ಪಕ್ಷ ಬಿಟ್ಟು ಹೋದವರನ್ನು ಹಾಗೂ ಅಸಮಾಧಾನಿತ ಕಾಂಗ್ರೆಸ್ಸಿಗರನ್ನು ಮರಳಿ ಪಕ್ಷಕ್ಕೆ ಕರೆತರಬೇಕೆಂಬುದು ನನ್ನ ವೈಯಕ್ತಿಕ ವಿಚಾರವಾಗಿದೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಪಕ್ಷ ಬಿಟ್ಟು ಹೋದವರನ್ನು ಹಾಗೂ ಅಸಮಾಧಾನಿತ ಕಾಂಗ್ರೆಸ್ಸಿಗರನ್ನು ಮರಳಿ ಪಕ್ಷಕ್ಕೆ ಕರೆತರಬೇಕೆಂಬುದು ನನ್ನ ವೈಯಕ್ತಿಕ ವಿಚಾರವಾಗಿದೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಯತ್ನಾಳರನ್ನು ಮರಳಿ ಪಕ್ಷಕ್ಕೆ ತರುವ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಕೆ.ಎಸ್‌.ಈಶ್ವರಪ್ಪ ಸೇರಿ ಪಕ್ಷದಿಂದ ಹೊರಗಿದ್ದವರನ್ನು ಮರಳಿ ಕರೆತರಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಅವರು ಮರಳಿ ಪಕ್ಷಕ್ಕೆ ಬರುವುದರಿಂದ ಬಿಜೆಪಿ ಮತ್ತಷ್ಟು ಸದೃಢವಾಗಲಿದೆ. ಕಾಂಗ್ರೆಸ್‌ನಲ್ಲೂ ಕೆಲವರು ಅಸಮಾಧಾನಿತರಿದ್ದು, ಅವರನ್ನೂ ಬಿಜೆಪಿಗೆ ಕರೆತಂದರೆ ಪಕ್ಷಕ್ಕೆ ಅನುಕೂಲ ಆಗಲಿದೆ ಎಂದರು.ಅಹಿಂದ ಆರಂಭಿಸಿದ್ದ ಪ್ರಮುಖರನ್ನು ಬಿಟ್ಟು ಕಾಂಗ್ರೆಸ್‌ ಅಹಿಂದ ಸಮಾವೇಶ ಮಾಡಿದ್ದು, ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ. ಕಾಂಗ್ರೆಸ್‌ನವರು ಐದು ಗ್ಯಾರಂಟಿ ಹೆಸರು ಹೇಳಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ಹಾಗಾಗಿ ಸಾಕಷ್ಟು ಕಾಂಗ್ರೆಸ್ ಶಾಸಕರು ಅಸಮಾಧಾನಿತರಾಗಿದ್ದಾರೆ. ಅಂತಹವರನ್ನು ಬಿಜೆಪಿಗೆ ಸೆಳೆದರೆ ಪಕ್ಷಕ್ಕೆ ಲಾಭವಾಗಲಿದೆ ಎಂದು ಅಭಿಪ್ರಾಯಪಟ್ಟರು.

