ಸಿದ್ದು ಐದು ವರ್ಷ ಪೂರೈಸ್ತಾರೆ ಎನ್ನುವವರೇ ಸಿಎಂ ರೇಸ್‌ನಲ್ಲಿ!

| Published : Oct 10 2024, 02:19 AM IST

ಸಿದ್ದು ಐದು ವರ್ಷ ಪೂರೈಸ್ತಾರೆ ಎನ್ನುವವರೇ ಸಿಎಂ ರೇಸ್‌ನಲ್ಲಿ!
Share this Article
  • FB
  • TW
  • Linkdin
  • Email

ಸಾರಾಂಶ

ಮುಡಾ, ವಾಲ್ಮೀಕಿ, ಹಗರಣ ಸಂಬಂಧಿಸಿದಂತೆ ಮೈಸೂರಿನ ವರೆಗೆ ಪಾದಯಾತ್ರೆ ಮಾಡಿದ್ದೇವೆ. ಇದರ ಪರಿಣಾಮವಾಗಿ ನಮಗೆ ಮೊದಲ ಜಯ ಸಿಕ್ಕಿದೆ. ಈಗಾಗಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿದೆ.

ಹುಬ್ಬಳ್ಳಿ:

ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಐದು ವರ್ಷ ಪೂರೈಸುತ್ತಾರೆ ಎಂದು ಯಾರು ಹೇಳಿಕೆ ಕೊಡುತ್ತಿದ್ದಾರೆಯೋ ಅವರೇ ಮುಖ್ಯಮಂತ್ರಿ ರೇಸ್‌ನಲ್ಲಿ ಮುಂದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿದರು.

ನಗರದ ವಿಮಾನ ನಿಲ್ದಾಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಕಾಂಗ್ರೆಸ್ ಪಕ್ಷದಲ್ಲಿ ಶಾಸಕರೇ, ಸಚಿವರೇ ಮುಖ್ಯಮಂತ್ರಿ ಅಧಿಕಾರಾವಧಿ ವಿಚಾರವಾಗಿ ಹೇಳಿಕೆ ಕೊಡುತ್ತಿದ್ದಾರೆ. ಮೇಲಾಗಿ ಸತೀಶ ಜಾರಕಿಹೊಳಿ ಸಿದ್ದರಾಮಯ್ಯ ಮೂರು ವರ್ಷ ಇರುತ್ತಾರಾ? ಐದು ವರ್ಷ ಇರುತ್ತಾರಾ? ಅದನ್ನು ಹೈಕಮಾಂಡ್‌ಗೆ ಕೇಳಬೇಕು ಎಂದು ಹೇಳಿಕೆ ನೀಡಿದ್ದಾರಲ್ಲವೇ ಎಂದು ಪ್ರಶ್ನಿಸಿದರು.

ರೇಸ್‌ನಲ್ಲಿ ಡಿಕೆಶಿ ಮೊದಲಿಗರು:

ಈಗಾಗಲೇ ಹಲವು ಶಾಸಕರು ಗುಪ್ತ ಸಭೆಗಳನ್ನು ಮಾಡುತ್ತಿದ್ದಾರೆ. ಡಿಕೆಶಿ ದೇವರ ಪೂಜೆ ಮಾಡಿ ಬಳಿಕ ಸಿದ್ದರಾಮಯ್ಯ ಐದು ವರ್ಷ ಪೂರೈಸುತ್ತಾರೆ ಎಂದು ಹೇಳುತ್ತಾರೆ. ಆದರೆ, ನಿಜವಾಗಿಯೂ ಮುಖ್ಯಮಂತ್ರಿ ರೇಸ್‌ನಲ್ಲಿ ಡಿ.ಕೆ. ಶಿವಕುಮಾರ ಮೊದಲಿದ್ದಾರೆ ಎಂದು ಆರೋಪಿಸಿದರು.

ರಾಜೀನಾಮೆ ನಿಶ್ಚಿತ:

ಮುಡಾ, ವಾಲ್ಮೀಕಿ, ಹಗರಣ ಸಂಬಂಧಿಸಿದಂತೆ ಮೈಸೂರಿನ ವರೆಗೆ ಪಾದಯಾತ್ರೆ ಮಾಡಿದ್ದೇವೆ. ಇದರ ಪರಿಣಾಮವಾಗಿ ನಮಗೆ ಮೊದಲ ಜಯ ಸಿಕ್ಕಿದೆ. ಈಗಾಗಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿದೆ. ಸಿದ್ದರಾಮಯ್ಯ ಈಗಾಗಲೇ ಭಂಡತನದಿಂದ ಮುಖ್ಯಮಂತ್ರಿ ಗಾದಿಯಲ್ಲಿ ಮುಂದುವರಿದಿದ್ದಾರೆ. ಅವರ ಈ ಭಂಡತನ ಹೆಚ್ಚು ದಿನ ನಡೆಯುವುದಿಲ್ಲ.‌ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.

