ಸಾಮಾಜಿಕ ನ್ಯಾಯ ವಿರೋಧಿಸೋರು ಸಂವಿಧಾನ ವಿರೋಧಿಗಳು: ರೈ

| Published : Apr 15 2025, 01:02 AM IST

ಸಾಮಾಜಿಕ ನ್ಯಾಯ ವಿರೋಧಿಸೋರು ಸಂವಿಧಾನ ವಿರೋಧಿಗಳು: ರೈ
Share this Article
  • FB
  • TW
  • Linkdin
  • Email

ಸಾರಾಂಶ

ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆ ಅಂಗವಾಗಿ ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸೋಮವಾರ ಬಾಬಾ ಸಾಹೇಬರ ಭಾವಚಿತ್ರಕ್ಕೆ ಮಾಜಿ ಸಚಿವ ಬಿ.ರಮಾನಾಥ ರೈ ಮಾಲಾರ್ಪಣೆ ಮಾಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಸಾಮಾಜಿಕ ನ್ಯಾಯ, ಜಾತ್ಯತೀತತೆ, ಭಾತೃತ್ವವನ್ನು ಯಾರು ವಿರೋಧಿಸುತ್ತಾರೋ ಅವರೆಲ್ಲರೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಂದ ರಚನೆಗೊಂಡಿರುವ ಸಂವಿಧಾನವನ್ನು ವಿರೋಧಿಸುವವರು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆ ಅಂಗವಾಗಿ ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸೋಮವಾರ ಬಾಬಾ ಸಾಹೇಬರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

ನ್ಯಾಯ ಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ, ಸಮಾಜ ಸುಧಾರಕರಾಗಿದ್ದ ಅಂಬೇಡ್ಕರ್ ಅವರು ಜೀವನದುದ್ದಕ್ಕೂ ಸಬಲೀಕರಣಕ್ಕೆ ಒತ್ತು ನೀಡಿದ್ದಾರೆ. ಸಾಮಾಜಿಕ ನ್ಯಾಯದಿಂದ ವಂಚಿತರಾದ ದುರ್ಬಲ ವರ್ಗದ ಜನರಿಗೆ ನ್ಯಾಯ ದೊರಕಿಸಿಕೊಡಬೇಕೆನ್ನುವ ಅಪೇಕ್ಷೆ ಮೇರೆಗೆ ಸಂವಿಧಾನದಲ್ಲಿ ಅನೇಕ ಅನುಕೂಲತೆಗಳನ್ನು ನೀಡಿದ್ದಾರೆ. ಅಸ್ಪೃಶ್ಯತೆ, ಅಸಮಾನತೆ ವಿರುದ್ಧ ದಿಟ್ಟತನದಿಂದ ಹೋರಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತೆ ಮಾಡಿದ ಫಲವಾಗಿ ಇಂದು ದೇಶದ ಕೋಟ್ಯಂತರ ಜನರು ನಿಟ್ಟುಸಿರು ಬಿಡುತ್ತಿದ್ದಾರೆ ಎಂದು ಸ್ಮರಿಸಿದರು.ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಮಾತನಾಡಿ, ದೇಶದಲ್ಲಿ ಪ್ರಜಾಪ್ರಭುತ್ವ ಬಲಿಷ್ಠವಾಗಿ ಉಳಿಯಲು ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಕಾರಣ. ಅಸ್ಪೃಶ್ಯತೆಯ ವಿಷ ವರ್ತುಲದಲ್ಲಿ ಎಲ್ಲ ಹಕ್ಕುಗಳಿಂದ ವಂಚಿತರಾಗಿದ್ದ ಶೋಷಿತ ಸಮುದಾಯಗಳ ವಿಮೋಚನೆಗಾಗಿ, ಹಕ್ಕುಗಳಿಗಾಗಿ ಅವರು ಹೋರಾಡಿದರು. ಸಂವಿಧಾನದ ಬದಲಾವಣೆಯ ಬಗ್ಗೆ ಮಾತನಾಡುವ ಬಿಜೆಪಿಗರು ಅಂಬೇಡ್ಕರ್ ಅವರ ವಿಚಾರಗಳನ್ನು ಗೌರವಿಸುತ್ತಿಲ್ಲ ಎಂದರು.ಮಾಜಿ ಸಚಿವ ಅಭಯಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಂ.ಎಸ್. ಮಹಮ್ಮದ್, ಮಿಥುನ್ ರೈ, ಪದ್ಮರಾಜ್ ಆರ್., ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜೆ.ಅಬ್ದುಲ್ ಸಲೀಂ, ಮೋಹನ್ ಕೋಟ್ಯಾನ್ ಮುಲ್ಕಿ, ಬಾಲಕೃಷ್ಣ ಅಂಚನ್, ಚಂದ್ರಶೇಖರ್ ಭಂಡಾರಿ, ಕೃಷ್ಣ ಪ್ರಸಾದ್ ಆಳ್ವ ಪುತ್ತೂರು, ಮುಖಂಡರಾದ ಶಶಿಧರ್ ಹೆಗ್ಡೆ, ಜಿ.ಕೃಷ್ಣಪ್ಪ, ಅಬ್ದುಲ್ ರವೂಫ್, ಪಿಯೂಸ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಲ್ಯಾನ್ಸ್ ಲೋಟ್‌ ಪಿಂಟೊ, ಕೆ.ಪಿ.ಥೋಮಸ್, ಕೇಶವ ಮರೋಳಿ, ಕೆ.ಕೆ.ಶಾಹುಲ್ ಹಮೀದ್, ಸುರೇಂದ್ರ ಕಂಬಳಿ, ವಿಶ್ವಾಸ್ ಕುಮಾರ್ ದಾಸ್, ನವೀನ್ ಡಿಸೋಜ ಮತ್ತಿತರರು ಇದ್ದರು.