ನಗುಮೊಗವಿಲ್ಲದವರು ಮನುಷ್ಯರೇ ಆಗಬಾರದು: ಗೊ.ರು.ಚನ್ನಬಸಪ್ಪ

| Published : Jan 28 2025, 12:47 AM IST

ಸಾರಾಂಶ

ಮಂಡ್ಯದಲ್ಲಿ ದಾಖಲೆಯ ಸಮ್ಮೇಳನ ನಡೆಯಿತು, ಇದರ ನಾಯಕತ್ವ ವಹಿಸಿದ ಎನ್‌.ಚಲುವರಾಯಸ್ವಾಮಿ ಅವರು ಸೇರಿದಂತೆ ಉಪಸಮಿತಿಯವರಿಗೆಲ್ಲರಿಗೂ ನಮಿಸುತ್ತೇನೆ, ಸಾಮಾನ್ಯವಾಗಿ ಅದೃಷ್ಟ ಇದ್ದವರಿಗೆ ಗೆಲುವು ದೊರೆಯುತ್ತದೆ. ನಾನು ಕೂಡ ಅದೃಷ್ಟವಂತನೇ ಏಕೆಂದರೆ ಬಯಸದೇ ಬಂದ ಭಾಗ್ಯವು ಸಮ್ಮೇಳನದಲ್ಲಿ ಸಿಕ್ಕಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ನಗುಮುಖ ಇಲ್ಲದವರು ಜನಪ್ರತಿನಿಧಿ, ಮಠಾಧಿಪತಿ, ಅತ್ತೆ-ಸೊಸೆ ಆಗಬಾರದು, ಒಟ್ಟಿನಲ್ಲಿ ನಗುಮುಖವಿಲ್ಲದೇ ಇರುವವರು ಮನುಷ್ಯರೇ ಆಗಬಾರದು ಎಂದು ಎಂಬತ್ತೇಳನೇ ಅಖಿಲ ಭಾರತ ಕನ್ನಡ ಸಾಹಿತ್ಯದ ಸಮ್ಮೇಳನಾಧ್ಯಕ್ಷರಾಗಿದ್ದ ಗೊ.ರು.ಚನ್ನಬಸಪ್ಪ ಅವರು ಹೇಳುವ ಮೂಲಕ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು.

ನಗರದ ಮಂಡ್ಯ ವಿವಿ ಆವರಣದಲ್ಲಿ ಮಂಡ್ಯ ಜಿಲ್ಲಾ ನಾಗರಿಕ ಅಭಿನಂದನೆ ಸಮಿತಿ ಮತ್ತು ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್‌ ಸಹಯೋಗದಲ್ಲಿ ಭಾನುವಾರ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿನ ರೂವಾರಿ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಮತ್ತು ಜಿಲ್ಲಾ ಶಾಸಕರು, ಅಧಿಕಾರಿಗಳು ಹಾಗೂ ಕಸಪಾ ಅಧ್ಯಕ್ಷರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ನಗು ಮನಸ್ಸಿಗೆ ನಿರಾಳ, ಸಮಾಧಾನವನ್ನು ನೀಡುತ್ತದೆ. ಸುತ್ತಮುತ್ತಲಿನ ವಾತಾವರಣ, ಅಲ್ಲಿರುವವರನ್ನೆಲ್ಲಾ ಸಂತೋಷಪಡಿಸುತ್ತದೆ. ಆ ಕಲೆಯನ್ನು ಎಲ್ಲರೂ ರೂಢಿಸಿಕೊಳ್ಳಬೇಕು. ನಗುವಿಲ್ಲದಿರುವ ಮನುಷ್ಯ ಮನುಷ್ಯನೇ ಅಲ್ಲ ಎಂದು ಅಭಿಪ್ರಾಯಪಟ್ಟರು.

