ಸಾರಾಂಶ
ಕನ್ನಡಪ್ರಭ ವಾರ್ತೆ ಕಮತಗಿ
ಅಭಿವೃದ್ಧಿಗೆ ರಾಜ್ಯ ಸರ್ಕಾರದಲ್ಲಿ ಹಣವಿಲ್ಲವೆಂದು ಅಪಪ್ರಚಾರವನ್ನು ಮಾಡುವವರಿಗೆ ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದಲ್ಲಿ ಕೈಗೊಂಡಿರುವ ನಮ್ಮ ಅಭಿವೃದ್ಧಿ ಕಾರ್ಯಗಳೆ ಉತ್ತರವಾಗಿವೆ ಎಂದು ಶಾಸಕ ಎಚ್.ವೈ.ಮೇಟಿ ಹೇಳಿದರು.ಸಮೀಪದ ರಾಂಪೂರ ಗ್ರಾಮದಲ್ಲಿ ಜಲ ಸಂಪನ್ಮೂಲ ಇಲಾಖೆಯಿಂದ ಅಚನೂರ ಕ್ರಾಸ್‌ದಿಂದ ಆಲಮಟ್ಟಿ ಆಣೆಕಟ್ಟಿನ ಬಾರ್ಡರವರೆಗೆ ಅಂದಾಜು ₹27.70 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಜನರ ಮನೆ ಬಾಗಿಲಿಗೆ ಕಾಂಗ್ರೆಸ್ ಸರ್ಕಾರ ತಲುಪಿದೆ. ಇದನ್ನು ಕಂಡು ವಿಪಕ್ಷ ನಾಯಕರು ಹೊಟ್ಟೆ ಉರಿ ತಾಳಲಾರದೆ ಸರಕಾರದ ಬಳಿ ಹಣವೇ ಇಲ್ಲ. ಅಭಿವೃದ್ಧಿ ಮಾಡುತ್ತಿಲ್ಲ ಎಂಬ ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕೈಗೊಳ್ಳುವ ಮೂಲಕ ನಮ್ಮ ಅಭಿವೃದ್ಧಿಗಳನ್ನು ತೋರಿಸುತ್ತೇವೆ ಎಂದರು.ಗುತ್ತಿಗೆದಾರರು ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಮತ್ತು ಕಾಮಗಾರಿಯಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಅನುದಾನದ ಕೊರತೆಯಿಂದ ಅಭಿವೃದ್ಧಿ ಕುಂಠಿತ ಎನ್ನುವುದು ಸಾಧ್ಯವಿಲ್ಲ. ಪ್ರತಿ ಶಾಸಕರಿಗೆ ₹50 ಮತ್ತು ₹25 ಕೋಟಿ ಅನುದಾನ ನೀಡಲಾಗುತ್ತಿದೆ. ಹಿಂದಿನ ಸರ್ಕಾರದಲ್ಲಿ ಬಾಕಿ ಉಳಿದ ಬಿಲ್ಲುಗಳನ್ನು ಕೊಡುವುದೇ ನಮ್ಮ ಸರ್ಕಾರಕ್ಕೆ ಮತ್ತೊಂದು ಹೊರೆಯಾಗಿದೆ. ಹೀಗಾಗಿ ಅಭಿವೃದ್ಧಿ ಕಾರ್ಯಗಳು ನಿಧಾನ ಗತಿ ಸಾಗುವುದಕ್ಕೆ ಕಾರಣವಾಗಿದೆ ಎಂದರು.
