ಸೇವೆ ಮಾಡಲಿಚ್ಚಿಸದವರು ಗಂಟುಮೂಟೆ ಕಟ್ಟಿ

| Published : Apr 02 2025, 01:04 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಕ್ಷೇತ್ರದಲ್ಲಿ ಜನರ ಸಮಸ್ಯೆಗಳಿಗೆ ಸೂಕ್ತ ಸಮಯಕ್ಕೆ ಸ್ಪಂದಿಸಿ ಸರ್ಕಾರಿ ಸೌಲಭ್ಯಗಳನ್ನು ಒದಗಿಸಲು ತಾಲೂಕಿನ ಎಲ್ಲ ಅಧಿಕಾರಿಗಳು ಮುಂದಾಗಬೇಕು. ಜನರ ಸೇವೆ ಮಾಡಲು ಇಚ್ಛೆ ಇಲ್ಲದವರು ಗಂಟು ಮೂಟೆ ಕಟ್ಟಿಕೊಂಡು ಹೋಗಿ. ನನ್ನ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕನಸು ಕಟ್ಟಿಕೊಂಡವನು ನಾನು. ಮಾದರಿ ಮತಕ್ಷೇತ್ರವಾಗಿಸಲು ಸಹಕಾರ ನೀಡಿ ಎಂದು ಶಾಸಕ ಹಾಗೂ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಕ್ಷೇತ್ರದಲ್ಲಿ ಜನರ ಸಮಸ್ಯೆಗಳಿಗೆ ಸೂಕ್ತ ಸಮಯಕ್ಕೆ ಸ್ಪಂದಿಸಿ ಸರ್ಕಾರಿ ಸೌಲಭ್ಯಗಳನ್ನು ಒದಗಿಸಲು ತಾಲೂಕಿನ ಎಲ್ಲ ಅಧಿಕಾರಿಗಳು ಮುಂದಾಗಬೇಕು. ಜನರ ಸೇವೆ ಮಾಡಲು ಇಚ್ಛೆ ಇಲ್ಲದವರು ಗಂಟು ಮೂಟೆ ಕಟ್ಟಿಕೊಂಡು ಹೋಗಿ. ನನ್ನ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕನಸು ಕಟ್ಟಿಕೊಂಡವನು ನಾನು. ಮಾದರಿ ಮತಕ್ಷೇತ್ರವಾಗಿಸಲು ಸಹಕಾರ ನೀಡಿ ಎಂದು ಶಾಸಕ ಹಾಗೂ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.

ತಾಲೂಕಿನ ಕುಂಟೋಜಿ ಗ್ರಾಪಂ ವ್ಯಾಪ್ತಿಯ ಕುಂಟೋಜಿ ಹಾಗೂ ಅಬ್ಬಿಹಾಳ ಗ್ರಾಮದಲ್ಲಿ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಉತ್ತಮ, ಜನಪರ ಆಡಳಿತ ನಡೆಸುತ್ತಿದೆ. ಆದರೆ ವಿರೋಧ ಪಕ್ಷದವರು ಗ್ಯಾರಂಟಿಯಿಂದ ಅಭಿವೃದ್ಧಿಗೆ ಹಣವಿಲ್ಲ ಎಂದು ಟೀಕೆ ಮಾಡುತ್ತಿವೆ ಎಂದು ತಿಳಿಸಿದರು.

ಈ ವೇಳೆ ಕುಂಟೋಜಿ ಗ್ರಾಮಸ್ಥರು ಹಲವು ವರ್ಷಗಳಿಂದ ಕೃಷ್ಣಾ ನದಿಯ ಚಿಮ್ಮಲಗಿ ಏತನೀರಾವರಿಯ ಕಾಲುವೆ ನಿರ್ಮಾಣವಾಗಿದ್ದರೂ ನೀರು ಹರಿಸಿಲ್ಲ ಕಾಲುವೆಗೆ ನೀರು ಹರಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು. ತಕ್ಷಣವೇ ಸ್ಪಂದಿಸಿದ ಶಾಸಕ ಸಿ.ಎಸ್.ನಾಡಗೌಡ ಕೇಂದ್ರ ಸರ್ಕಾರ ಕೃಷ್ಣಾ ನದಿಗೆ ಕಟ್ಟಲಾದ ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಬೇಕು. ಜೊತೆಗೆ ಕೆಬಿಜೆಎನ್‌ಎಲ್‌ನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಬೇಕೆಂದು ಹೋರಾಟ ನಡೆಸಿದರು. ಹೀಗಾಗಲೇ ಕೆಲ ತೊಡಕುಗಳಿಗೆ ಕಾರಣವಾಗಿದೆ. ರೈತರ ಆಶಯದಂತೆ ತಾತ್ಕಾಲಿಕವಾಗಿ ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯಲು ನೀರು ಒದಗಿಸುವ ಉದ್ದೇಶದಿಂದ ಕಾಲುವೆಗಳಿಗೆ ನೀರು ಹರಿಸಲಾಗುವುದು. ಬೇಸಿಗೆಯಲ್ಲಿ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ಹಿತದೃಷ್ಠಿಯಿಂದ ಕೆರೆ ತುಂಬಿಸಲು ಕಾಲುವೆಗಳಿಗೆ ಈ ವರ್ಷದ ಕೊನೆಯ ಎಸಿಸಿ ಸಭೆ ನಡೆಸಲಾಗುವುದು. ಈ ವೇಳೆ ಎಲ್ಲ ಕಾಲುವೆಗಳಿಗೆ ನೀರು ಹರಿಸುವ ಬಗ್ಗೆ ಚರ್ಚಿಸಲಾಗುವುದು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿಶೇಷ ನಿಧಿಯಲ್ಲಿ ಸುಮಾರು ₹ 1.20 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದು, ತಾಲೂಕಿನ ಅಬ್ಬಿಹಾಳ ಗ್ರಾಮದಲ್ಲಿ ಸರ್ಕಾರಿ ಶಾಲೆಗೆ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಲಾಗುವುದು. ಜತೆಗೆ ಶಾಲಾ ಮಕ್ಕಳಿಗೆ ಆಟದ ಮೈದಾನ ನಿರ್ಮಿಸಲಾಗುವುದು. ಆದರೆ ಖಾಸಗಿಯವರು ಯಾರಾದರೂ ಜಮೀನು ನೀಡಲು ಮುಂದಾಗಬೇಕು ಎಂದು ಹೇಳಿದರು.

