ರಾ-ಚ 2 ಕಣ್ಣು ಅಂತಿದ್ದವರು ಮಂಡ್ಯಕ್ಕೆ ಹೋದರು

| Published : Apr 14 2024, 01:47 AM IST

ಸಾರಾಂಶ

ಚನ್ನಪಟ್ಟಣ: ರಾಮನಗರ, ಚನ್ನಪಟ್ಟಣ ಎರಡು ಕಣ್ಣು ಅಂತಿದ್ದವರು ಆ ಎರಡೂ ಕಣ್ಣನ್ನು ಬಿಟ್ಟು ಮಂಡ್ಯಕ್ಕೆ ಹೋಗಿದ್ದಾರೆ. ಅವರು ನಿಮಗೆ ಟಾಟಾ ಬೈ-ಬೈ ಹೇಳುವ ಮೊದಲು ನೀವೇ ಅವರಿಗೆ ಬೈ ಹೇಳಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೆಸರೇಳದೆ ಸಂಸದ ಡಿ.ಕೆ.ಸುರೇಶ್ ಪರೋಕ್ಷ ವಾಗ್ದಾಳಿ ನಡೆಸಿದರು.

ಚನ್ನಪಟ್ಟಣ: ರಾಮನಗರ, ಚನ್ನಪಟ್ಟಣ ಎರಡು ಕಣ್ಣು ಅಂತಿದ್ದವರು ಆ ಎರಡೂ ಕಣ್ಣನ್ನು ಬಿಟ್ಟು ಮಂಡ್ಯಕ್ಕೆ ಹೋಗಿದ್ದಾರೆ. ಅವರು ನಿಮಗೆ ಟಾಟಾ ಬೈ-ಬೈ ಹೇಳುವ ಮೊದಲು ನೀವೇ ಅವರಿಗೆ ಬೈ ಹೇಳಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೆಸರೇಳದೆ ಸಂಸದ ಡಿ.ಕೆ.ಸುರೇಶ್ ಪರೋಕ್ಷ ವಾಗ್ದಾಳಿ ನಡೆಸಿದರು.

ನಗರದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ನಿಮ್ಮನ್ನು ಮುಖ್ಯಮಂತ್ರಿ ಮಾಡಿ ಆಯಿತು, ಮಂತ್ರಿ ಮಾಡಿ ಆಯಿತು ಎಂದು ಜೆಡಿಎಸ್, ಬಿಜೆಪಿಯವರಿಗೆ ತಿಳಿಸಿ, ನಿಮ್ಮ ಸಹಕಾರಕ್ಕೆ ನಿಂತ ಕಾಂಗ್ರೆಸ್ ಅನ್ನು ಈ ಬಾರಿಯ ಲೋಕಸಭಾ ಚುನಾಯಣೆಯಲ್ಲಿ ಬೆಂಬಲಿಸಿ ಎಂದು ಮನವಿ ಮಾಡಿದರು.

ನಮ್ಮ ತೆರಿಗೆ ಹಣ ಉತ್ತರ ಭಾರತಕ್ಕೆ:

ಉದ್ಯೋಗ ಸೃಷ್ಟಿಸುವ ಭರವಸೆಯೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿಸುತ್ತಿಲ್ಲ. ರಾಜ್ಯದಲ್ಲಿ ಸೃಷ್ಟಿಯಾಗಬೇಕಾದ ಉದ್ಯೋಗ ಗುಜುರಾತ್, ಮಧ್ಯಪ್ರದೇಶ ಸೇರಿದಂತೆ ಉತ್ತರಭಾರತಕ್ಕೆ ಹೋಗುತ್ತಿದೆ. ರಾಜ್ಯದ ಜನ ನೀಡುವ ತೆರಿಗೆ ಹಣ ಸಹ ಉತ್ತರಭಾರತಕ್ಕೆ ಹೋಗುತ್ತಿದ್ದು, ನಮಗೆ ನಮ್ಮ ಹಕ್ಕು ಸಿಗುತ್ತಿಲ್ಲ. ಇದನ್ನು ಪ್ರಶ್ನಿಸಿದರೆ, ನನಗೆ ದೇಶದ್ರೋಹಿ ಪಟ್ಟ ಕಟ್ಟುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ನನಗೆ ಅಧಿಕಾರ ಮುಖ್ಯವಲ್ಲ:

