ಸವಣೂರಿಂದ ವ್ಯಾಪಾರಕ್ಕೆ ಹೊರಟವರು ಶವವಾಗಿ ಮರಳಿದರು!

| Published : Jan 23 2025, 12:48 AM IST

ಸವಣೂರಿಂದ ವ್ಯಾಪಾರಕ್ಕೆ ಹೊರಟವರು ಶವವಾಗಿ ಮರಳಿದರು!
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತರ ಕನ್ನಡ ಜಿಲ್ಲೆಯ ಗುಳ್ಳಾಪುರ ಬಳಿ ಹೆದ್ದಾರಿ 63ರಲ್ಲಿ ಬುಧವಾರ ಬೆಳಗಿನ ಜಾವ ಸಂಭವಿಸಿದ ಭೀಕರ ಅಪಘಾತದಲ್ಲಿ ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಜಿಲ್ಲೆಯ ಸವಣೂರು ಪಟ್ಟಣದ 10 ಜನ ತರಕಾರಿ ವ್ಯಾಪಾರಿಗಳ ಪ್ರಾಣಪಕ್ಷಿ ಹಾರಿ ಹೋಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಅಪಘಾತದಲ್ಲಿ ಮೃತಪಟ್ಟವರ ಕುಟುಂಬ ಕರುಣಾಜನಕ ಕಥೆ

ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಯುವಕರು

ಕನ್ನಡಪ್ರಭ ವಾರ್ತೆ ಸವಣೂರು:

ಅವರೆಲ್ಲರೂ ಮಳೆ, ಚಳಿ, ಗಾಳಿ, ಬಿಸಿಲು ಎನ್ನದೇ ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ ಬಡ ವ್ಯಾಪಾರಸ್ಥರು. ದಿನಕ್ಕೆ ನೂರು, ಇನ್ನೂರು ದುಡಿದರೂ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದರು. ಆದರೆ ವಿಧಿಯಾಟಕ್ಕೆ ವ್ಯಾಪಾರಕ್ಕೆಂದು ಹೊರಟವರು ರಸ್ತೆ ಮಧ್ಯದಲ್ಲಿಯೇ ಜೀವನದ ಸಂತೆಯನ್ನೇ ಮುಗಿಸಿದ್ದಾರೆ.

ಹೊಟ್ಟೆಪಾಡಿಗಾಗಿ, ನಿದ್ದೆಗೆಟ್ಟು ಅದೆಷ್ಟೋ ಕಷ್ಟಗಳನ್ನು ಸಹಿಸಿ ತಮ್ಮ ಕುಟುಂಬದವರ ಹೊಟ್ಟೆ ತುಂಬಿಸಲು ಸವಣೂರಿನಿಂದ ದೂರದೂರದ ಊರುಗಳಿಗೆ ಹೋಗಿ ವ್ಯಾಪಾರ ಮಾಡುತ್ತಿದ್ದರು. ಎಂದಿನಂತೆ ಮಂಗಳವಾರವೂ ಒಂದಷ್ಟು ಸಂಪಾದಿಸಿಕೊಂಡು ಬರೋಣ ಎಂದು ರೊಟ್ಟಿ ಬುತ್ತಿ ಕಟ್ಟಿಕೊಂಡು, ಬರುತ್ತೇನೆ ಎಂದು ಮನೆಯವರಿಗೆ ಹೇಳಿ ಮೂಟೆಯ ಮೇಲೆ ಕುಳಿತು ಹೊರಟವರು ಮತ್ತೆ ಮರಳಿದ್ದು ಶವವಾಗಿ. ಇದೀಗ ಇಡೀ ಸವಣೂರಿಗೆ ಸೂತಕ ಬಡಿದಂತಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಗುಳ್ಳಾಪುರ ಬಳಿ ಹೆದ್ದಾರಿ 63ರಲ್ಲಿ ಬುಧವಾರ ಬೆಳಗಿನ ಜಾವ ಸಂಭವಿಸಿದ ಭೀಕರ ಅಪಘಾತದಲ್ಲಿ ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಜಿಲ್ಲೆಯ ಸವಣೂರು ಪಟ್ಟಣದ 10 ಜನ ತರಕಾರಿ ವ್ಯಾಪಾರಿಗಳ ಪ್ರಾಣಪಕ್ಷಿ ಹಾರಿ ಹೋಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವಿಷಯ ತಿಳಿಯುತ್ತಿದ್ದಂತೆ ಮೃತ ಕುಟುಂಬಸ್ಥರ ಮನೆಗೆ ಸಂಬಂಧಿಕರು ಹಾಗೂ ನೆರೆಹೊರೆಯವರು ಆಗಮಿಸಿ ಕುಟುಂಬಸ್ಥರಿಗೆ ಧೈರ್ಯ ತುಂಬುತ್ತಿದ್ದರು. ಆದರೆ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಮಕ್ಕಳನ್ನು ಕಳೆದುಕೊಂಡ ಪೋಷಕರ, ಪತಿ ಕಳೆದುಕೊಂಡ ಪತ್ನಿಯ ಸಂತೈಸಲು ಕಷ್ಟವಾಯಿತು.