ಜಾತಿಗಣತಿ ಗಾಳ:

ಜಾತಿಗಣತಿ ವಿಚಾರವಾಗಿ ಮಾತನಾಡಿ, ಸಿದ್ದರಾಮಯ್ಯ ಅವರು ನಿಜವಾಗಿಯೂ ಪ್ರಾಮಾಣಿಕರು ಆಗಿದ್ದರೆ 2018ರಲ್ಲಿ ಮುಖ್ಯಮಂತ್ರಿ ಆಗಿದ್ದಾಗಲೇ ಅನುಷ್ಠಾನ ಮಾಡಬೇಕಿತ್ತು. ಇದೀಗ ಹಗರಣಗಳ ಸರಮಾಲೆಯಲ್ಲಿ ಸಿಲುಕಿರುವ ಸರ್ಕಾರವನ್ನು ಉಳಿಸಿಕೊಳ್ಳುವುದಕ್ಕಾಗಿ ಜಾತಿಗಣತಿ ಎಂಬ ದಾಳ ಉರುಳಿಸಿದ್ದಾರೆ ಎಂದು ವಿಜಯೇಂದ್ರ ಆರೋಪಿಸಿದರು.

ಈಗಾಗಲೇ ಜಾತಿಗಣತಿಗೆ ಕಾಂಗ್ರೆಸ್‌ನ ಶಾಮನೂರು ಶಿವಶಂಕರಪ್ಪ, ಮಲ್ಲಿಕಾರ್ಜುನ ಖರ್ಗೆ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರೇ ವಿರೋಧ ವ್ಯಕ್ತಪಡಿಸಿ ಇದೊಂದು ಅವೈಜ್ಞಾನಿಕ ವರದಿ ಎಂದಿದ್ದಾರೆ. ಹೀಗಾಗಿ ಸದನದಲ್ಲಿ ಜಾತಿಗಣತಿ ಅನುಷ್ಠಾನ ಮಾಡುವುದು ಸಿದ್ದರಾಮಯ್ಯ ಅವರ ಭ್ರಮೆ ಎಂದು ವ್ಯಂಗ್ಯವಾಡಿದರುರು.

ನೈತಿಕತೆಯಿಲ್ಲ:

ವಿಜಯೇಂದ್ರ ಹೈಕಮಾಂಡ್‌ಗೆ ಮಂಕುಬೂದಿ ಎರಚಿ ರಾಜ್ಯಾಧ್ಯಕ್ಷರಾಗಿದ್ದಾರೆ ಎಂಬ ಕೆ.ಎಸ್. ಈಶ್ವರಪ್ಪ ಹೇಳಿಕೆಗೆ, ನಾನು ಹೈಕಮಾಂಡ್‌ಗೆ ಮಂಕುಬೂದಿ ಎರಚುವಷ್ಟು ದೊಡ್ಡವನು ಎನ್ನುವುದನ್ನು ಅವರೇ ಒಪ್ಪಿಕೊಂಡಿದ್ದಾರೆ ಎಂದರೆ ಸಂತೋಷ. ಆದರೆ, ಪಕ್ಷಕ್ಕೆ ದ್ರೋಹಮಾಡಿ ಹೊರಹೋದವರಿಗೆ ಪಕ್ಷದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಹರಿಹಾಯ್ದರು.

ಬದಲಾವಣೆಯಾಗಲಿದೆ:

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಅವರ ರಾಯಣ್ಣ-ಚೆನ್ನಮ್ಮ ಬ್ರಿಗೇಡ್‌ (ಆರ್‌ಸಿಬಿ) ಸಂಘಟನೆ ವಿಚಾರವಾಗಿ ಮಾತನಾಡಿ, ಅದು 20-20 ಮ್ಯಾಚ್ ಇದ್ದಂತೆ. ಆದರೆ, ನಾನು ಟೆಸ್ಟ್ ಆಡಲು ಬಂದಿದ್ದೇನೆ‌.‌ ನಾನು ಎಲ್ಲಿಯೂ, ಎಂದಿಗೂ ನಾಯಕನು ಎಂದು ಹೇಳಿಕೊಂಡಿಲ್ಲ. ಪಕ್ಷದ ಹೈಕಮಾಂಡ್ ನೀಡುವ ಸೂಚನೆಯಂತೆ ಕಾರ್ಯಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಕೆ.ಎಸ್‌. ಈಶ್ವರಪ್ಪ ಅವರ ಹೇಳಿಕೆಗಳಿಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಗ್ರಾಮಮಟ್ಟದಿಂದ ಹಿಡಿದು ಸಂಪೂರ್ಣ ಆಡಳಿತ ಯಂತ್ರ ಕುಸಿದಿದೆ. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಬೆಂಗಳೂರಿನ ಫ್ರೀಡಂ ಪಾರ್ಕ್‌, ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಕುಳಿತಿದ್ದಾರೆ. ಎಲ್ಲಿಯೂ ಅಭಿವೃದ್ಧಿ ಕಾರ್ಯಗಳು ನಡೆಯದೇ ಸಂಪೂರ್ಣವಾಗಿ ಆಡಳಿತ ಯಂತ್ರ ಕುಸಿದಿದೆ. ಮುಂದಿನ ದಿನಗಳಲ್ಲಿ ರಾಜ್ಯದ ರಾಜಕಾರಣದಲ್ಲಿ ಬದಲಾವಣೆ ಆಗಲಿದೆ ಎಂದು ಸ್ಪಷ್ಟಪಡಿಸಿದರು.