ಮನ ಶುದ್ಧಿ, ವಿಚಾರ ಶುದ್ಧಿ ಇದ್ದವರು ಭಯ ಪಡಬೇಕಿಲ್ಲ

| Published : Nov 04 2025, 01:15 AM IST

ಸಾರಾಂಶ

ಸಾಣೇಹಳ್ಳಿಯ ನಾಟಕೋತ್ಸದಲ್ಲಿ ದುಮ್ಮಿಯ ಜ್ಞಾನಜ್ಯೋತಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಡಶಾಲೆಯ ಮಕ್ಕಳು ನೃತ್ಯ ರೂಪಕ ನಡೆಸಿಕೊಟ್ಟರು.

ಕನ್ನಡಪ್ರಭವಾರ್ತೆ ಹೊಸದುರ್ಗ

ಯಾರಲ್ಲಿ ಮನ ಶುದ್ಧಿ, ವಿಚಾರ ಶುದ್ಧಿ ಪಂಚೇಂದ್ರಿಯ ಶುದ್ಧಿಯಾಗಿದ್ದರೆ ಅಂತವರು ಭಯ ಪಡಬೇಕಿಲ್ಲ, ಭಯ ಪಡಬೇಕಿರುವುದು ಅಂತರಂಗಕ್ಕೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ಸಾಣೇಹಳ್ಳಿಯ ಶಿವಕುಮಾರ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವದ 2ನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಎಲ್ಲವನ್ನು ಪರಂಪರೆಯೆಂದು ಅನುಸರಿಸಿ ಪ್ರಶ್ನೆ ಮಾಡದಿದ್ದರೆ ವ್ಯಕ್ತಿ ದಾರಿ ತಪ್ಪಲು ಸಾದ್ಯ. ಆಗ ಕೇವಲ ಭೌತಿಕ ಆರೋಗ್ಯ ಕೆಡುವುದರ ಜೊತೆಗೆ ಮಾನಸಿಕ ಆರೋಗ್ಯವೂ ಕೆಡುತ್ತದೆ. ಇಂದಿನ ವೈದ್ಯಕೀಯ ಕ್ರಮಗಳನ್ನು ನೋಡಿದರೆ ಮಾನವೀಯ ಮೌಲ್ಯಗಳು ಕಣ್ಮರೆಯಾಗಿವೆ. ಹಿಂದೆ ವೈದ್ಯರು ರೋಗಿಯ ದೇಹ ಮುಟ್ಟಿ ಪರೀಕ್ಷೆ ಮಾಡುತ್ತಿದ್ದರು, ಆದರೆ ಇಂದು ವ್ಯಕ್ತಿಯ ದೇಹವನ್ನು ಯಂತ್ರಗಳು ಪರೀಕ್ಷೆ ಮಾಡುತ್ತಿವೆ ಎಂದರು.

ಹೊಸದುರ್ಗದ ಕನಕಗುರು ಪೀಠದ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಬಸವ ತತ್ವವನ್ನು ಚಾಚೂ ತಪ್ಪದೆ ಪಾಲಿಸುವ ಮೂಲಕ ಬಸವಣ್ಣನವರ ವಿಚಾರೆಧಾರೆಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಸಾಣೇಹಳ್ಳಿ ಶ್ರೀಗಳು ಮಾಡುತ್ತಿದ್ದಾರೆ. ಅವರಿಗೆ ಅನೇಕ ನಿಂದನೆಗಳು ಬರುತ್ತಿದ್ದಾವೆ ಅವುಗಳಿಗೆ ಅವರು ಎದೆಗುಂದುವುದು ಬೇಕಿಲ್ಲ ಅವರ ಹಿಂದೆ ನಾವಿದ್ದೇವೆ ಎಂದರು.

