ಸಾರಾಂಶ
ಸಿಇಟಿಯಲ್ಲಿ ವಿದ್ಯಾರ್ಥಿಯ ಜನಿವಾರ ತೆಗೆಯಲು ಒತ್ತಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ಉಡುಪಿಯಲ್ಲಿ ಶನಿವಾರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕೋಟ, ಸರ್ಕಾರಕ್ಕೆ, ಮಂತ್ರಿಗಳಿಗೆ ಉನ್ನತ ಅಧಿಕಾರಿಗಳ ಗಮನಕ್ಕೆ ಬರದೆ ಸಾಮಾನ್ಯ ಸಿಬ್ಬಂದಿ ಈ ರೀತಿ ಮಾಡಲು ಸಾಧ್ಯವೇ..? ಎಂದು ಪ್ರಶ್ನಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ರಾಜ್ಯದಲ್ಲಿ ಆಳುವ ಸರ್ಕಾರಕ್ಕೆ ಏನಾಗಿದೆಯೋ ಅರ್ಥವಾಗುತ್ತಿಲ್ಲ. ಸಿಇಟಿಯಲ್ಲಿ ಕಿವಿಯೋಲೆ ತೆಗೆಸಿದಾಗ ವಿವಾದ ಆಗಿತ್ತು. ಮಾಂಗಲ್ಯ ತೇಗಿಬೇಕು ಎಂಬ ಕಾರಣಕ್ಕೂ ಗಲಾಟೆ ಆಗಿತ್ತು. ಈಗ ಜನಿವಾರ ತೆಗೆಯಲು ಪ್ರಾರಂಭ ಮಾಡಿದ್ದಾರೆ ಎಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.ಸಿಇಟಿಯಲ್ಲಿ ವಿದ್ಯಾರ್ಥಿಯ ಜನಿವಾರ ತೆಗೆಯಲು ಒತ್ತಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ಉಡುಪಿಯಲ್ಲಿ ಶನಿವಾರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರಕ್ಕೆ, ಮಂತ್ರಿಗಳಿಗೆ ಉನ್ನತ ಅಧಿಕಾರಿಗಳ ಗಮನಕ್ಕೆ ಬರದೆ ಸಾಮಾನ್ಯ ಸಿಬ್ಬಂದಿ ಈ ರೀತಿ ಮಾಡಲು ಸಾಧ್ಯವೇ..? ಎಂದು ಪ್ರಶ್ನಿಸಿದ್ದಾರೆ. ಬ್ರಾಹ್ಮಣರು ಮಾತ್ರ ಯಜ್ಞೋಪವೀತ ಹಾಕುವುದಲ್ಲ. ಗೌಡ ಸರಸ್ವತರು, ವಿಶ್ವಕರ್ಮರು ಎಲ್ಲರೂ ಹಾಕುತ್ತಾರೆ. ಯಜ್ಞೋಪವೀತವನ್ನು ಪವಿತ್ರ ಎಂದು ಜನ ಭಾವಿಸುತ್ತಾರೆ. ಈ ರೀತಿ ಮಾಂಗಲ್ಯ ಕಿವಿಯೋಲೆ, ಜನಿವಾರ ತೆಗೆಸುವುದು ಸರಿನಾ..? ಜನಿವಾರದಲ್ಲಿ ನೇಣು ಹಾಕಿಕೊಳ್ಳುತ್ತೀರಾ ಅನ್ನೋದು ಸರಿಯಲ್ಲ ಎಂದು ಟೀಕಿಸಿದ್ದಾರೆ. ಒಂದು ಮತದವರು ಏನು ಬೇಕಾದರೂ ಹಾಕಬಹುದು, ಮತ್ತೊಂದು ಧರ್ಮದವರು ಏನು ಹಾಕುವಂತಿಲ್ಲ ಅನ್ನೋದು ಸರಿಯಲ್ಲ. ಮುಖ್ಯಮಂತ್ರಿಗಳೇ, ಗೃಹ ಮಂತ್ರಿಗಳೇ, ಶಿಕ್ಷಣ ಮಂತ್ರಿಗಳೇ ಸಮಾಜದ ಮೇಲೆ ದಬ್ಬಾಳಿಕೆ ಮಾಡಬೇಡಿ. ತಪ್ಪು ಮಾಡಿದವರ ಮೇಲೆ ತಕ್ಷಣ ಕ್ರಮ ಜರುಗಿಸಿ ಎಂದರು.