ಮಂಡ್ಯದಲ್ಲಿ ದಾಖಲೆಯ ಸಮ್ಮೇಳನ ನಡೆಯಿತು, ಇದರ ನಾಯಕತ್ವ ವಹಿಸಿದ ಎನ್‌.ಚಲುವರಾಯಸ್ವಾಮಿ ಅವರು ಸೇರಿದಂತೆ ಉಪಸಮಿತಿಯವರಿಗೆಲ್ಲರಿಗೂ ನಮಿಸುತ್ತೇನೆ, ಸಾಮಾನ್ಯವಾಗಿ ಅದೃಷ್ಟ ಇದ್ದವರಿಗೆ ಗೆಲುವು ದೊರೆಯುತ್ತದೆ. ನಾನು ಕೂಡ ಅದೃಷ್ಟವಂತನೇ ಏಕೆಂದರೆ ಬಯಸದೇ ಬಂದ ಭಾಗ್ಯವು ಸಮ್ಮೇಳನದಲ್ಲಿ ಸಿಕ್ಕಿತು. ಇಲ್ಲಿ ಅವಿಸ್ಮರಣೀಯವಾಗಿ ಸಮ್ಮೇಳನಕ್ಕಾಗಿ ದುಡಿದವರಿಗೆಲ್ಲ ಅಭಿನಂದಿಸುತ್ತಿರುವುದೇ ಒಂದು ಅದೃಷ್ಟ ಎಂದು ವಿಶ್ಲೇಷಿಸಿದರು.

ಮಂಡ್ಯದ ನೆಲಕ್ಕೆ ಸಮ್ಮೇಳನದ ಯಶಸ್ಸು ಸಲ್ಲಬೇಕು. ಇದಕ್ಕೆಲ್ಲ ಶ್ರಮವಹಿಸಿ ಕೆಲಸ ಮಾಡಿದ ಕನ್ನಡಾಭಿಮಾ‌ನಿಗಳಿಗೆ ಇದು ಸಲ್ಲಬೇಕು. ನಾನು ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಸಮ್ಮೇಳನಕ್ಕೆ ಸರ್ಕಾರ ಪ್ರವೇಶ ಮಾಡಿರಲಿಲ್ಲ, ಇವತ್ತಿಗೂ ಪ್ರವೇಶ ಮಾಡಿಲ್ಲ. ಆದರೂ ಇತಿಹಾಸದಲ್ಲಿ ಕಂಡುಕೇಳರಿಯದಂತೆ ಅಭೂತಪೂರ್ವ ಬೆಂಬಲ ರಾಜಕಾರಣಿಗಳಿಂದ ಸಿಕ್ಕಿತು, ಸಮ್ಮೇಳನದ ವೇದಿಕೆ ರಾಜಕಾರಣಕ್ಕೆ ಬಳಕೆಯಾಗದಂತೆ ಕಂಡಿದ್ದು ಸಮ್ಮೇಳನದ ವಿಶೇಷವಾಗಿದೆ. ಕನ್ನಡ ನುಡಿ ಹಾಗೂ ಸಾಂಸ್ಕೃತಿಕ ಜಾತ್ರೆಯಲ್ಲಿ ಕನ್ನಡಿಗರು ಭಾಗವಹಿಸಿ ತಮ್ಮ ಮನೆಯ ಶುಭ ಸಮಾರಂಭವೆಂಬಂತೆ ಓಡಾಡಿದ್ದಾರೆ ಎಂದು ಶ್ಲಾಘಿಸಿದರು.

ಚಿಂತಕ ಪ್ರೊ.ಎಂ.ಕೃಷ್ಣೇಗೌಡ ಮಾತನಾಡಿ, ಸರ್ಕಾರದ ನೆರವಿಲ್ಲದೆ ಸಾಹಿತ್ಯ ಸಮ್ಮೇಳನಗಳನ್ನು ನಡೆಸಲಾಗದೆಂಬ ಪರಿಸ್ಥಿತಿಗೆ ಸಾಹಿತ್ಯ ಪರಿಷತ್ತು ಮತ್ತು ಸಾಹಿತಿಗಳು ತಂದು ನಿಲ್ಲಿಸಿದ್ದಾರೆ. ಸಮ್ಮೇಳನಗಳನ್ನು ನಡೆಸುವುದು ಅಷ್ಟು ಸುಲಭದ ಮಾತಲ್ಲ. ಸರ್ಕಾರಕ್ಕೆ ಅದರದ್ದೇ ಆದ ಜವಾಬ್ದಾರಿಗಳಿರುತ್ತವೆ, ಅದರ ನಡುವೆಯೂ ಸಚಿವರು ಮತ್ತು ಶಾಸಕರುಗಳಿಗೂ ಕೆಲಸಗಳಿರುತ್ತವೆ. ಸಮ್ಮೇಳನಗಳನ್ನು ಇವರೇ ನಡೆಸಬೇಕೆನ್ನುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪ‍ಡಿಸಿದರು.

