ಸಾರಾಂಶ
ಉಳ್ಳವರು ತಮ್ಮ ಮನೆ, ಅಂಗಡಿಗಳಿಗೆ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಬೇಕು
ಕನ್ನಡಪ್ರಭ ವಾರ್ತೆ ರಟ್ಟೀಹಳ್ಳಿ
ಇಂದಿನ ದಿನಗಳಲ್ಲಿ ಸಾರ್ವಜನಿಕರು ಲಕ್ಷಾಂತರ ಹಣ ಖರ್ಚು ಮಾಡಿ ಮನೆ ಕಟ್ಟುತ್ತಾರೆ, ಆದರೆ ಸ್ವಲ್ಪ ಹಣ ಖರ್ಚು ಮಾಡಿ ಸಿಸಿ ಕ್ಯಾಮರಾ ಹಾಕಲು ಹಿಂದೇಟು ಹಾಕುತ್ತಾರೆ. ಇದು ಸರಿಯಲ್ಲ. ಉಳ್ಳವರು ತಮ್ಮ ಮನೆ, ಅಂಗಡಿಗಳಿಗೆ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಯು.ಬಿ. ಬಣಕಾರ ಮನವಿ ಮಾಡಿದರು.ಪಟ್ಟಣ ಪಂಚಾಯಿತಿ ಆವರಣದಲ್ಲಿ ಆಯೋಜಿಸಲಾಗಿದ್ದ ಪ್ರಮುಖ ರಸ್ತೆಗಳ ಸಿಸಿ ಕ್ಯಾಮರಾ ಉದ್ಘಾಟನೆ ಮತ್ತು ೨೦೨೧-೨೨ನೇ ಸಾಲಿನ ಎಸ್ಸಿ, ಎಸ್ಟಿ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ ಹಾಗೂ ಕಾರ್ಮಿಕ ಇಲಾಖೆ ವತಿಯಿಂದ ಶಾಲಾ ಮಕ್ಕಳಿಗೆ ಕಿಟ್ ವಿತರಣೆ ಮಾಡಿ ಮಾತನಾಡಿದರು.
ಪ್ರಸ್ತುತ ದಿನಮಾನಗಳಲ್ಲಿ ಕಳ್ಳತನ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ, ಜಾನುವಾರು ಕಳ್ಳತನ, ದೇವಸ್ಥಾನಗಳಲ್ಲಿ ಹುಂಡಿ ಕಳ್ಳತನ ಪ್ರಕರಣಗಳು ವರದಿಯಾಗುತ್ತಿವೆ. ಕಳ್ಳರು ಒಂಟಿ ಮನೆಗಳನ್ನೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಊರಿನ ಆಚೆ ಇರುವ ಒಂಟಿ ಮನೆಯ ಮಾಲೀಕರು, ತಮ್ಮ ಮನೆಗಳಿಗೆ, ಅಂಗಡಿಗಳಿಗೆ ಸಿಸಿ ಕ್ಯಾಮರಾ ಅಳವಡಿಸಿಕೊಂಡಿದ್ದೆ ಆದಲ್ಲಿ ಕಳ್ಳತನ ಪ್ರಕರಣ ಪತ್ತೆ ಹಚ್ಚಲು ಪೊಲೀಸ್ ಇಲಾಖೆಗೆ ಸಹಾಯಕಾರಿಯಾಗಲಿದೆ ಎಂದರು.ಪಟ್ಟಣದ ಸೂಕ್ಷ್ಮ ಪ್ರದೇಶ ಹಾಗೂ ಆಯಕಟ್ಟಿನ ಪ್ರದೇಶಗಳ ೫ ಸ್ಥಳಗಳಲ್ಲಿ ೧೫ ಕ್ಯಾಮರಾ ಅಳವಡಿಸಲಾಗಿದೆ. ಮತ್ತಿತರ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆಯ ಅವಶ್ಯಕತೆ ಇದ್ದಲ್ಲಿ ಶಾಸಕರ ಅನುದಾನದಲ್ಲಿ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಇದರಿಂದ ಪೊಲೀಸ್ ಇಲಾಖೆಗೆ ಅತ್ಯಂತ ಸಹಾಯಕಾರಿಯಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಮಾತನಾಡಿ, ಜಿಲ್ಲೆಯಲ್ಲಿ ಸೈಬರ್ ಕ್ರೈಂಗಳು, ಜಾನುವಾರು ಕಳ್ಳತನ, ದೇವಸ್ಥಾನ ಹುಂಡಿ ಕಳವು ಸೇರಿದಂತೆ ಇತರ ಚಟುವಟಿಕೆಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಎಲ್ಲ ರೀತಿಯಿಂದಲೂ ಸರ್ವ ಸನ್ನದ್ಧವಾಗಿದೆ. ನಿಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಕ್ರಮ ಚಟುವಟಿಕೆಗಳು ಕಂಡು ಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿ ಲಕ್ಷಣ ಕೊಳವೇಕರ್ ಮಾತನಾಡಿ, ಕಾರ್ಮಿಕ ಇಲಾಖೆಯಲ್ಲಿ ಬಡ ಹಾಗೂ ಅಸಂಘಟಿತ ಕೂಲಿ ಕಾರ್ಮಿಕರಿಗೆ ನೂರಾರು ಯೋಜನೆಗಳಿದ್ದು ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಇದೇ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿ ಸಂತೋಷ ಚಂದ್ರಕೇರ್, ಡಿವೈಎಸ್‌ಪಿ ಗಿರೀಶ ಭೋಜಣ್ಣನವರ, ಸಿಪಿಐ ಬಸವರಾಜ ಪಿ.ಎಸ್., ಪಿ.ಡಿ. ಬಸನಗೌಡ್ರ, ರವಿ ಮುದಿಯಪ್ಪನವರ, ಹನಮಂತಗೌಡ ಭರಮಣ್ಣನವರ, ಬಾಬುಸಾಬ ಜಡದಿ, ರಮೇಶ ಭಿಮಪ್ಪನವರ, ಪರಮೇಶಪ್ಪ ಕಟ್ಟೆಕಾರ, ರಿಯಾಜ್ ನರಗುಂದಕರ್ ಹಾಗೂ ಪಪಂ ಸಿಬ್ಬಂದಿ, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಇದ್ದರು.