ವಿಜಯೇಂದ್ರ ಬದಲಾವಣೆ ವಿಚಾರವಾಗಿ ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ಬಳ್ಳಾರಿ ಪಾದಯಾತ್ರೆ ಯಶಸ್ವಿಯಾಗಿದೆ. ಮುಂದೆಯೂ ರಾಜ್ಯಾದ್ಯಂತ ಕಾಂಗ್ರೆಸ್ ಭ್ರಷ್ಟಾಚಾರದ ಕುರಿತು ಹೋರಾಟ ಹಮ್ಮಿಕೊಳ್ಳಲಿದ್ದಾರೆ. ಅವರ ಅವಧಿ ನವೆಂಬರ್‌ವರೆಗೆ ಇದೆ. ಪಕ್ಷದ ನಾಯಕರು ಮುಂದೆಯೂ ಅವರನ್ನೇ ಮುಂದುವರಿಸಬಹುದು ಅಥವಾ ಬದಲಾವಣೆ ಮಾಡಬಹುದು. ಒಟ್ಟಿನಲ್ಲಿ ಒಬ್ಬ ಒಳ್ಳೆಯ ಲೀಡರ್‌ ಹಾಗೂ ಯುವಕರಾಗಿರುವ ವಿಜಯೇಂದ್ರ ಅವರು ಚೆನ್ನಾಗಿ ಮಾಡುತ್ತಿದ್ದಾರೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿ ಸೇರಿ ಪ್ರಮುಖ ಸ್ಥಾನಕ್ಕೆ ಬಂದು 25 ವರ್ಷಗಳಾಗಿವೆ. ದೇಶವನ್ನು ಅದ್ಭುತವಾಗಿ ಮುನ್ನಡೆಸಿದ್ದರಿಂದ ಅವರಿಗೆ ಜಗತ್ತಿನ 36 ಪ್ರಮುಖ ಪ್ರಶಸ್ತಿಗಳು ಬಂದಿದ್ದು, ನಮ್ಮ ದೇಶದ ಹೆಮ್ಮೆಯಾಗಿದೆ. ಹಾಗಾಗಿ ಸೆ.17ರಿಂದ ದೇಶಾದ್ಯಂತ ಒಂದು ತಿಂಗಳವರೆಗೆ ಮೋದಿಜಿಯವರಿಗೆ ಅಭಿನಂದನಾ ಸಾಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು.

ನಿರಾಣಿ ಸಮೂಹ ಸಂಸ್ಥೆಗಳಿಂದ ಹೊಸ ಪ್ರಯತ್ನಕ್ಕೆ ಕೈ ಹಾಕಲಾಗಿದ್ದು, ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ನಿಷೇಧದಿಂದಾಗಿ ಉತ್ತರ ಭಾರತದಲ್ಲಿ ಮೊದಲ ಬಾರಿಗೆ ಜಮಖಂಡಿಯಲ್ಲಿ ಪರಿಸರ ಸ್ನೇಹಿಯಾಗಿರುವ ಬಯೋ ಪ್ಲಾಸ್ಟಿಕ್ ಬ್ಯಾಗ್ ತಯಾರಿಸುವ ಕಾರ್ಖಾನೆ ತಲೆ ಎತ್ತಲಿದೆ. ಕಬ್ಬು, ಮೆಕ್ಕೆಜೋಳ ಸೇರಿದಂತೆ ರೈತರು ಬೆಳೆದ ಬೆಳೆಗಳಿಂದಲೇ ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಪರಿಸರ ಸ್ನೇಹಿ ಬಾಟಲಿ, ಬ್ಯಾಗ್‌ ಹಾಗೂ ಕಪ್‌ಗಳ ಉತ್ಪನ್ನಗಳನ್ನು ತಯಾರು ಮಾಡಲಾಗುವುದು. ಮುಂದೆ ಮಹಾರಾಷ್ಟ್ರದ ಪುಣೆ, ಜಮಖಂಡಿ, ಆಂಧ್ರದ ಶ್ರೀಕಾಕುಲಂ ಹಾಗೂ ಬಿಹಾರನಲ್ಲಿ ಪ್ರಾಜೆಕ್ಟ್‌ಗಳನ್ನು ಮಾಡಲಾಗುವುದು ಎಂದು ಹೇಳಿದರು.

18 ವರ್ಷಗಳ ಹಿಂದೆ ನಿರಾಣಿ ಗ್ರೂಪ್‌ನಲ್ಲಿ ಆರಂಭಿಸಲಾದ ವಿಜಯ ಸೌಹಾರ್ದ ಹಾಗೂ ವಿಶಾಲ ಸೌಹಾರ್ದ ಸೊಸೈಟಿಗಳನ್ನು ಆರಂಭಿಸಲಾಗಿದ್ದು, ವಿಜಯ ಸೌಹಾರ್ದದಲ್ಲಿ ₹4 ಸಾವಿರ ಕೋಟಿ ಡೆಪಾಸಿಟ್ ಆಗಿದ್ದು, ₹60 ಕೋಟಿ ಲಾಭವಾಗಿದೆ. ವಿಶಾಲ ಸೌಹಾರ್ದದಲ್ಲಿ ₹350 ಕೋಟಿ ಡೆಪಾಸಿಟ್ ಆಗಿದ್ದು, ₹3 ಕೊಟಿ ಲಾಭ ಮಾಡಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಇದ್ದರು.