ಅಕ್ಷರದ ಜತೆ ಸಂಸ್ಕಾರ ಪಡೆದವರು ನಿಜ ವಿದ್ಯಾವಂತರು

| Published : Aug 17 2024, 12:48 AM IST

ಸಾರಾಂಶ

ತೋಂಟದಾರ್ಯ ಶಿಕ್ಷಣ ಸಂಸ್ಥೆ ಮಕ್ಕಳಲ್ಲಿ ನೈತಿಕ ಮೌಲ್ಯ ಬಿತ್ತುವ ಕಾರ್ಯ

ಗದಗ: ಅಕ್ಷರ ಕಲಿತವರೆಲ್ಲರೂ ವಿದ್ಯಾವಂತರೆನಿಸಿಕೊಳ್ಳುವುದಿಲ್ಲ, ಯಾರು ಅಕ್ಷರ ಜತೆಗೆ ಸಂಸ್ಕಾರ ಪಡೆಯುತ್ತಾರೆ ಅವರೇನಿಜವಾದ ವಿದ್ಯಾವಂತರು ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.

ಅವರು ನಗರದ ತೋಂಟದಾರ್ಯ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾ ಮಾತನಾಡಿ, ಧಾರ್ಮಿಕ ಸಂಸ್ಥೆಗಳು ಪ್ರಾರಂಭಿಸಿರುವ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣದ ಜತೆಗೆ ಸಂಸ್ಕಾರ ನೀಡಲಾಗುತ್ತದೆ. ತೋಂಟದಾರ್ಯ ಶಿಕ್ಷಣ ಸಂಸ್ಥೆ ಮಕ್ಕಳಲ್ಲಿ ನೈತಿಕ ಮೌಲ್ಯ ಬಿತ್ತುವ ಕಾರ್ಯ ಮಾಡುತ್ತಿದ್ದು, ಈ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸೌಭಾಗ್ಯಶಾಲಿಗಳಾಗಿದ್ದಾರೆ.

ವಿದ್ಯೆ ಎಲ್ಲ ಸಂಪತ್ತಿಗಿಂತ ದೊಡ್ಡ ಸಂಪತ್ತಾಗಿದ್ದು, ಯಾರೂ ಕದಿಯಲು ಸಾಧ್ಯವಿಲ್ಲದ ಹಾಗೂ ಬಳಸಿದಷ್ಟು ಬಲವರ್ಧನೆಯಾಗುವ ಸಂಪತ್ತಾಗಿದೆ. ಆದರೆ ಎಷ್ಟೇ ವಿದ್ಯೆ ಗಳಿಸಿದರೂ ವಿದ್ಯಾರ್ಥಿಗಳು ವಿನಯ ಮೈಗೂಡಿಸಿಕೊಳ್ಳದಿದ್ದರೆ ಗೌರವ ಪಡೆಯಲು ಸಾಧ್ಯವಿಲ್ಲ, ಹಾಗಾಗಿ ವಿದ್ಯಾರ್ಥಿಗಳು ವಿನಯವಂತರಾಗಬೇಕು ಎಂದರು.

ಪರಿಶ್ರಮಕ್ಕೆ ಮತ್ತೊಂದು ಪರ್ಯಾಯವಿಲ್ಲ, ಹಾಗಾಗಿ ವಿದ್ಯಾರ್ಥಿ ಹಂತದಲ್ಲಿ ಕಷ್ಟಪಟ್ಟು ಜ್ಞಾನ ಸಂಪಾದನೆ ಮಾಡಿದರೆ ಭವಿಷ್ಯದಲ್ಲಿ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಮಹಾನ್ ನಾಯಕರನ್ನು ಆದರ್ಶವಾಗಿಟ್ಟುಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ತೋಂಟದಾರ್ಯ ಶಾಲೆಯಲ್ಲಿ ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮರಾಗಿ ಬದುಕಲು ಬೇಕಾದ ಎಲ್ಲ ಗುಣಗಳನ್ನು ಕಲಿಯುತ್ತಿದ್ದಾರೆ ಎಂದರು.

ತೋಂಟದಾರ್ಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೊಟ್ರೇಶ ಮೆಣಸಿನಕಾಯಿ, ತೋಂಟದಾರ್ಯ ಶಿಕ್ಷಣ ಸಂಸ್ಥೆಯ ಸದಸ್ಯ ಅಮರೇಶ ಅಂಗಡಿ, ಲಿಂಗರಾಜಗೌಡ ಪಾಟೀಲ, ತೋಂಟದ ಸಿದ್ಧೇಶ್ವರ ಪಪೂ ಕಾಲೇಜು ಪ್ರಾಚಾರ್ಯ ವೈ.ಎಸ್ ಮತ್ತೂರ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.