ಸಾರಾಂಶ
ತಾಯಿ ಲೀಲಾವತಿಯನ್ನು ಕಳೆದುಕೊಂಡ ಮಗಳ ರೋಧನ । ನಾನು ಬರೋಲ್ಲ ಮಗ, ಸೊಸೆಯನ್ನು ಕಳುಹಿಸುತ್ತೇನೆ ಎಂದಿದ್ದ ಲೀಲಾವತಿ । ನಾಪತ್ತೆಯಾಗಿದ್ದ ಅಜ್ಜಿ ಮೊಮ್ಮಗನ ಮೃತದೇಹ ಪತ್ತೆ
ಕನ್ನಡಪ್ರಭ ವಾರ್ತೆ ಮಂಡ್ಯಕೇರಳದ ಮುಂಡಕ್ಕಾಯ್‌ನಲ್ಲಿ ತುಂಬಾ ಮಳೆ ಬರುತ್ತಿದೆ. ನಾಳೆ ಬರುತ್ತೇವೆ ಎಂದವರು ಮರಳಿ ಬರಲೇ ಇಲ್ಲ. ವಿಧಿಯ ರೂಪದಲ್ಲಿ ಮಳೆರಾಯನೇ ಅವರನ್ನು ಕೊಚ್ಚಿಕೊಂಡು ಹೋಗಿದ್ದಾನೆ. ಹೀಗಾಗುತ್ತದೆ ಎಂದು ನಾವ್ಯಾರೂ ಊಹಿಸಿಯೇ ಇರಲಿಲ್ಲ.
ಇದು ಕೇರಳ ವಯನಾಡಿನ ಮುಂಡಕ್ಕಾಯ್ ಗುಡ್ಡ ಕುಸಿತದಲ್ಲಿ ಮೃತಪಟ್ಟ ತಾಯಿ ಲೀಲಾವತಿ, ತಮ್ಮನ ಮಗ ನಿಹಾಲ್‌ನನ್ನು ಕಳೆದುಕೊಂಡು ಮಗಳು ಮಂಜುಳಾ ಗೋಳಿಟ್ಟ ಹೃದಯವಿದ್ರಾವಕ ಘಟನೆ.ಕೆ.ಆರ್.ಪೇಟೆ ತಾಲೂಕು ಕತ್ತರಘಟ್ಟ ಗ್ರಾಮದ ಲೀಲಾವತಿ ಹಾಗೂ ಮೊಮ್ಮಗ ನಿಹಾಲ್ ಮುಂಡಕ್ಕಾಯ್‌ನಲ್ಲಿ ಸಂಭವಿಸಿದ ಗುಡ್ಡ ಕುಸಿತ ದುರಂತ ಪ್ರಕರಣದಲ್ಲಿ ನಾಪತ್ತೆಯಾಗಿದ್ದರು. ಬುಧವಾರ ಅವರಿಬ್ಬರ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು.
ಮಳೆ ಹೆಚ್ಚಾಗಿರುವುದರಿಂದ ನೀನೂ ಬಂದು ಬಿಡು ಎಂದು ನಾನು ಹೇಳಿದ್ದೆ. ಆದರೆ, ನಾನು ಬರೋಲ್ಲ ಮಗ, ಸೊಸೆಯನ್ನು ಕಳುಹಿಸುತ್ತೇನೆ ಅಂತ ಅಮ್ಮ ಹೇಳಿದ್ದರು. ಆಗ ನಾನು ಕೋಪದಿಂದ ನೀನು ಬರಲಿಲ್ಲ ಎಂದರೆ ಅಲ್ಲೇ ಸಾಯಿ ಎಂದಿದ್ದೆ. ಆ ಮಾತು ನಿಜವಾಗಿ ಹೋಯ್ತು. ನನ್ನ ಮಾತು ಈ ರೀತಿ ಸತ್ಯವಾಗುತ್ತದೆ ಎಂದು ನನಗೇ ಗೊತ್ತಿರಲಿಲ್ಲ ಎಂದು ಕಣ್ಣೀರಿಟ್ಟರು.ಸೈಕಲ್ ತೆಗೆದುಕೊಡು ಎಂದು ಪಾಪು (ನಿಹಾಲ್) ಕೇಳಿದ್ದ. ಪಾಪುವಿಗಾಗಿ ಬುಕ್ಸ್‌ಗಳನ್ನೆಲ್ಲಾ ತೆಗೆದಿಟ್ಟಿದ್ದೆ. ಆ ದೇವರಿಗೆ ಕರುಣೆಯೇ ಇಲ್ಲ. ಮಲಗಿರುವಾಗಲೇ ಗುಡ್ಡ ಕುಸಿದು, ಮಗು ಕೊಚ್ಚಿ ಹೋಗಿದೆ. ಮಗುವಿನ ಕೈ ಮಾತ್ರ ಕಾಣುತ್ತಿದೆ, ಮಗು ಮಕಾಡೆ ಮಲಗಿದೆ. ಹೇಗಾದರೂ ಮಾಡಿ ಅವರಿಬ್ಬರ ಮೃತದೇಹವನ್ನು ಕರ್ನಾಟಕಕ್ಕೆ ತನ್ನಿ, ಕೊನೆಯ ಬಾರಿ ಅವರ ಮುಖ ನೋಡಿಕೊಳ್ಳುತ್ತೇವೆ ಎಂದು ಬೇಡಿಕೊಂಡರು.
