ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೀಸಲಾತಿ ನೀತಿಯಿಂದ ಅನೇಕರು ವಿವಿಧ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರಾಗಿದ್ದಾರೆ. ಮೀಸಲಾತಿ ನೀತಿಯಿಂದ ಉನ್ನತ ಹುದ್ದೆ ಪಡೆದವರಲ್ಲಿ ಅನೇಕರು ಸಂವಿಧಾನಬದ್ಧರಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲದಿರುವುದರಿಂದ ಅಂಬೇಡ್ಕರ್ ಅವರಿಗೆ ಅಗೌರವ ತೋರಿದಂತಾಗುತ್ತಿದೆ. ಸಂವಿಧಾನದ ನೀತಿಯಿಂದ ಉನ್ನತ ಹುದ್ದೆಗೇರಿದವರ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯವಾಗುತ್ತಿದೆ. ಸಂವಿಧಾನ ನೀಡಿದ ಮೀಸಲಾತಿ ನೀತಿಯಿಂದ ಹುದ್ದೆ ಪಡೆದುಕೊಂಡವರು ಸಂವಿಧಾನ ನೀತಿಗೆ ವಿರುದ್ಧವಾದ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿರುವುದರಿಂದ ಅಂಬೇಡ್ಕರ್ ಅವರ ಕನಸಿನ ಭಾರತ ಇನ್ನೂ ನನಸಾಗಲಿಲ್ಲ ಎಂದು ಉರಿಲಿಂಗಿ ಪೆದ್ದಿಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ಅಭಿಪ್ರಾಯಪಟ್ಟರು. ಪಟ್ಟಣ ಗಣಪತಿ ಪೆಂಡಾಲ್ ಆವರಣದಲ್ಲಿ 76ನೇ ವರ್ಷದ ಸಂವಿಧಾನ ದಿನಾಚರಣೆ ವಜ್ರಮಹೋತ್ಸವ ರಾಜ್ಯ ಮಟ್ಟದ ಸಮಾವೇಶ ಉದ್ಘಾಟಿಸಿ, ಬಾಬಾ ಸಾಹೇಬರು ಸಂವಿಧಾನದಲ್ಲಿ ಪ್ರಮುಖ ಮೂರು ಸಲಹೆಗಳನ್ನು ನೀಡಿದ್ದರು. ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ ನೀಡಬೇಕು. ದೇಶವನ್ನು ಜಾತಿ ಅಥವಾ ಧರ್ಮಾಧಾರಿತ ವಾಗಿ ವಿಂಗಡಿಸಬಾರದು. ಪ್ರಭಾಪ್ರಭುತ್ವ ವ್ಯವಸ್ಥೆಯಲ್ಲಿ ವ್ಯಕ್ತಿ ಪೂಜೆ ಮಾಡಿದರೆ ದೇಶದಲ್ಲಿ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ವ್ಯವಸ್ಥೆ ಹಾಳಾಗುತ್ತದೆ ಎಂದು 1949 ನವೆಂಬರ್ 26ರಂದು ಸಂವಿಧಾನವನ್ನು ಸರ್ಮಪಣೆ ಮಾಡಿದ ಸಂದರ್ಭದಲ್ಲೇ ಸಲಹೆ ನೀಡಿದ್ದರೂ ವ್ಯವಸ್ಥೆ ಹಾಳಾಗುತ್ತಿರುವುದನ್ನು ನೋಡುತ್ತಿದ್ದೇವೆ. ಗಣರಾಜ್ಯದ ವ್ಯವಸ್ಥೆಯ ನಮ್ಮ ದೇಶದಲ್ಲಿ ಹಿಂದೂ ರಾಷ್ಟ್ರ ಮತ್ತು ಪ್ರತ್ಯೇಕ ಸಂವಿಧಾನ ರಚನೆ ಕುರಿತು ಮಾತುಗಳು ಕೇಳಿಬರುತ್ತದೆ. ಸ್ವಾತಂತ್ರ್ಯ ಬಂದು 75 ವರ್ಷವಾಗಿದ್ದರೂ ಸಾಮಾಜಿಕ ಸಮಾನತೆಯಿಲ್ಲ. ದೇಶದಲ್ಲಿ ಕೆಲವೆಡೆ ಪರಿಶಿಷ್ಟ ಜನಾಂಗದವರಿಗೆ ನೀರು ಕುಡಿಯಲು ಬಿಡುತ್ತಿಲ್ಲ. ಇಂದಿನ ವ್ಯವಸ್ಥೆಯಲ್ಲಿ ಪರಿಶಿಷ್ಟ ಹಾಗೂ ಶೋಷಿತ ಸಮಾಜದವರು ಉತ್ತಮ ಶಿಕ್ಷಣ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಪರಿಶಿಷ್ಟ ಸಮಾಜಕ್ಕೆ ಇದ್ದ ಮೀಸಲಾತಿಯಲ್ಲಿ ಯಾವುದೇ ಮಾಹಿತಿ ನೀಡದೇ ಶೇ. 10ರಷ್ಟನ್ನು ತೆಗೆದು ಹಾಕಿದರು. ದೇಶದ ಅಖಂಡತೆಯನ್ನು ಕಾಪಾಡುವ ಉದ್ದೇಶದಿಂದ ರಚಿಸಿದ ಸಂವಿಧಾನದ 9 ಕಾಯ್ದೆಯನ್ನು ತಿದ್ದುಪಡಿ ಮಾಡಿ ಹೊಸ ಕಾಯ್ದೆ ರಚಿಸಿದ್ದಾರೆ. ಇತ್ತೀಚಿಗೆ ಮೋಹನ್ ಭಾಗವತ್ ಅವರು ರಾಮಮಂದಿರ ಕಟ್ಟಿದಾಗ ನಮಗೆ ಸ್ವಾತಂತ್ರ್ಯ ಸಿಕ್ಕಿತು ಎಂದರು. ಹಾಗಾದರೆ 1947 ಆಗಸ್ಟ್ 15ರಂದು ಸಿಕ್ಕಿದ್ದೇನು ಎಂದು ಪ್ರಶ್ನಿಸಿದರು.
