ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ವಿಷಯ ಅದು ತನಿಖೆ ಹಂತದಲ್ಲಿದೆ. ಅದರ ಬಗ್ಗೆ ಮಾತಾಡುವ ಸಂದರ್ಭ ಇದಲ್ಲ. ಆದರೆ ಯಾರು ಉಪ್ಪು ತಿಂದಿದ್ದಾರೆ ಅವರು ನೀರು ಕುಡಿಯುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಹೇಳಿದಾರಲ್ಲ ಸ್ವಲ್ಪ ಕಾದು ನೋಡಿ. ಯಾರ್‍ಯಾರು ತಪ್ಪಿತಸ್ಥರಿದ್ದಾರೆ, ಯಾರು ಆರೋಪಿಗಳಿದ್ದಾರೆ, ಯಾರು ಈ ಕೆಲಸದಲ್ಲಿ ಭಾಗವಹಿಸಿದ್ದಾರೆ ಎಲ್ಲವೂ ಸತ್ಯಾಸತ್ಯತೆ ಹೊರಗೆ ಬರುತ್ತದೆ ಎಂದರು.

ಪ್ರಕರಣವನ್ನು ಸಿಬಿಐಗೆ ಕೊಡಬೇಕೆಂದ ಬಿಜೆಪಿಗರ ಆಗ್ರಹಕ್ಕೆ ಉತ್ತರಿಸಿದ ಸಚಿವರು, ನಮ್ಮಲ್ಲೇ ಸಿಐಡಿ ಇದೆ. ಎಸ್ಐಟಿ, ಪೊಲೀಸ್ ಇಲಾಖೆ ಇದೆ. ರಾಜ್ಯ ಇಲಾಖೆಗಳು ಸಮರ್ಥವಾಗಿವೆ. ತನಿಖೆ ಮಾಡಿ ಸತ್ಯಾಸತ್ಯತೆ ಹೊರ ಬರುತ್ತದೆ. ಸಿದ್ದರಾಮಯ್ಯ ಅವರ ಬಗ್ಗೆ ಕುಮಾರಸ್ವಾಮಿ ವಿನಾಕಾರಣ ಮಾತಾಡುತ್ತಾರೆ. ಹಿಂದೆ ಸಿದ್ದರಾಮಯ್ಯ ಅವರನ್ನು ಬೈದು. ಡಿ.ಕೆ. ಶಿವಕುಮಾರ್ ಅವರನ್ನು ಎತ್ತಿ ಕಟ್ಟಿದರು. ಈಗ ಡಿ.ಕೆ. ಶಿವಕುಮಾರ್ ಅವರನ್ನು ತೆಗಳಿ ಸಿದ್ದರಾಮಯ್ಯ ಅವರನ್ನು ಎತ್ತಿ ಕಟ್ಟುತ್ತಿದ್ದಾರೆ. ಇದು ರಾಜಕಾರಣ. ಸತ್ಯಾಸತ್ಯತೆ ಹೊರಬರಲಿ. ಆಗ ಮಾತಾಡೋದು ಸೂಕ್ತ ಎಂದು ಹೇಳಿದರು.

ಸಿಜೆಪಿ, ಕಾಂಗ್ರೆಸ್ ಎರಡೂ ಒಂದೇ ಎಂಬ ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆ ಸಮರ್ಥನೆ ಮಾಡಿಕೊಂಡ ಕಾಶಪ್ಪನವರ, ನೋಡ್ರಿ ಸಿಜೆಪಿ ಮತ್ತು ಕಾಂಗ್ರೆಸ್ ಪಾರ್ಟಿ ತತ್ವ ಒಂದೇ ಅಂತ ಹೇಳಿದ್ದಾರೆ. ಆದರೆ ಎರಡೂ ಒಂದೇ ಅಲ್ಲ. ಅವರು ದೇಶದ ಆಗುಹೋಗುಗಳ ಕುರಿತು ಹೋರಾಟ ಮಾಡುತ್ತಿದ್ದಾರೆ. ನ್ಯಾಯಯುತವಾಗಿ ಸಂವಿಧಾನಾತ್ಮಕವಾಗಿ ಅವರ ಹಕ್ಕಿಗಾಗಿ ವಿದ್ಯಾರ್ಥಿಗಳು ಹೋರಾಟ ಮಾಡುತ್ತಿದ್ದಾರೆ. ಅದನ್ನು ಕೇಂದ್ರ ಸರ್ಕಾರ ಆಗಲಿ ರಾಜ್ಯ ಸರ್ಕಾರ ಆಗಲಿ ಈಡೇರಿಸಬೇಕಲ್ವಾ? ಆದರೆ ಸಿಜೆಪಿ ರಾಜ್ಯ ಸರ್ಕಾರದ ಜೊತೆ ಯಾವುದೇ ಹೊಂದಾಣಿಕೆ ಇಲ್ಲ ಎಂದರು.