ಭಾರತ್ ಸೌಟ್ಸ್ ಮತ್ತು ಗೈಡ್ಸ್‌ನ ಮುಖ್ಯಸ್ಥ ಪಿ.ಜಿ.ಆರ್‌ ಸಿಂಧ್ಯಾ ಮಾತನಾಡಿ, ನಾಟಕ ಮನುಷ್ಯನ ಮನಸ್ಸನ್ನು ಪರಿವರ್ತನೆ ಮಾಡುವ ಸಾಧನ. ಆಧುನಿಕ ಉಪಕರಣಗಳಿಂದ ಮನುಷ್ಯನ ಪರಿವರ್ತನೆ ಸಾಧ್ಯವಿಲ್ಲ. ಬಸವಣ್ಣನ ವಿಚಾರಧಾರೆಗಳನ್ನು ರಂಗಭೂಮಿಯ ಮೂಲಕ ನಾಡಿನಾದ್ಯಂತ ಪಸರಿಸುವ ಕೆಲಸವನ್ನು ಪಂಡಿತಾರಾಧ್ಯ ಸ್ವಾಮೀಜಿ ಮಾಡುತ್ತಿದ್ದಾರೆ ಎಂದರು.

ಬಸವಣ್ಣನ ವಿಚಾರಗಳು ಸರ್ವಕಾಲಿಕ ಸತ್ಯಗಳು. ಧರ್ಮ ಜೀವನದ ಪದ್ಧತಿಯನ್ನು ತಿಳಿಸುತ್ತದೆ. ಬಸವಣ್ಣನವರು ಹೊಸ ಧರ್ಮ ಆರಂಭಿಸದೆ ಮಾನವ ಧರ್ಮವನ್ನು ಪ್ರತಿಪಾದಿಸಿದರು. ದೇಶಕ್ಕೆ ಮಾದರಿಯಾಗಿರುವ ಸಂವಿಧಾನ, ಪ್ರಜಾಪ್ರಭುತ್ವವನ್ನು 12ನೇ ಶತಮಾನದಲ್ಲಿಯೇ ಜಾರಿಗೆ ತಂದರು. ಅವರ ವಿಚಾರಗಳನ್ನು ಪರಿಪಾಲಿಸಿದರೆ ಪ್ರಸ್ತುತ ಸಮಾಜದಲ್ಲಿನ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದರು.

ಆದಿ ಜಾಂಬವ ನಿಗಮದ ಅಧ್ಯಕ್ಷ ಜಿ.ಎಸ್‌.ಮಂಜುನಾಥ್‌ ಮಾತನಾಡಿ, ಬಸವಣ್ಣನ ಅನುಯಾಯಿಗಳಿಗೆ 800 ವರ್ಷಗಳಾದರೂ ಧರ್ಮದ ಬಗ್ಗೆ ಅರ್ಥವಾಗಿಲ್ಲ ಎಂದರೆ ಇನ್ನು, ನಮ್ಮಂತ ತಳಸಮುದಾಯಗಳ ಪಾಡೇನು. ಜಾತಿ ಧರ್ಮದ ಬಗ್ಗೆ ಎಲ್ಲಾ ಗೊತ್ತಿದ್ದರೂ ರಾಜಕೀಯ ವ್ಯಕ್ತಿಗಳಾದ ನಾವು ಏನು ಮಾತನಾಡಿದರೂ ತಪ್ಪುಗಳಾಗುತ್ತವೆ ಹಾಗಾಗಿ ನಾವು ಮಾತನಾಡುವುದಕ್ಕೆ ಭಯವಾಗುತ್ತದೆ ಕೆಲವರು ತಲೆಕೆಟ್ಟು ಮಾತನಾಡಿದರೆ ಅಂತವರು ಸೋಲುತ್ತಿದ್ದಾರೆ ಎಂದರು.