ಕಾಂಗ್ರೆಸ್ ಮುಖಂಡ ಪರಶುರಾಮ್ ಮಹಾರಾಜ ಮಾತನಾಡಿ, ಚುನಾವಣಾ ಪೂರ್ವದಲ್ಲಿ ಕೊಟ್ಟ ಭರವಸೆಗಳನ್ನು ಶಾಸಕರು ಈಡೇರಿಸುವ ಪ್ರಯತ್ನದೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಚುರುಕುಗೊಳಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಮೂಲಭೂತ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಈಗಾಗಲೇ ಕ್ಷೇತ್ರಕ್ಕೆ ವಿಶೇಷ ಅನುದಾನ ತರುವ ಪ್ರಯತ್ನ ನಡೆದಿದ್ದು ಶೀಘ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಶಾಸಕರು ಪ್ರಯತ್ನ ನಡೆಸಿದ್ದಾರೆ ಎಂದರು.ಪುನರ್ವಸತಿ ಮತ್ತು ಪುನರ್ ನಿರ್ಮಾಣ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಬಿ.ಹಳ್ಳಿ ಮಾತನಾಡಿ, ಪ್ರಸ್ತುತ ನಡೆಯುತ್ತಿರುವ ಕಾಮಗಾರಿಯನ್ನು 5 ಮೀ. 7ಮೀ.ಗೆ ರಸ್ತೆ ಅಗಲೀಕರಣಗೊಳಿಸಲಾಗಿದ್ದು. ಇದಕ್ಕೆ ಜನರ ಸಹಕಾರ ಮತ್ತು ಸ್ಥಳೀಯ ಮುಖಂಡರ ಸಹಕಾರ ಅತಿ ಮುಖ್ಯವಾಗಿದೆ ಎಂದರು.
ಮುಖಂಡರಾದ ಉಮೇಶ ಮೇಟಿ, ರಮೇಶ ಆಕಳವಾಡಿ, ಮಲ್ಲಿಕಾರ್ಜುನ ಮೇಟಿ, ಎಸ್.ಎನ್.ರಾಂಪುರ, ಸಿ.ಎನ್.ಬಾಳಕ್‌ನವರ್, ಬಾಲಪ್ಪ ಗಣಿ, ನಾರಾಯಣ ಶಿಲ್ಪಿ, ಜಟ್ಟಪ್ಪ ಮಾದಾಪುರ, ಫಕೀರಪ್ಪ ಕೊನ್ನೂರ, ಪವನ್ ಗಗನದ, ಶಿವಪ್ಪ ಕಾಳಗಿ, ಮಲ್ಲು ದ್ಯಾವಣ್ಣನವರ್, ಎಲ್ಲಪ್ಪ ಮೇಟಿ, ಶ್ರೀಕರ್ ದೇಸಾಯಿ, ರಮೇಶ್ ಕೋಲಾರ, ಶರಣಪ್ಪ ಮಾಗನೂರ, ಬಸವರಾಜ ಕೆಂಜೋಡಿ, ರವಿ ವಡ್ಡೋಡಗಿ, ವೈ.ವೈ.ತಿಮ್ಮಾಪುರ, ಜಗದೀಶ ಜೈನಾಪುರ, ಲಕ್ಷ್ಮಣ ಹಡಗಲಿ, ಕೆಬಿಜನಲ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಐ.ಶಿರೂರ, ಗುತ್ತಿಗೆದಾರ ಶಿವಾನಂದ ನಾಯಕ ಸೇರಿದಂತೆ ಮುಂತಾದವರು ಇದ್ದರು.ಡಿವೈಡರ್ ಅಳವಡಿಸಲು ಶಾಸಕರಿಗೆ ಮನವಿ
ಹಳೆ ರಾಂಪುರ ಗ್ರಾಮದಿಂದ ಹೊಸ ರಾಂಪುರ ರೈಲ್ವೆ ಗೇಟವರೆಗೆ ಡಿವೈಡರ್ ಅಳವಡಿಸಿ ಮಧ್ಯದಲ್ಲಿ ವಿದ್ಯುತ್ ಕಂಬಗಳನ್ನು ಹಾಕಿ ರಸ್ತೆಯನ್ನು ಸುಸಜ್ಜಿತವಾಗಿ ನಿರ್ಮಿಸುವಂತೆ ಸಮಸ್ತ ಗ್ರಾಮಸ್ಥರು ಶಾಸಕರಿ ಎಚ್.ವೈ.ಮೇಟಿಗೆ ಮನವಿ ಸಲ್ಲಿಸಿದರು. ಮನವಿಗೆ ಪುರಸ್ಕರಿಸಿದ ಶಾಸಕರು, ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಇದನ್ನು ಎಸ್ಟಿಮೆಂಟ್ ಮಾಡಿ ತಮಗೆ ವರದಿ ನೀಡುವಂತೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸ್ಥಳದಲ್ಲಿ ಸೂಚನೆ ನೀಡಿದರು. ಅದರಂತೆ ಬೇಡಿಕೆಯನ್ನು ಶೀಘ್ರದಲ್ಲಿ ಈಡೇರಿಸುವುದಾಗಿ ಭರವಸೆ ನೀಡಿದರು.