ವಿಜಯಪುರ: ಇತಿಹಾಸ ತಿಳಿಯದವರು ಇತಿಹಾಸ ನಿರ್ಮಿಸಲು ಸಾಧ್ಯವಾಗುವುದಿಲ್ಲ. ೮೦ ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ನಮ್ಮ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಾಧನೆಯೇ ಇಂದಿನ ಮಕ್ಕಳಿಗೆ ದಾರಿದೀಪ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ವಿ.ಎಂ.ಕಿಶೋರ್ ಕುಮಾರ್ ತಿಳಿಸಿದರು
ವಿಜಯಪುರ: ಇತಿಹಾಸ ತಿಳಿಯದವರು ಇತಿಹಾಸ ನಿರ್ಮಿಸಲು ಸಾಧ್ಯವಾಗುವುದಿಲ್ಲ. ೮೦ ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ನಮ್ಮ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಾಧನೆಯೇ ಇಂದಿನ ಮಕ್ಕಳಿಗೆ ದಾರಿದೀಪ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ವಿ.ಎಂ.ಕಿಶೋರ್ ಕುಮಾರ್ ತಿಳಿಸಿದರು.
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಹಮ್ಮಿಕೊಂಡಿದ್ದ ೨೦೨೬ರ ಸಾಲಿನ ಶಾಲಾ ಪ್ರಾರಂಭೋತ್ಸವ, ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಮತ್ತು ಪ್ರತಿಭಾ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಈ ಶಾಲೆಯಲ್ಲಿ ಓದಿ ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ನಿವೃತ್ತರಾಗಿರುವ ಹಾಗೂ ಸೇವೆ ಸಲ್ಲಿಸುತ್ತಿರುವ ಹಿರಿಯ ವಿದ್ಯಾರ್ಥಿಗಳ ಸಂಪೂರ್ಣ ಮಾಹಿತಿ ಒಳಗೊಂಡ ಸ್ಮರಣ ಸಂಚಿಕೆಯನ್ನು ಸಂಘದ ವತಿಯಿಂದ ಹೊರತರಲಾಗಿದೆ. ವಿದ್ಯಾರ್ಥಿಗಳು ಇದನ್ನು ಓದಿ ಅರಿತುಕೊಂಡಾಗ ಮಾತ್ರ ತಾವು ಎಂತಹ ಪುಣ್ಯದ ನೆಲದಲ್ಲಿ ಕುಳಿತು ವಿದ್ಯಾಭ್ಯಾಸ ಮಾಡುತ್ತಿದ್ದೇವೆ ಎಂಬ ಅರಿವಾಗುತ್ತದೆ. ಇದು ಅವರ ಉನ್ನತ ವಿದ್ಯಾಭ್ಯಾಸಕ್ಕೆ ಪೂರಕವಾಗುತ್ತದೆ ಎಂದು ಕಿಶೋರ್ ಕುಮಾರ್ ಆಶಯ ವ್ಯಕ್ತಪಡಿಸಿದರು.
ಹಿರಿಯ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷ ಎಂ.ಸತೀಶ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಶಾಲೆ ಹಮ್ಮಿಕೊಳ್ಳುವ ಪ್ರತಿಯೊಂದು ಅಭಿವೃದ್ಧಿ ಕಾರ್ಯಕ್ರಮಗಳಿಗೂ ಸಂಘದ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.ಬಿಇಒ ಲಲಿತಮ್ಮ ಮಾತನಾಡಿ, ಶಿಕ್ಷಕರ ನಿರಂತರ ಶ್ರಮದಿಂದಾಗಿ ೨೦೨೫-೨೬ನೇ ಸಾಲಿನಲ್ಲಿ ೧೦ ವಿದ್ಯಾರ್ಥಿಗಳು ಅತ್ಯುತ್ತಮ ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ. ನಮ್ಮ ತಾಲೂಕಿನಲ್ಲಿ ಶಿಕ್ಷಕರಿಗೆ ಉತ್ತಮ ತರಬೇತಿ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಮುಂಬರುವ ದಿನಗಳಲ್ಲಿ ಇನ್ನಷ್ಟು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಬೇಕು ಎಂದು ಕರೆ ನೀಡಿದರು.
ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಇಕ್ಬಾಲ್ ಮಾತನಾಡಿ, ವಿದ್ಯಾರ್ಥಿಗಳು ಪ್ರತಿದಿನವೂ ವಾರ್ಷಿಕ ಪರೀಕ್ಷೆಗೆ ಸಿದ್ಧರಾಗುವಂತೆ ತಯಾರಿ ನಡೆಸಿಕೊಂಡು ಶಾಲೆಗೆ ಬರಬೇಕು. ಆಗ ಮಾತ್ರ ಶೇಕಡಾ ೧೦೦ ರಷ್ಟು ಫಲಿತಾಂಶದೊಂದಿಗೆ ವೈಯಕ್ತಿಕ ಸಾಧನೆ ಮಾಡಲು ಸಾಧ್ಯ ಎಂದರು.ಶಾಲೆಯ ಉಪ ಪ್ರಾಂಶುಪಾಲೆ ಕೋಮಲ ಹಾಗೂ ಪುರಸಭಾ ಸದಸ್ಯೆ ವಿಮಲಾ ಬಸವರಾಜ್ ಮಾತನಾಡಿದರು.
ಇದೇ ವೇಳೆ ೨೦೨೫-೨೬ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಹಾರ ಹಾಕಿ, ಬ್ಯಾಗ್, ಸ್ಮರಣ ಸಂಚಿಕೆ ಹಾಗೂ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.ಇದೇ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿ ದಂಪತಿ ಮಲ್ಲಿಕಾರ್ಜುನ್ ಮತ್ತು ನೀಲಾಂಬಿಕ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಲಲಿತಮ್ಮ ಅವರನ್ನು ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಗೆ ನೂತನ ಶಾಲಾ ಸಮವಸ್ತ್ರ ಹಾಗೂ ಪಠ್ಯ ಪುಸ್ತಕಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಡಯಟ್‌ನ ಉಪನ್ಯಾಸಕರಾದ ವಿನುತ, ಸಿಆರ್‌ಪಿ ದಿನೇಶ್, ಹಿರಿಯ ವಿದ್ಯಾರ್ಥಿಗಳ ಸಂಘದ ಖಜಾಂಚಿ ವಿ.ವಿಶ್ವನಾಥ್, ಸದಸ್ಯರಾದ ನಾಗರಾಜ್, ಹೊನ್ನೂರಪ್ಪ, ಎಂ.ಅನ್ನಪೂರ್ಣಮ್ಮ, ಎನ್.ರುದ್ರಮೂರ್ತಿ, ಎಸ್‌ಡಿಎಂಸಿ ಸದಸ್ಯರಾದ ವೆಂಕಟೇಶ್, ಪದ್ಮ, ಗೋಪಾಲ್, ಪಿಪಿಆರ್ ರಮೇಶ್, ವಿಮಲಾ ಬಸವರಾಜು, ಆರ್‌ಎಂಸಿಟಿ ಮಂಜುನಾಥ್, ಬೆಸ್ಕಾಂ ಎಇಇ ವಿಶ್ವಾಸ್, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಹಡಪದ, ಕಾಲೇಜಿನ ಪ್ರಾಂಶುಪಾಲ ಬೈರೇಗೌಡ ಹಾಗೂ ಶಿಕ್ಷಕ ನಾರಾಯಣ್ ಇತರರು ಉಪಸ್ಥಿತರಿದ್ದರು.