನ್ನಡ ಸೇರಿದಂತೆ ಆರು ಜಿಲ್ಲೆಗಳಲ್ಲಿ ಓಡಾಟ ನಡೆಸಿ ಪಕ್ಷ ಸಂಘಟಿಸುವಂತೆ ವರಿಷ್ಠರು ಸೂಚಿಸಿದ್ದಾರೆ. ಅದನ್ನು ನಿಭಾಯಿಸಲು ಈಗಾಗಲೇ ಕಾರ್ಯಪ್ರವೃತ್ತನಾಗಿದ್ದೇನೆ ಎಂದರು.ರಾಜ್ಯದಲ್ಲಿ 40 ಸಾವಿರ ಶಿಕ್ಷಕರ ಕೊರತೆ ಇದೆ. ಶಿಕ್ಷಕರ ನೇಮಕಾತಿಗೆ ಒಪ್ಪಿಗೆ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ ಪ್ರಶ್ನೆಗೆ ಉತ್ತರಿಸಿದರು.ಪ್ರತಿ ವರ್ಷ ರಾಜ್ಯದಲ್ಲಿ 20 ಸಾವಿರ ಶಿಕ್ಷಕರಿಗೆ ತಾಂತ್ರಿಕ ತರಬೇತಿ ನೀಡಲು ಅಜೀಂ ಪ್ರೇಮ್‌ಜಿ ಫೌಂಡೇಶನ್ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಮುಂಬರುವ ಶೈಕ್ಷಣಿಕ ವರ್ಷದಿಂದ ತರಬೇತಿ ಆರಂಭಗೊಳ್ಳಲಿದೆ ಎಂದರು.ಬಿಜೆಪಿ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿತ್ತು. ಕೇಂದ್ರ ಸರ್ಕಾರದ ತೆರಿಗೆ ನಿಯಮ, ತಪ್ಪು ಆರ್ಥಿಕ ನಿರ್ಧಾರದಿಂದ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಗ್ಯಾರಂಟಿಗಳು ನೆರವಾದವು. ಬಡವರಿಗೆ ನೀಡುವ ದುಡ್ಡು ಮಾರುಕಟ್ಟೆಯಲ್ಲಿ ಚಲಾವಣೆಯಾಗುತ್ತದೆ. ಇದರಿಂದ ಆರ್ಥಿಕತೆ ಚುರುಕುಗೊಳ್ಳಲಿದೆ ಎಂದು ಹೇಳಿದರು.
ಶಾಸಕರಾದ ಸತೀಶ ಸೈಲ್, ಭೀಮಣ್ಣ ನಾಯ್ಕ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಾಯಿ ಗಾಂವಕರ, ಮಹಿಳಾ ಅಧ್ಯಕ್ಷೆ ಸುಜಾತಾ ಗಾಂವಕರ, ರಮಾನಂದ ನಾಯಕ ಉಪಸ್ಥಿತರಿದ್ದರು.