ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಕೋಲ್ಕತಾದ ಆರ್. ಜೆ. ಕರ್ ಮೆಡಿಕಲ್ ಕಾಲೇಜಿನಲ್ಲಿ ಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ನಡೆದ ಅಮಾನವೀಯ ಅತ್ಯಾಚಾರ ಮತ್ತು ಕೊಲೆಯನ್ನು ವಿರೋಧಿಸಿ ತುಮಕೂರಿನ ನಗರದ ಟೌನ್ ಹಾಲ್‌ನಿಂದ ಎಂ.ಜಿ ರಸ್ತೆ ಮಾರ್ಗವಾಗಿ ಎಐಡಿಎಸ್‌ಓ ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ನೇತೃತ್ವದಲ್ಲಿ ಕ್ಯಾಂಡಲ್ ಮೆರವಣಿಗೆ ಮಾಡಲಾಯಿತು.ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಮಾತನಾಡಿ, ಸಮಾಜವು ಅತ್ಯಂತ ತೀವ್ರ ಸಾಂಸ್ಕೃತಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಯಾವುದೇ ವಯಸ್ಸಿನ ಮಿತಿ ಇಲ್ಲದೆ ಮಹಿಳೆಯರ ಮೇಲೆ ಅಪರಾಧಗಳು ಅವ್ಯಾಹತವಾಗಿ ನಡೆಯುತ್ತಿದೆ. ಕಳೆದ ತಿಂಗಳು ಆಂಧ್ರಪ್ರದೇಶದಲ್ಲಿ, 12-13 ವರ್ಷದ 3 ಜನ ಶಾಲಾ ಮಕ್ಕಳು 3 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಂದರು ಎಂದ
ಮುಂಬೈನಲ್ಲಿ ಕೂಡ ಇದೇ ವಯಸ್ಸಿನ ಬಾಲಕಿಯ ಮೇಲೆ ಬಾಲಕನೊಬ್ಬ ಅತ್ಯಾಚಾರವೆಸಗಿದ್ದಾನೆ. ಕೋಲ್ಕತಾದ ವೈದ್ಯಕೀಯ ಕಾಲೇಜೊಂದರಲ್ಲಿ ಕಾಮುಕನಿಗೆ ಬಲಿಯಾಗಿ ಘೋರ ಸಾವಿಗೀಡಾದ ವೈದ್ಯೆ ಈ ಪ್ರಕರಣಗಳಿಗೆ ಇನ್ನೊಂದು ಸೇರ್ಪಡೆ. ನಾಗರಿಕ ಸಮಾಜವು ತಲೆತಗ್ಗಿಸುವಂತೆ ಮಾಡಿರುವ ಈ ಅತ್ಯಾಚಾರದ ಮಾರಿಯು ತೀವ್ರವಾಗಿ ಎಲ್ಲೆಡೆ ಹಬ್ಬುತ್ತಿದೆ. ಈ ಮಾರಿಯ ಮೂಲ ಅಡಗಿರುವುದು ಇಂದಿನ ಸಾಂಸ್ಕೃತಿಕ ಅಧಃಪತನದಲ್ಲಿ ಎಂದರು.ಕೋಲ್ಕತಾದ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆಯ ವಿರುದ್ಧ ಈಗಾಗಲೇ ಜನರು ಬೀದಿಗಿಳಿದಿದ್ದಾರೆ. ಈ ಘಟನೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ದಿಕ್ಕು ತಪ್ಪಿಸುವ ಹೀನ ಪ್ರಯತ್ನವನ್ನು ಆಡಳಿತಾರೂಢ ಟಿಎಂಸಿ ಸೇರಿದಂತೆ ಪಟ್ಟಭದ್ರರು ನಡೆಸುತ್ತಿದ್ದಾರೆ. ಆದರೆ ಸರಿಯಾದ ದಾರಿಯಲ್ಲಿ ಮುನ್ನಡೆದು ಸಂಘಟಿತ ಹೋರಾಟವನ್ನು ಬೆಳೆಸುವುದರಿಂದ ಮಾತ್ರ ಪರಿಹಾರ ಸಾಧ್ಯ. ಇಂದು ಎಲ್ಲೆಡೆ ವ್ಯಾಪಕವಾಗಿ ಹರಿದಾಡುತ್ತಿರುವ ಅಶ್ಲೀಲ ಸಿನಿಮಾ, ಸಾಹಿತ್ಯ ಮತ್ತು ಪೋರ್ನ್ ವೆಬ್ ಸೈಟ್ ಗಳು ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವಿ ಸಾಂಸ್ಕೃತಿಕ ಅಧಃಪತನಕ್ಕೆ ಕಾರಣವಾಗಿವೆ ಎಂದರು.ಸಾಂಸ್ಕೃತಿಕ ಅಧಃಪತನದ ಮಹಾಮಾರಿಯ ವಿರುದ್ಧ ಸಮರ ಸಾರಿ ನೇತಾಜಿ-ಭಗತ್ ಸಿಂಗರಂತಹ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿಗಳು ಹಾಗೂ ನವೋದಯದ ಹರಿಕಾರರ ಉನ್ನತ ಚಿಂತನೆಗಳನ್ನು ಎಲ್ಲೆಡೆ ಸಾರುವ ಐತಿಹಾಸಿಕ ಜವಾಬ್ದಾರಿಯು ವಿದ್ಯಾರ್ಥಿ ಸಮೂಹದ ಮೇಲಿದೆ. ಈ ನಿಟ್ಟಿನಲ್ಲಿ ಎಐಡಿಎಸ್‌ಓ ಕರ್ನಾಟಕ ರಾಜ್ಯ ಸಮಿತಿಯು ರಾಜ್ಯವ್ಯಾಪಿ ಪ್ರತಿಭಟನಾ ದಿನಕ್ಕೆ ಕರೆ ನೀಡಿದೆ. ಈ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಾಜ್ಯದಲ್ಲಿ ಒಂದು ಹೊಸ ಸಾಂಸ್ಕೃತಿಕ ಚಳವಳಿಗೆ ನಾಂದಿ ಹಾಡಬೇಕೆಂದು ರಾಜ್ಯದ ವೈದ್ಯಕೀಯ, ಇಂಜಿನಿಯರಿಂಗ್, ಪದವಿ ಸೇರಿದಂತೆ ಎಲ್ಲ ವಿದ್ಯಾರ್ಥಿಗಳು ಹಾಗೂ ಪ್ರಜ್ಞಾವಂತ ಜನತೆಗೆ ಎಐಡಿಎಸ್‌ಓ ಕರೆ ನೀಡಿದರು.
;Resize=(128,128))
;Resize=(128,128))
;Resize=(128,128))
;Resize=(128,128))