ಪೆಟ್ರೋಲ್, ಡೀಸೆಲ್ ಸೇರಿದಂತೆ ಎಲ್ಲ ವಸ್ತುಗಳ ಮೇಲು ತೆರಿಗೆ ಹಾಕ್ತಾರೆ. ನೀವು ನೀಡುವ ತೆರಿಗೆ ಹಣವನ್ನು ಅಲ್ಲಿಗೆ ತೆಗೆದುಕೊಂಡು ಹೋಗುತ್ತಾರೆ. ರಾಜ್ಯದ ಪರ ಕನ್ನಡಿಗರ ಪರ ಧ್ವನಿ ಎತ್ತಿದ್ದಕ್ಕೆ ನನ್ನನ್ನು ಸೋಲಿಸಿ ಎನ್ನುತ್ತಾರೆ. ನನಗೆ ಅಧಿಕಾರ ಮುಖ್ಯವಲ್ಲ, ನಮ್ಮ ಜನಹಿತ ಮುಖ್ಯ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಮಿತಿಮೀರಿದೆ. ಯುವಕರು ಕೆಲಸ ನೀಡಿ ಎಂದರೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಪಕೋಡ ಮಾರಿ ಅಂತಾರೆ. ಸೊಪ್ಪು ಮಾರುತ್ತೇವೋ, ಪಕೋಡ ಮಾರುತ್ತೇವೋ ಕನ್ನಡಿಗರಿಗೆ ಸ್ವಾಭಿಮಾನದಿಂದ ಬದುಕುವುದು ಗೊತ್ತಿದೆ ಎಂದು ತಿರುಗೇಟು ನೀಡಿದರು.

ನಿಮ್ಮ ಸೇವೆ ಮಾಡಿದ್ದೇನೆ:

ಮೂರು ಬಾರಿ ಆಶಿರ್ವಾದ ಮಾಡಿ ನನ್ನನ್ನು ಸಂಸದನನ್ನಾಗಿ ಮಾಡಿದ್ದೀರಾ. ಸಿಕ್ಕ ಅವಕಾಶ ಬಳಸಿಕೊಂಡು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಸಂಸದನಾಗಿ ನಿಮ್ಮ ಅಹವಾಲು ಆಲಿಸುವ, ಸರ್ಕಾರದ ಯೋಜನೆಗಳು ನಿಮಗೆ ತಲುಪಿದೆಯೇ ಇಲ್ಲವಾ ಎಂಬ ಅಧಿಕಾರಿಗಳೊಂದಿಗೆ ಪರಿಶೀಲಿಸುವ ಕೆಲಸ ಮಾಡಿದ್ದೇನೆ. ನಾನು ಮಾಡಿದ ಐದು ರು.ಗಳಿಗೆ ಶುದ್ಧ ಕುಡಿಯುವ ನೀರು ದೊರಕಿಸುವ ಕಾರ್ಯಕ್ರಮ ರಾಜ್ಯದಲ್ಲೇ ದೊಡ್ಡ ಬದಲಾವಣೆ ತಂದಿದೆ. ಈ ಬಾರಿ ಮತ್ತೊಮ್ಮೆ ಆಶೀರ್ವದಿಸಿ ನಿಮ್ಮ ಸೇವೆಗೆ ಅವಕಾಶ ನೀಡಿ ಎಂದು ಮನವಿ ಮಾಡಿದರು.

ವಿಧಾನಸಭೆ ಚುನಾವಣೆ ಪೂರ್ವದಲ್ಲಿ ರಾಜ್ಯಾದ್ಯಂತ ಪ್ರವಾಸ ನಡೆಸಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಜನರ ಕಷ್ಟ ಅರಿತು ಅವರಿಗೆ ನೆರವಾಗುವ ಉದ್ದೇಶದೊಂದಿಗೆ ಪಂಚ ಗ್ಯಾರಂಟಿಗಳನ್ನು ರೂಪಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅವುಗಳನ್ನು ಜಾರಿಗೆ ತಂದು ನುಡಿದಂತೆ ನಡೆದರು. ಬಡವರಿಗೆ ಶಕ್ತಿ ನೀಡಿದ ಕಾಂಗ್ರೆಸ್ ಅನ್ನು ಈ ಬಾರಿಯ ಚುನಾವಣೆಯಲ್ಲಿ ಬೆಂಬಲಿಸಿ ಎಂದು ವಿನಂತಿಸಿದರು.