ಗೋಕಾಕ್‌ ಚಳವಳಿ ನಡೆಯುತ್ತಿದ್ದ ಸಂದರ್ಭದಲ್ಲಿ ಸಾಹಿತಿಗಳು ಪ್ರತಿಭಟನೆ ನಡೆಸುತ್ತಿದ್ದರು, ಸಾಹಿತಿಗಳನ್ನು ನಿಯಂತ್ರಿಸುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಅವರನ್ನು ಸಿಲ್ಕ್‌ ದಾರದಲ್ಲಿ ಕಟ್ಟಿಟ್ಟುಕೊಂಡು ಬಹಳ ನಾಜೂಕಾಗಿ ನಿರ್ವಹಣೆ ಮಾಡಬೇಕೆಂಬುದನ್ನು ತಿಳಿದುಕೊಂಡೆ. ಇಲ್ಲವಾದರೆ ಬೇರೆ ಇನ್ನಾವುದೇ ಹಗ್ಗದಿಂದ ಕಟ್ಟಲು ಸಾಧ್ಯವಾಗುವುದಿಲ್ಲ ಎಂದುಕೊಂಡಿದ್ದೆ. ಆದರೆ, ಇಲ್ಲಿ ಜಿಲ್ಲಾ ಉಸ್ತವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಸಮ್ಮೇಳನವನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸಿರುವುದನ್ನು ನಾವು ಕಾಣುತ್ತೇವೆ ಜೊತೆಗೆ ಅಧಿಕಾರ ಮತ್ತು ಹಣಕ್ಕೆ ಬೆಲೆ ಕೊಡದೆ ಪ್ರಬುದ್ಧವಾಗಿ ಸಮ್ಮೇಳನ ನಡೆಸಿಕೊಟ್ಟು ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದರು.

ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪಂಚಾಯ್ತಿ ಸಿಇಒ ಶೇಖ್‌ ತನ್ವೀರ್‌ ಆಸಿಫ್‌, ಕಸಾಪ ಪದಾಧಿಕಾರಿಗಳು ಸೇರಿದಂತೆ ಹಲವು ಸಂಘ-ಸಂಸ್ಥೆಯವರು ಸಮ್ಮೇಳನದ ಯಶಸ್ಸಿಗಾಗಿ ದುಡಿದಿದ್ದಾರೆ. ಸಾಹಿತ್ಯ ಸಮ್ಮೇಳನ ಮಾಡಲು ಇಷ್ಟೊಂದು ಜಾತ್ರೆ ಕಟ್ಟಬೇಕಾ ಎನ್ನುವ ಪ್ರಶ್ನೆಯಿದೆ. ಸಾಹಿತ್ಯದ ವಿಷಯಗಳು ಚರ್ಚೆಯಾಗಬೇಕು ನಿಜ. ಆದರೆ, ಊಟದ ವಿಚಾರಗಳೇ ಸಾಹಿತ್ಯದಲ್ಲಿ ಚರ್ಚೆಯಾಗುವುದು ತರವಲ್ಲ. ಇವೆಲ್ಲವನ್ನೂ ನಿಭಾಯಿಸಿಕೊಂಡು ತೆಗೆದುಕೊಂಡು ಹೋದ ಜಿಲ್ಲಾ ಉಸ್ತುವಾರಿ ಸಚಿವರ ಕೆಲಸ ಮೆಚ್ಚುವಂತಾಗಿದೆ ಎಂದರು.

ಆದಿಚುಂಚನಗಿತಿ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಅವರು ಸಮ್ಮೇಳನದಲ್ಲಿ ದುಡಿದವರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಪಿ.ರವಿಕುಮಾರ್‌, ವಿಧಾನ ಪರಿಷತ್‌ ಸದಸ್ಯ ಮಧು ಜಿ.ಮಾದೇಗೌಡ, ಮುಖಂಡರಾದ ಅಪ್ಪಾಜಿಗೌಡ, ಎಚ್‌.ಬಿ.ರಾಮು, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಎ.ಸಿ.ರಮೇಶ್‌, ತಗ್ಗಹಳ್ಳಿ ವೆಂಕಟೇಶ್‌, ಜಿಲ್ಲಾಧಿಕಾರಿ ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಕಸಾಪ ಜಿಲ್ಲಾ ಸಂಚಾಲಕಿ ಮೀರಾ ಶಿವಲಿಂಗಯ್ಯ ಭಾಗವಹಿಸಿದ್ದರು.