ಚಿತ್ರನಟ ನೀನಾಸಂ ಸತೀಶ್‌ ಮಾತನಾಡಿ, ಹಣ ಅಂತಸ್ತು ಅಧಿಕಾರದಿಂದ ಯಾರೂ ದೊಡ್ಡವರಾಗಲ್ಲ ವ್ಯಕ್ತಿಯ ವ್ಯಕ್ತಿತ್ವದಿಂದ ಮಾತ್ರ ಮನುಷ್ಯ ದೊಡ್ಡವರಾಗಲು ಸಾಧ್ಯ. ಮಾತಿನ ಭಯದ ವಾತಾವರಣ ಕೇವಲ ರಾಜಕೀಯ ನಾಯಕರಿಗೆ ಮಾತ್ರವಿಲ್ಲ ಚಿತ್ರನಟರಿಗೂ ಇದೆ . ಇಂದು ಯಾವ ವಿಷಯದ ಬಗ್ಗೆ ಮಾತನಾಡಿದರೂ ಅದರಲ್ಲಿ ತಪ್ಪು ಉಡುಕುವ ಕೆಲಸವಾಗುತ್ತಿದೆ . ಇಲ್ಲಿ ಎಲ್ಲರೂ ಒಬ್ಬರನ್ನೋಬ್ಬರು ಪ್ರೀತಿಸಿ ಬದುಕುವುದನ್ನು ಕಲಿಯಬೇಕಿದೆ ಎಂದರು.

ಹೊನ್ನಾವರದ ಡಾ.ಎಚ್.ಎಸ್.ಅನುಪಮಾ ಕವಲಕ್ಕಿ ಅವರು, ಆರೋಗ್ಯವೇ ಭಾಗ್ಯ ಎಂಬ ವಿಷಯ ಕುರಿತು ಉಪನ್ಯಾಸ ನೀಡುತ್ತಾ ಕಾಯಕ ಮಾಡುವ ಯಾವುದಾದರೂ ಧರ್ಮ ಇದ್ದರೆ ಅದು ಮಾತ್ರ ಬಸವಣ್ಣನ ಧರ್ಮ ಮಾತ್ರ . ಶ್ರಮ ರಹಿತ ಜೀವನ, ಶಿಸ್ತು, ನಿಯಮಿತ ವಿಲ್ಲದ ಬದುಕಿನಿಂದ ಆನಾರೋಗ್ಯ ಉಂಟಾಗುತ್ತಿದೆ ಆರೋಗ್ಯವನ್ನು ಕಳೆದುಕೊಂಡರೆ ಮತ್ತೆ ಪಡೆಯಬಹುದು ಆದರೆ ಶೀಲವನ್ನು ಕಳೆದುಕೊಂಡರೆ ಮತ್ತೆ ಪಡೆಯಲು ಸಾಧ್ಯವಿಲ್ಲ ಎಂದರು. ಅತಿಥಿಗಳಾಗಿ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶ ಎಚ್‌ ಬಿಲ್ಲಪ್ಪ, ಅರುಣ್ ಗೋವಿಂದಪ್ಪ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗ ಅಧ್ಯಕ್ಷ ಪಿ ರಘು, ಷಣ್ಮುಖಪ್ಪ ಹನುಮಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಹಳೆ ಊದುವ, ಉರುಮೆ ಬಾರಿಸುವ ಕಲಾವಿದ ರಾದ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹನುಮಂತಪ್ಪ ಚೀಳಂಗಿ ಅವರನ್ನು ಸನ್ಮಾನಿಸಲಾಯಿತು. ಪ್ರಾರಂಭದಲ್ಲಿ ದುಮ್ಮಿಯ ಜ್ಞಾನಜ್ಯೋತಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಡಶಾಲೆಯ ಮಕ್ಕಳು ನೃತ್ಯ ರೂಪಕ ನಡೆಸಿಕೊಟ್ಟರು. ಸಭಾ ಕಾರ್ಯಕ್ರಮದ ನಂತರ ರವಿಕಿರಣ್ ಆರ್ ಬಳ್ಳಗೆರೆ ರಚನೆಯ ದಿನೇಶ್ ಚಮ್ಮಾಳಿಗೆ ವಿನ್ಯಾಸ ಹಾಗೂ ನಿರ್ದೇಶನದ ಆಳಿದ ಮಾಸ್ವಾಮಿಗಳು ಎಂಬ ನಾಟಕವನ್ನು ಮೈಸೂರಿನ ನಾಲ್ವಡಿ ಸೋಶಿಯಲ್ ಕಲ್ಬರಲ್ ಮತ್ತು ಎಜ್ಯುಕೇಷನಲ್ ಟ್ರಸ್ಟ್ ನ ಕಲಾವಿದರು ಅಭಿನಯಿಸಿದರು.