ಕನ್ನಡಕ್ಕೆ ಮೊಟ್ಟಮೊದಲ ಜ್ಞಾನಪೀಠ, ಮೊದಲ ಪಂಪ ಪ್ರಶಸ್ತಿ ತಂದುಕೊಟ್ಟು ಇದೊಂದು ಸರ್ವಜನಾಂಗದ ಶಾಂತಿಯ ತೋಟವೆಂದು ಹೃದಯ ವೈಶಾಲ್ಯತೆ ತೋರಿ ಕನ್ನಡದ ಛಾಪನ್ನು ಜಾಗತಿಕ ಮಟ್ಟದಲ್ಲಿ ಗಟ್ಟಿಗೊಳಿಸಿದವರು ವಿಶ್ವಮಾನವ ಕವಿ ಕುವೆಂಪುರವರು ಎಂದು ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ಎಂ. ಶ್ರೀನಿವಾಸ ಅಭಿಪ್ರಾಯಪಟ್ಟರು. ಶಿಕ್ಷಕರ ಸಂಘ ಅಥವಾ ನೌಕರರ ಸಂಘ ಮಾಡಬೇಕಾದ ಇಂತಹ ಕಾರ್ಯಗಳನ್ನು ಕೊಟ್ರೇಶ್ ಎಸ್. ಉಪ್ಪಾರ್ ನೇತೃತ್ವದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಮಾಡುತ್ತಿರುವುದು ಶ್ಲಾಘನೀಯವಾದುದು ಎಂದರು.

ಕನ್ನಡಪ್ರಭ ವಾರ್ತೆ ಆಲೂರು

ಕನ್ನಡಕ್ಕೆ ಮೊಟ್ಟಮೊದಲ ಜ್ಞಾನಪೀಠ, ಮೊದಲ ಪಂಪ ಪ್ರಶಸ್ತಿ ತಂದುಕೊಟ್ಟು ಇದೊಂದು ಸರ್ವಜನಾಂಗದ ಶಾಂತಿಯ ತೋಟವೆಂದು ಹೃದಯ ವೈಶಾಲ್ಯತೆ ತೋರಿ ಕನ್ನಡದ ಛಾಪನ್ನು ಜಾಗತಿಕ ಮಟ್ಟದಲ್ಲಿ ಗಟ್ಟಿಗೊಳಿಸಿದವರು ವಿಶ್ವಮಾನವ ಕವಿ ಕುವೆಂಪುರವರು ಎಂದು ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ಎಂ. ಶ್ರೀನಿವಾಸ ಅಭಿಪ್ರಾಯಪಟ್ಟರು.

ಅವರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು, ತಾಲೂಕು ಘಟಕ ಆಲೂರು, ಹಾಸನ ಜಿಲ್ಲೆ ವತಿಯಿಂದ ಆಲೂರು ತಾಲೂಕು ಕ್ರೀಡಾಂಗಣದಲ್ಲಿ ಶಿಕ್ಷಣ ಇಲಾಖೆಯ ನೌಕರರಿಗಾಗಿ ಪ್ರತಿವರ್ಷದಂತೆ ಸದರಿ ವರ್ಷವೂ ಮಹಾಕವಿ ಕುವೆಂಪು ಜನ್ಮದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ವಿಶ್ವಮಾನವ ಕ್ರಿಕೆಟ್ ಕಪ್ ೨೦೨೫ ಟೂರ್ನಿಯನ್ನು ಉದ್ಘಾಟಿಸಿ ಮಾತನಾಡಿ ನೌಕರರಿಗೆ ಕ್ರೀಡೆಗಳು ತಮ್ಮ ತಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳುವಲ್ಲಿ, ಕ್ರಿಯಾಶೀಲತೆ ಕಾಪಾಡಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಮಾಜ ಸೇವಕ ಕಟ್ಟೆಗದ್ದೆ ನಾಗರಾಜ್ ಮಾತನಾಡಿ ವರ್ಷವಿಡೀ ಮಕ್ಕಳ ಶೈಕ್ಷಣಿಕ ಅಭ್ಯುದಯಕ್ಕೆ ಸದಾ ತುಡಿಯುವ, ಮಿಡಿಯುವ ಶಿಕ್ಷಕರುಗಳಿಗೆ ಅವರ ಆಸಕ್ತಿದಾಯಕ ಕ್ರಿಕೆಟ್ ಟೂರ್ನಮೆಂಟ್ ಶಿಕ್ಷಕರ ಮನೋಲ್ಲಾಸವನ್ನು ಹೆಚ್ಚಿಸುತ್ತದೆ. ಕನ್ನಡ ನಾಡು ಕಂಡAತಹ ಸರ್ವಶ್ರೇಷ್ಠ ಕವಿ ಕುವೆಂಪು ಜನ್ಮ ದಿನಾಚರಣೆ ನಿಮಿತ್ತ ಇಂತಹದೊಂದು ಟೂರ್ನಿ ಹಮ್ಮಿಕೊಂಡ ಸಾಹಿತ್ಯ ವೇದಿಕೆಯ ನಡೆ ಮೆಚ್ಚುವಂಥದ್ದು, ವೇದಿಕೆ ಹಮ್ಮಿಕೊಳ್ಳುವ ಸಮಾಜಮುಖಿ ಕಾರ್ಯಗಳಿಗೆ ನಾವು ಸದಾ ಬೆಂಬಲವಾಗಿ ನಿಲ್ಲುತ್ತೇವೆ ಎಂದರು.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಮಣಿಪುರ ಕೃಷ್ಣೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕೇವಲ ಸಾಹಿತ್ಯಕ್ಕೆ ಮಾತ್ರ ಸೀಮಿತವಾಗದೇ ಕನ್ನಡ ನಾಡುನುಡಿ, ಕಲೆ, ರಂಗಭೂಮಿ, ಕ್ರೀಡೆ, ಶಿಕ್ಷಣ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ನಿರಂತರವಾಗಿ ಸೇವೆ ಸಲ್ಲಿಸುತ್ತಿದೆ. ಸಾಹಿತ್ಯ ಸಮ್ಮೇಳನ, ವಿಶ್ವಮಾನವ ದಿನಾಚರಣೆ, ಕೃತಿ ವಿಮರ್ಶೆಗಳು, ಕವಿಗೋಷ್ಠಿಗಳು, ಮಕ್ಕಳಿಗಾಗಿ ಸಾಂಸ್ಕೃತಿಕ ಸ್ಪರ್ಧೆಗಳು ಹೀಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಕಂಡಿದ್ದೇವೆ ಎಂದರು.

ವೇದಿಕೆಯಲ್ಲಿ ರಾಜ್ಯ ಸರಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಡಿ. ಎಂ. ವರದರಾಜ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಎಂ. ಆರ್‌. ಶ್ರೀನಿವಾಸ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಎಂ. ಆರ್. ವೇಣುಗೋಪಾಲ್, ಆಲೂರು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ನವೀನ್ ಭೈರಾಪುರ, ವೇದಿಕೆಯ ರಾಜ್ಯಾಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್, ರಾಜ್ಯ ಕೋಶಾಧ್ಯಕ್ಷ ಎಚ್. ಎಸ್. ಬಸವರಾಜ್, ರಾಜ್ಯ ಸಂಘಟನಾ ಕಾರ್ಯದರ್ಶಿ ವಾಸು ಸಮುದ್ರವಳ್ಳಿ, ತಾಲೂಕು ಉಪಾಧ್ಯಕ್ಷ ಟಿ.ಕೆ. ನಾಗರಾಜ್, ತಾಲೂಕು ಸಂಘಟನಾ ಕಾರ್ಯದರ್ಶಿ ಫಾದರ್ ಡಿ.ಸಿ. ಬಸವರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.