ಕರುಣಾಜನಕ ಕತೆಗಳು:

ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಾಪಾರಿಗಳ ಒಂದೊಂದು ಕುಟುಂಬಕ್ಕೂ ಒಂದೊಂದು ಕರುಣಾಜನಕ ಕಥೆ ಇದೆ. ಕಡುಬಡತನದಲ್ಲಿ ಕಷ್ಟಪಟ್ಟು ಜೀವನ ನಡೆಸುತ್ತಿದ್ದ ಕುಟುಂಬದ ಆಧಾರಸ್ತಂಭಗಳೇ ಕಳಚಿ ಬಿದ್ದಿವೆ.

ಸವಣೂರು ಪಟ್ಟಣದ ಖಾದರಬಾವಿ ಓಣಿಯ ಅಸ್ಲಾಂ ಬೆಣ್ಣಿ (24) ಮದುವೆಯಾಗಿ ನಾಲ್ಕು ತಿಂಗಳಷ್ಟೇ ಕಳೆದಿತ್ತು. ಅವರ ಸಾವಿನ ಸುದ್ದಿ ಕುಟುಂಬಕ್ಕೆ ಬರಸಿಡಿಲಿನಂತೆ ಬಡಿಯಿತು. ಅಸ್ಲಾಂ ಉತ್ತಮವಾಗಿ ದುಡಿದು ಬದುಕು ಕಟ್ಟಿಕೊಳ್ಳುವ ಕನಸು ಕಾಣುತ್ತಿದ್ದರು. ಆದರೆ ವಿಧಿಯಾಟಕ್ಕೆ ಎಲ್ಲ ಕನಸುಗಳು ನುಚ್ಚುನೂರಾಗಿವೆ.

ಸವಣೂರು ಪಟ್ಟಣದ ದಂಡಿನಪೇಟೆಯಲ್ಲಿರುವ ಮೃತ ಇಮ್ತಿಯಾಜ್ ಮುಳಗೇರಿ (34) ಕುಟುಂಬಸ್ಥರು ಕಣ್ಣೀರಿನ ಕೋಡಿ ಹರಿಸುತ್ತಿದ್ದಾರೆ. ಮೊಹ್ಮದ್ ಜಾಫರ್ ಅವರ ನಾಲ್ಕು ಮಕ್ಕಳಲ್ಲಿ ಇಮ್ತಿಯಾಜ್ ನಾಲ್ಕನೇ ಮಗನಾಗಿದ್ದು, 10 ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದರು.

ಅಪಘಾತದಲ್ಲಿ ಮೃತಪಟ್ಟ ಅಲ್ಪಾಜ್ ಮಂಡಕ್ಕಿ (42) ಅವರ ಪತ್ನಿ ಗರ್ಭಿಣಿಯಿದ್ದು, ಮಗು ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೆ ಅಲ್ಪಾಜ್ ಅವರ ಸಾವು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಡೀ ಕುಟುಂಬ ಕಣ್ಣೀರಿಡುತ್ತಿದೆ.