ಗ್ರಾಪಂ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ಉತಾರಗಳನ್ನು ನೀಡದಂತೆ, ಗ್ರಾಮಸಭೆಗಳ ಮೂಲಕ ಅರ್ಹ ಫಲಾನುಭವಿಗಳಿಗೆ ವಸತಿ ರಹಿತ ನಿರಾಶ್ರಿತ ಕುಟುಂಬಗಳಿಗೆ ನೀಡುವಂತೆ ನೋಡಿಕೊಳ್ಳಬೇಕು. ಸರ್ಕಾರದ ರಸ್ತೆಯಾಗಿರಲಿ, ಸೇತುವೆಗಳಾಗಲಿ, ಕಟ್ಟಡಗಳಾಗಲಿ ಗುತ್ತಿಗೆದಾರರು ಗುಣಮಟ್ಟ ಕಾಮಗಾರಿ ನಿರ್ವಹಿಸಬೇಕು. ಗ್ರಾಮಗಳಲ್ಲಿ ಚರಂಡಿ ಸ್ವಚ್ಛತೆ ನೋಡಿಕೊಳ್ಳಬೇಕು ಎಂದು ತಾಪಂ ಇಒ ನಿಂಗಪ್ಪ ಮಸಳಿ ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ತಹಸೀಲ್ದಾರ್‌ ಬಲರಾಮ ಕಟ್ಟಿಮನಿ, ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗುರು ತಾರನಾಳ, ಅಧ್ಯಕ್ಷ ಜಗದೀಶ ಲಮಾಣಿ, ಎಸ್.ಎಮ್.ಪಾಟೀಲ, ಎಂ.ಜೆ.ಧಖಣಿ, ಆರ್.ಎಚ್.ಹಿರೇಗೌಡರ, ಪಶು ಇಲಾಖೆ ಶಿವಾನಂದ ಮೇಟಿ, ತಾಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ, ತಾಲೂಕಾ ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ.ಧರಿಕಾರ, ಪಿಡಿಒ ಪಿ.ಎಸ್.ನಾಯ್ಕೋಡಿ ಸೇರಿದಂತೆ ಹಲವರು ಇದ್ದರು.

ಕೋಟ್‌

ಈ ಹಿಂದಿನ ಸರ್ಕಾರ ಹಣಕಾಸು ಇಲಾಖೆಯ ಯಾವುದೇ ಒಪ್ಪಿಗೆ ಹಾಗೂ ಸರ್ಕಾರದ ಪರವಾನಗಿ ಇಲ್ಲದೇ ಅವೈಜ್ಞಾನಿಕವಾಗಿ ಸುಮಾರು ₹ 2.5 ಲಕ್ಷ ಕೋಟಿಗಳಷ್ಟು ಹಣವನ್ನು ಕಾಮಗಾರಿಗಳಿಗೆ ಬಿಲ್ ಪಾವತಿಸದೆ ಬಾಕಿ ಉಳಿಸಿ ಹೋಗಿದ್ದಾರೆ. ಆ ಸರ್ಕಾರ ಮಾಡಿರುವ ಸಾಲವನ್ನು ಇಂದು ಸಿದ್ದರಾಮಯ್ಯ ಸರ್ಕಾರ ತೀರಿಸುವ ಕಾಲ ಬಂದೋದಗಿದೆ. ಈ ಬಾರಿ ₹ 4 ಲಕ್ಷಕ್ಕೂ ಕೋಟಿ ಬಜೆಟ್‌ ಮಂಡಿಸಿದೆ. ಮುಂದೆ ಹಂತ ಹಂತವಾಗಿ ರಸ್ತೆ ಚರಂಡಿ, ನೀರಾವರಿ, ಶೈಕ್ಷಣಿಕ ಸುಧಾರಣೆ, ಕುಡಿಯುವ ನೀರು, ರೈತರಿಗೆ ಬೀಜ ಗೊಬ್ಬರ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು.

ಸಿ.ಎಸ್‌.ನಾಡಗೌಡ(ಅಪ್ಪಾಜಿ), ಶಾಸಕರು