ಸಮಾಜಮುಖಿಯಾಗಿ ಕೆಲಸ ಮಾಡುವವರಿಗೆ ಸೂಕ್ತ ಸ್ಥಾನಮಾನ ದೊರಕುತ್ತೆ: ಡಾ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿ

| Published : Jan 14 2024, 01:38 AM IST / Updated: Jan 14 2024, 05:44 PM IST

ಸಮಾಜಮುಖಿಯಾಗಿ ಕೆಲಸ ಮಾಡುವವರಿಗೆ ಸೂಕ್ತ ಸ್ಥಾನಮಾನ ದೊರಕುತ್ತೆ: ಡಾ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜಮುಖಿಯಾಗಿ ಕೆಲಸ ಮಾಡುವವರಿಗೆ ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೂಕ್ತ ಸ್ಥಾನಮಾನಗಳು ಲಭಿಸುತ್ತವೆ ಎಂದು ಹಿರೇಕಲ್ಮಠದ ಒಡೆಯರ್ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ಹೊನ್ನಾಳಿ: ಸಮಾಜಮುಖಿಯಾಗಿ ಕೆಲಸ ಮಾಡುವವರಿಗೆ ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೂಕ್ತ ಸ್ಥಾನಮಾನಗಳು ಲಭಿಸುತ್ತವೆ ಎಂದು ಹಿರೇಕಲ್ಮಠದ ಒಡೆಯರ್ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ಪಟ್ಟಣದ ಹಿರೇಕಲ್ಮಠದಲ್ಲಿ ಎಳ್ಳು ಅಮಾವಾಸ್ಯೆ ಪ್ರಯುಕ್ತ ಹಮ್ಮಿಕೊಂಡಿದ್ದ ಗುರು ಚನ್ನೇಶ್ವರ ಬೆಳ್ಳಿ ರಥೋತ್ಸವ ಮತ್ತು ಸಂಸ್ಕೃತಿ-ಸಂಸ್ಕಾರ ಕಾರ್ಯಕ್ರಮದ ಧರ್ಮಸಭೆಯಲ್ಲಿ ಮಾತನಾಡಿದರು.

ಮಠದವತಿಯಿಂದ ರಾಜಕೀಯ, ಸಂಘ-ಸಂಸ್ಥೆಗಳ ಪ್ರಮುಖರಿಗೆ ಸನ್ಮಾನ ಮಾಡಲಾಗುತ್ತದೆ ಈ ಮುಖೇನ ಸಾಧಕರಿಗೆ ಕ್ಷೇತ್ರಗಳಲ್ಲಿ ಹೆಚ್ಚಿನ ಸೇವೆ ಮಾಡಲು ಪ್ರೇರಣೆ ದೊರಕಿದಂತಾಗುತ್ತದೆ ಎಂದರು.

ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ಸುಮಾರು 150 ಖಾಸಗಿ ಕೃಷಿ ಕಾಲೇಜುಗಳಿಗೆ ಅನುಮತಿ ನೀಡಲಾಗಿದೆ. ಬೇರೆ ರಾಜ್ಯಗಳಲ್ಲಿ ಕೃಷಿ ಕಾಲೇಜು ತೆರೆಯಲು ಖಾಸಗಿಯವರಿಗೆ ಅನುಮತಿ ಸಿಕ್ಕರೆ ಕರ್ನಾಟಕ ರಾಜ್ಯದಲ್ಲಿ ಯಾಕೆ ಸಿಗುತ್ತಿಲ್ಲವೆಂದು ಪ್ರಶ್ನಿಸಿದರು. 

ಮಠದಲ್ಲಿ ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಕೃಷಿ ಕಾಲೇಜನ್ನು ತೆರೆಯಲು ಅನುಮತಿಗೆ ಪ್ರಯತ್ನಿಸುತ್ತಿದ್ದೇವೆ ಆದರೆ ರಾಜಕೀಯ ಇಚ್ಛಾ ಶಕ್ತಿ ಕೊರತೆಯಿಂದ ಕಾಲೇಜು ಪ್ರಾರಂಭಿಸಲು ಅನುಮತಿ ದೊರಕುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಮಠದವತಿಯಿಂದ ಅನೇಕ ಹೊಸ ಯೋಜನೆಗಳು ಪ್ರಾರಂಭಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಬರಗಾಲವಿರುವ ಪ್ರಯುಕ್ತ ಕೋಟಿ ದೀಪೋತ್ಸವ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ ಎಂದರು.

ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ರೇವಣ ಸಿದ್ದಪ್ಪ ಮಾತನಾಡಿ, ನಾನು ಮತ್ತು ಪತಿ ಮಠದಲ್ಲಿ ಸೇವೆ ಮಾಡುತ್ತಿರುವುದರಿಂದ ರಾಜಕೀಯ ಸ್ಥಾನ-ಮಾನಗಳು ಲಭಿಸಿವೆ ಎಂದು ಹರ್ಷ ವ್ಯಕ್ತಪಡಿಸಿದರು. ನೂತನವಾಗಿ ಟೇಲರಿಂಗ್ ಕೋರ್ಸ್‌ ಅನ್ನು ಪ್ರಾರಂಭ ಮಾಡಿದ್ದು, ಮಹಿಳೆಯರು ಇದರ ತರಬೇತಿ ಪಡೆದು ಆರ್ಥಿಕ ಸ್ವಾವಲಂಬಿಗಳಾಗುವಂತೆ ಸಲಹೆ ನೀಡಿದರು.

ಮಠದ ವ್ಯವಸ್ಥಾಪಕ ಎಂಪಿಎಂ ಚನ್ನಬಸಯ್ಯ ಮಾತನಾಡಿ, ರಟ್ಟೆಹಳ್ಳಿ ತಾಲೂಕಿನ ಹಳ್ಳೂರಿನ ಎಂಡಿ ಶಂಕರನಹಳ್ಳಿಯಲ್ಲಿ ಜ.14ರಿಂದ ಜ.16ರವರೆಗೆ 3 ದಿನಗಳ ಕಾಲ ಒಡೆಯರ್ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳ ಮೌನ ಇಷ್ಟಲಿಂಗ ಪೂಜಾನುಷ್ಠಾನದ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿ ಆಶೀರ್ವಾದ ಪಡೆಯಬೇಕು ಎಂದು ತಿಳಿಸಿದರು.

ರೈತ ಮುಖಂಡ ರಮೇಶ್ ಮಾತನಾಡಿ, ರಾಜಕಾರಣಿಗಳಿಗಿಂತ ಮಠ-ಮಾನ್ಯಗಳು ನಾಡಿನ ಜನರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತಿವೆ ಎಂದರು. ಹಿರೇಕಲ್ಮಠದ ಶ್ರೀಗಳ ಅಪೇಕ್ಷೆಯಂತೆ ಕೃಷಿ ಕಾಲೇಜು ತೆರೆಯಲು ರಾಜಕಾರಣಿಗಳು ಇಚ್ಛಾ ಶಕ್ತಿ ತೋರಿಸಬೇಕು ಜೊತೆಗೆ ರೈತ ಸಂಘಟನೆಗಳು, ಎಲ್ಲಾ ಸಮಾಜದ ಮುಖಂಡರುಗಳು ಸತ್ಕಾರ್ಯಕ್ಕೆ ಕೈಜೋಡಿಸುವಂತೆ ಮನವಿ ಮಾಡಿದರು.

ಶ್ರೀಮಠದವತಿಯಿಂದ ನೂತನವಾಗಿ ಆಯ್ಕೆಯಾದ ಬಗರ್ ಹುಕುಂ ಸಮಿತಿ ಸದಸ್ಯರಿಗೆ ಮತ್ತು ಕಸಬಾ ಸೊಸೈಟಿ ಅಧ್ಯಕ್ಷ ಕುಮಾರಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಚನ್ನೇಶ್ವರ ಗಾನಕಲಾ ಬಳಗದವರು ಸಾಂಸ್ಕತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ರೇವಣಸಿದ್ದಪ್ಪ, ಕುಮಾರಸ್ವಾಮಿ, ಪೂಜಾಮರಿ ಹಾಲಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.