ಇಮ್ತಿಯಾಜ್‌ 10 ವರ್ಷಗಳಿಂದ ಹಣ್ಣಿನ ವ್ಯಾಪಾರ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದ. ಆದರೆ ವಿಧಿಯಾಟದಿಂದ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಇಮ್ತಿಯಾಜ್ ಅವರನ್ನೇ ಕಳೆದುಕೊಳ್ಳುವಂತಾಗಿದೆ. ಇಂತಹ ಪರಿಸ್ಥಿತಿ ಯಾವ ಕುಟುಂಬಕ್ಕೂ ಬರಬಾರದು. ಈ ದುರ್ಘಟನೆ ಅರಗಿಸಿಕೊಳ್ಳಲಾಗದಂತಾಗಿದೆ ಎಂದು ಮೃತ ಇಮ್ತಿಯಾಜ್ ಸಂಬಂಧಿ ಮೊಹ್ಮದ್ ಆಸೀಫ್‌ ಗವಾರಿ ಹೇಳಿದರು.ಹೊನ್ನಾವರ, ಕುಮಟಾ, ಯಲ್ಲಾಪುರದಲ್ಲಿ ತರಕಾರಿ, ಹಣ್ಣು ಮಾರಾಟ ಮಾಡಿ ಬಂದ ಹಣದಲ್ಲಿ ಜೀವನ ನಡೆಸುತ್ತಿದ್ದರು. ನಿತ್ಯ 7-8 ಗಾಡಿ ತರಕಾರಿ, ಹಣ್ಣುಗಳನ್ನು ತುಂಬಿಕೊಂಡು ಹೋಗುತ್ತಿದ್ದವು. ದುಡಿದು ಬದುಕು ನಡೆಸಬೇಕಾದ ಸ್ಥಿತಿ ಇತ್ತು. ಮೃತಪಟ್ಟವರಲ್ಲಿ ಹೆಚ್ಚಾಗಿ ಯುವಕರೇ ಇದ್ದಾರೆ. ಇಂತಹ ದುರ್ಘಟನೆ ನಡೆದಿರಲಿಲ್ಲ. ಸರ್ಕಾರ ಮೃತಪಟ್ಟ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸವಣೂರು ಅಂಜುಮನ್ ಇಸ್ಲಾಮಿಕ್ ಕಮಿಟಿ ಅಧ್ಯಕ್ಷ ಬಾಬು ಫರಾಕ್ ಹೇಳಿದರು.

ಸಚಿವ ಶಿವಾನಂದ ಪಾಟೀಲ್, ಬೊಮ್ಮಾಯಿ, ಖಾದ್ರಿ ಸಂತಾಪಯಲ್ಲಾಪುರ ಸಮೀಪದ ಗುಳ್ಳಾಪುರ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಹಾವೇರಿ ಜಿಲ್ಲೆಯ ಹತ್ತು ಜನ ಮೃತಪಟ್ಟಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಮೃತರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಹಾಗೂ ಮೃತರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿರುವ ಅವರು, ಈ ದುರಂತದಲ್ಲಿ ಗಾಯಗೊಂಡಿರುವವರಿಗೆ ಸೂಕ್ತ ಚಿಕಿತ್ಸೆ ನೀಡಲು ಸಂಬಂಧಪಟ್ವರಿಗೆ ನಿರ್ದೇಶನ ನೀಡಿದ್ದಾರೆ. ಮೃತರ ಕುಟುಂಬದವರಿಗೆ ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ಮಾಡಿದ್ದು, ತಲಾ ₹3 ಲಕ್ಷ ಘೋಷಣೆ ಮಾಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಬೊಮ್ಮಾಯಿ ಸಂತಾಪ: ಗುಳ್ಳಾಪುರದ ಬಳಿ ನಡೆದ ಅಪಘಾತದಲ್ಲಿ ಸವಣೂರು ತಾಲೂಕಿನ ಹತ್ತು ಜನರು ಮೃತಪಟ್ಟಿರುವ ಘಟನೆ ಮನಸ್ಸಿಗೆ ನೋವುಂಟು ಮಾಡಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.ಈ ಕುರಿತು ಎಕ್ಸ್ ಮಾಡಿರುವ ಅವರು, ಮೃತರು ತಮ್ಮ ಉಪ ಜೀವನಕ್ಕಾಗಿ ತರಕಾರಿ ವ್ಯಾಪಾರ ಮಾಡಿಕೊಂಡಿದ್ದು, ಅತ್ಯಂತ ಬಡ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಈ ಘಟನೆಯಲ್ಲಿ ಇನ್ನೂ ಕೆಲವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸರ್ಕಾರ ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಅಲ್ಲದೇ ಈ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.ಮೃತರ ಆತ್ಮಕ್ಕೆ ಚಿರಶಾಂತಿ ಕೋರುತ್ತೇವೆ. ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಸ್ಥರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

ಖಾದ್ರಿ ಸಂತಾಪ: ಅಪಘಾತದಲ್ಲಿ ಸವಣೂರು ಮೂಲದ 10 ಜನ ಮೃತಪಟ್ಟಿರುವುದಕ್ಕೆ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಅಧ್ಯಕ್ಷ ಅಜ್ಜಂಪೀರ ಖಾದ್ರಿ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಹಾಗೂ ಮೃತರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿರುವ ಅವರು, ಗಾಯಾಳುಗಳಿಗೆ ಹುಬ್ಬಳ್ಳಿ ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಲು ಆಡಳಿತಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.