ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ಪಹಲ್ಗಾಮ್‌ನಲ್ಲಿ ನಡೆದ ಹಿಂದೂಗಳ ನರಮೇಧಕ್ಕೆ ತಕ್ಕ ಪ್ರತೀಕಾರವನ್ನು ಕೇಂದ್ರ ಸರ್ಕಾರ ಕೈಗೊಳ್ಳಲೇಬೇಕು ಎಂದು ಚಿಂತಕ ಪ್ರೊ. ಅಣ್ಣಪ್ಪಸ್ವಾಮಿ ಹೇಳಿದರು.ಹಿಂದೂಗಳ ಮೇಲಿನ ದಾಳಿ ಖಂಡಿಸಿ, ವಿಶ್ವಹಿಂದೂ ಪರಿಷತ್, ಬಜರಂಗದಳ ಹಾಗೂ ಬಿಜೆಪಿ ವತಿಯಿಂದ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಸ್ವಾತಂತ್ರ್ಯ ಬಂದ ೭೦ ವರ್ಷಗಳ ನಂತರ ಜಮ್ಮು-ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಅರಳಿದ್ದು ಜನರು ಶಾಂತಿ ಸಹಬಾಳ್ವೆಯಡೆಗೆ ಹೊರಳುತ್ತಿದ್ದು, ಕಣಿವೆ ಅಭಿವೃದ್ಧಿಯತ್ತ ಮುಖಮಾಡಿದೆ. ಈ ಬೆಳವಣಿಗೆಯಿಂದ ಹತಾಶೆಗೊಂಡಿರುವ ಉಗ್ರಗಾಮಿಗಳು ಹಿಂಸಾಚಾರಕ್ಕೆ ಮುಂದಾಗಿದ್ದಾರೆ. ಸದ್ಯ ಬಿಗಿ ಕಾನೂನು ಕ್ರಮದಿಂದಾಗಿ ಹಲವು ಹಿಂಸಾಕೃತ್ಯಗಳನ್ನು ಭಾರತೀಯ ಸೇನೆ ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ. ಆದರೆ, ದುರದೃಷ್ಟವಶಾತ್ ಸೈನಿಕರ ಕಣ್ತಪ್ಪಿಸಿ ಈ ದಾಳಿ ನಡೆದಿದ್ದು, ಈ ದಾಳಿಯಲ್ಲಿ ಮಧುಚಂದ್ರಕ್ಕೆ ಬಂದಿದ್ದ ನವಜೋಡಿ ಸೇರಿದಂತೆ ನೌಕದಳದ ಸಿಬ್ಬಂದಿಯು ಬಲಿಯಾಗಿರುವುದು ದುರದೃಷ್ಟಕರ. ಭಯೋತ್ಪಾದನೆಗೆ ಧರ್ಮವಿಲ್ಲ ಎನ್ನಲಾಗುತ್ತದೆ. ಆದರೆ ಧರ್ಮ ಆಧರಿಸಿ ಹಿಂದೂಗಳನ್ನು ಕೊಂದಿರುವುದು ಅಕ್ಷಮ್ಯ ಎಂದರು.
ಶಾಂತಿಯೆಡೆಗೆ ಮರಳುತ್ತಿದ್ದ ಕಣಿವೆಯನ್ನು ಮತ್ತೆ ರಕ್ತಸಿಕ್ತಗೊಳಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ದಾಳಿ ನಡೆಸಲು ಸ್ಥಳೀಯರು ಸಹ ಸಹಕರಿಸಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಆದ್ದರಿಂದ, ಭಯೋತ್ಪದಕರಲ್ಲದೆ, ದಾಳಿಗೆ ಸಹಕಾರ ನೀಡಿದವರನ್ನು ಸಂಹಾರ ನಡೆಸುವುದರಿಂದ ಮಾತ್ರ ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ಭಯೋತ್ಪಾದನೆಯನ್ನು ಮಟ್ಟಹಾಕಬಹುದು ಎಂದರು.ಪಟ್ಟಣದ ಹಳೇಬಸ್ ನಿಲ್ದಾಣ ಸಮೀಪದ ಹೆದ್ದಾರಿಯಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟಿಸಿದ ಪ್ರತಿಭಟನಕಾರರು ಉಗ್ರರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಉಪವಿಭಾಗಾಧಿಕಾರಿಗಳ ಕಚೇರಿವರಗೆ ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿ ಕಚೇರಿ ಗುಮಾಸ್ತ ನವೀನ್ ಎಂಬುವವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆ ನೇತೃತ್ವವವನ್ನು ಹಿಂದೂ ಸಂಘಟನೆ ಮುಖಂಡರಾದ ಹರೀಶ್ ಕರಡಿಗಾಲ, ನಂದೀಶ್, ವಳಲಹಳ್ಳಿ ಅಶ್ವತ್ಥ್, ವಿಜಯಕುಮಾರ್, ರಘು ಚಂಪಕನಗರ ಮುಂತಾದವರು ವಹಿಸಿದ್ದರು.