೫೧ವರ್ಷದಿಂದ ನಮ್ಮ ತಂದೆ- ತಾಯಿ ಅಲ್ಲೆ ವಾಸವಾಗಿದ್ದರು. ನನ್ನ ತಮ್ಮ ಅನಿಲ್ ಮುಂಡಕೈಲಿ ಮನೆ ಕಟ್ಟಿದ್ದನು. ಮುಂದಿನ ತಿಂಗಳು ಗೃಹಪ್ರವೇಶ ಇತ್ತು. ಆದರೆ ವಿಧಿ ಲೆಕ್ಕಾಚಾರ ಬೇರೆ ಆಗಿದೆ. ಪಾಪು, ಅಮ್ಮನನ್ನು ಕಳೆದುಕೊಂಡಿದ್ದೇವೆ. ಝಾನ್ಸಿಗೆ ಕೈ ಏಟಾಗಿದೆ, ಮಗು ಕಳೆದುಕೊಂಡು ದುಃಖದಲ್ಲಿದ್ದಾಳೆ. ನನ್ನ ತಮ್ಮ ಅನಿಲ್‌ನ ಕಣ್ಣು, ಮೂಗು, ಶ್ವಾಸಕೋಶಕ್ಕೆ ಮಣ್ಣು ತುಂಬಿದೆ.ಸ್ಪೈನಲ್ ಕಾರ್ಡ್ ಕಟ್ಟಾಗಿದೆ. ತಂದೆ ದೇವರಾಜು ಅವರ ಕಾಲಿಗೂ ಏಟಾಗಿದೆ. ದಯಮಾಡಿ ಅವರನ್ನು ಕರ್ನಾಟಕಕ್ಕೆ ಕಳುಹಿಸಿಕೊಡಿ, ನಾವು ಚಿಕಿತ್ಸೆ ಕೊಡಿಸಿಕೊಳ್ಳುತ್ತೇವೆ ಎಂದು ಗೋಗರೆದರು.
ಅಜ್ಜಿ-ಮೊಮ್ಮಗನ ಮೃತದೇಹ ಪತ್ತೆ:ಕೇರಳದ ಮುಂಡಕ್ಕಾಯ್‌ನಲ್ಲಿ ಸಂಭವಿಸಿದ ಗುಡ್ಡ ಕುಸಿತ ದುರಂತ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ಅಜ್ಜಿ ಹಾಗೂ ಮೊಮ್ಮಗನ ಶವ ಬುಧವಾರ ಪತ್ತೆಯಾಗಿದೆ. ಜಿಲ್ಲೆಯ ಕೆ.ಆರ್.ಪೇಟೆ ತಾಲೂಕು ಕತ್ತರಘಟ್ಟ ಮೂಲದ ಅಜ್ಜಿ ಲೀಲಾವತಿ (೫೫). ಮೊಮ್ಮಗ ನಿಹಾಲ್ (೨.೫) ಮೃತಪಟ್ಟವರು. ಭೂಕುಸಿತ ವೇಳೆ ಒಂದೇ ಕುಟುಂಬದ ನಾಪತ್ತೆಯಾಗಿದ್ದ ಐವರ ಪೈಕಿ ಅನಿಲ್, ಝಾನ್ಸಿ, ದೇವರಾಜು ಅವರು ಗಾಯಗೊಂಡು ಪತ್ತೆಯಾಗಿದ್ದರು. ಆದರೆ, ನಿಹಾಲ್ ಮತ್ತು ಲೀಲಾವತಿ ನಾಪತ್ತೆ. ಮಣ್ಣಿನಲ್ಲಿ ಲೀಲಾವತಿ ಕೊಚ್ಚಿಹೋಗಿ ಹೊರಗೆ ಕೈ ಮಾತ್ರ ಕಾಣಿಸುತ್ತಿತ್ತು. ಇದನ್ನು ಗಮನಿಸಿ ಕುಟುಂಬಸ್ಥರು ಶವವನ್ನು ಪತ್ತೆಹಚ್ಚಿದ್ದರು. ಮನೆ ಸಮೀಪದ ಗಿಡಗಂಟೆಗಳ ಮಧ್ಯೆ ಮಕಾಡೆ ಮಲಗಿದ ಸ್ಥಿತಿಯಲ್ಲಿ ಮಗು ನಿಹಾಲ್ ಮೃತದೇಹ ಪತ್ತೆಯಾಗಿದೆ.
ಸಹಾಯವಾಣಿ ಪ್ರಾರಂಭ:ಕೇರಳ ರಾಜ್ಯದ ವಯನಾಡಿನಲ್ಲಿ ಸಂಭವಿಸಿರುವ ಭೂಕುಸಿತದಲ್ಲಿ ಮಂಡ್ಯ ಜಿಲ್ಲೆಯ ಸಾರ್ವಜನಿಕರು ವ್ಯವಹಾರ, ಇತರೆ ಕೆಲಸಗಳ ನಿಮಿತ್ತವಾಗಿ ವಯನಾಡಿನಲ್ಲಿ ವಾಸಿಸುತ್ತಿದ್ದಲ್ಲಿ ಸಹಕಾರ, ನೆರವು ಕೋರಿ ಜಿಲ್ಲಾ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಂ ದೂ.ಸಂ. ೦೮೨೩೨ -೨೨೪೬೫೫ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದ್ದಾರೆ. ನೇರವಾಗಿ ಮಂಡ್ಯ ಜಿಲ್ಲಾಧಿಕಾರಿ ಮೊ.ಸಂ. ೮೨೭೭೮೬೩೫೨೦ ಮತ್ತು ಮಂಡ್ಯ ಅಪರ ಜಿಲ್ಲಾಧಿಕಾರಿ ಮೊ. ಸಂ. ೯೪೮೦೭೮೩೬೮೬ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.