ಉಡುಪಿಯಲ್ಲಿ ಒಬ್ಬ ಪೊಲೀಸ್ ಕರ್ತವ್ಯ ನಿರ್ವಹಿಸುವಾಗ ದಲಿತ ಎಂಬ ಕಾರಣಕ್ಕೆ ದೇವಾಲಯದಿಂದ ಹೊರಗೆ ಕಳುಹಿಸಿದ್ದಾರೆ. ನಿಮ್ಮಲ್ಲಿ ಒಗ್ಗಟ್ಟಿಲ್ಲದಿದ್ದರೆ ಮುಂದಿನ ದಿನದಲ್ಲಿ ಇನ್ನೂ ಅನೇಕ ಸವಲತ್ತುಗಳಿಂದ ನಾವು ವಂಚಿತರಾಗಬೇಕಾಗುತ್ತದೆ, ನಮ್ಮ ಒಗ್ಗಟ್ಟು ನಮ್ಮ ರಕ್ಷಣೆಗೆ ಸಮರ್ಥವಾಗಿ ಬಳಸಿಕೊಳ್ಳೋಣ. ಇತರರ ಮೇಲೆ ದೌರ್ಜನ್ಯಕ್ಕಲ್ಲ ಎಂದರು.ಸೋಮನಹಳ್ಳಿ ಅಂದಾನಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಸೋಮಶೇಖರ್, ಸಂಚಾಲಕರಾದ ಪಿ.ಎಂ.ಕೃಷ್ಣಪ್ಪ, ಭಾಗ್ಯಮ್ಮ, ಸಿ.ಜನಾರ್ಧನ ಬಾಬು, ಚಂದ್ರಶೇಖರ್. ಎಸ್ಸಿ,ಎಸ್ಟಿ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಐ.ಕೆ.ರಾಮಚಂದ್ರ, ಮಾದಿಗ ದಂಡೋರ ಸಮಿತಿ ಜಿಲ್ಲಾಧ್ಯಕ್ಷ ವಿಜಯ ಕುಮಾರ್, ತಾಲೂಕು ಸಂಚಾಲಕ ಚಿನ್ನಸ್ವಾಮಿ, ಎಚ್.ಡಿ.ಚಂದ್ರಶೇಖರ್, ದಿನೇಶ್, ಸಂತೋಷ್, ಡಿ.ಡಿ.ವರ್ಮನ್ ಇತರರು ಉಪಸ್ಥಿತರಿದ್ದರು.
-----*ಹೇಳಿಕೆ-1
ನಾವು ಸಂವಿಧಾನ ದಿನಾಚರಣೆಯ ವಜ್ರಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿಯೂ ಅಂಬೇಡ್ಕರ್ ಅವರು ಅಂದುಕೊಂಡಂತೆ ಶೋಷಿತರಿಗೆ ನ್ಯಾಯ ಸಿಕ್ಕಿಲ್ಲ. ಇದಕ್ಕೆ ಸಂವಿಧಾನದ ಉಪಯೋಗ ಪಡೆದವರು ಇನ್ನೂ ಮುಖ್ಯವಾಹಿನಿಗೆ ಬಾರದವರನ್ನು ತಮ್ಮ ಜೊತೆಯಲ್ಲಿ ಕರೆದುಕೊಂಡು ಹೋಗದಿರುವುದೇ ಕಾರಣ.- ಚೇತನ್, ನಟ