ಕ್ರಾಂತಿಕಾರಕ ಯೋಜನೆ:

ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ದೇಶದಲ್ಲೇ ಕ್ರಾಂತಿಕಾರಕ ಯೋಜನೆಗಳಾಗಿವೆ. ಈ ಯೋಜನೆಯಿಂದ ಕರ್ನಾಟಕದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ನಾವು ನೀಡಿದ ಗ್ಯಾರಂಟಿ ನಮಗೆ ಧೈರ್ಯ ನೀಡಿದೆ. ಅದೇ ಧೈರ್ಯದಲ್ಲಿ ಇಂದು ನಿಮ್ಮ ಮುಂದೆ ಬಂದು ಮತ ಕೇಳುತ್ತಿದ್ದೇವೆ. ನಾವು ಸುಳ್ಳು ಹೇಳಿ ಮತ ಕೇಳುತ್ತಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ.ಸಿ.ಅಶ್ವತ್ಥ್, ಬಿಎಂಐಸಿಎಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ, ಚನ್ನಪಟ್ಟಣ ಉಸ್ತುವಾರಿ ದುಂತೂರು ವಿಶ್ವನಾಥ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಆರ್. ಪ್ರಮೋದ್, ಸುನಿಲ್ ಮತ್ತಿತರರಿದ್ದರು. ಬಾಕ್ಸ್‌.............

ಸುರೇಶ್ ಬಿರುಸಿನ ಪ್ರಚಾರ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರು ಸಂಸದ ಡಿ.ಕೆ.ಸುರೇಶ್ ಚನ್ನಪಟ್ಟಣದಲ್ಲಿ ಬಿರುಸಿನ ಪ್ರಚಾರ ನಡೆಸಿದರು.

ನಗರದ ಮಂಗಳವಾರಪೇಟೆಯ ಬಸವನಗುಡಿ ವೃತ್ತ, ಕೋಟೆಯ ಶ್ರೀ ಮಾರಮ್ಮ ದೇವಸ್ಥಾನದ ಬಳಿ, ರಾಜಾಕೆಂಪೇಗೌಡ ಬಡಾವಣೆ ವೃತ್ತದ ಬಳಿ ಹಾಗೂ ನಗರದ ಅಂಬೇಡ್ಕರ್ ನಗರದ ಬಳಿ ತೆರೆದ ವಾಹನದಲ್ಲಿ ಪ್ರಚಾರ ನಡೆಸಿದರು.

ನಗರದ ಮಂಗಳವಾರಪೇಟೆಯ ಬಸವನಗುಡಿ ವೃತ್ತ ಬಳಿ ಪ್ರಚಾರಕ್ಕೆ ಆಗಮಿಸಿದ ಡಿ.ಕೆ.ಸುರೇಶ್ ಅವರಿಗೆ ಸ್ಥಳೀಯ ಮುಖಂಡರು ಬೃಹತ್ ಸೇಬಿನ ಹಾರ ಹಾಕಿ ಸ್ವಾಗತಿಸಿದರು. ನಗರ ಪ್ರದೇಶದಲ್ಲಿ ತುರುಸಿನ ಪ್ರಚಾರ ನಡೆಸಿದ ಸುರೇಶ್ ಮತಭೇಟೆ ನಡೆಸಿದರು. ಕೋಟ್

ಕ್ರಿಯಾಶೀಲ ಸಂಸದರು ಎನಿಸಿರುವ ಡಿ.ಕೆ.ಸುರೇಶ್ ಕೇಂದ್ರದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಚನ್ನಪಟ್ಟಣದಲ್ಲಿ ಯುಜಿಡಿ, ಕಸದ ಸಮಸ್ಯೆ ಸೇರಿದಂತೆ ಸಾಕಷ್ಟು ಸಮಸ್ಯೆಗಳು ಹಾಗೇಯೇ ಉಳಿದುಕೊಂಡಿವೆ. ಇತ್ತೀಚಿಗೆ ಜೆಡಿಎಸ್‌ನ 9 ಮಂದಿ ನಗರಸಭಾ ಸದಸ್ಯರು ಪಕ್ಷ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಯಾಗಿರುವುದು ಕಾಂಗ್ರೆಸ್‌ನ ಅಭಿವೃದ್ಧಿ ಕಾರ್ಯಗಳಿಗೆ ಸಾಕ್ಷಿಯಾಗಿದೆ.

-ರಘುನಂದನ್ ರಾಮಣ್ಣ, ಅಧ್ಯಕ್ಷ, ಬಿಎಂಐಸಿಎಪಿಎಪೊಟೋ೧೩ಸಿಪಿಟಿ೧:

ಚನ್ನಪಟ್ಟಣ ನಗರದ ಮಂಗಳವಾರಪೇಟೆಯ ಬಸವನಗುಡಿ ವೃತ್ತದ ಬಳಿ ಸಂಸದ ಡಿ.ಕೆ.ಸುರೇಶ್ ಪ್ರಚಾರ ನಡೆಸಿದರು.