ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಕೇವಲ 9 ಜನ ನಾಯಕರು, ಕಡಿಮೆ ಕಾರ್ಯಕರ್ತರೊಂದಿಗೆ 1984ರಲ್ಲಿ ನಗರದಲ್ಲಿ ಬಿಜೆಪಿ ಕಟ್ಟಿ, ಬೆಳೆಸಲು ಶ್ರಮಿಸಿದವರು ನಾವು. ಆಗ ಪಕ್ಷಕ್ಕಾಗಿ ಹಗಲಿರುಳು ದುಡಿದವರಿಗೆ ಈಗ ಕಾಲವಿಲ್ಲ. ಈಗೇನಿದ್ದರೂ ಸೂಟು ಬೂಟು ಹಾಕಿ, ಕಾರಿನಲ್ಲಿ ಬಂದವರಿಗಷ್ಟೇ ಮಾನ್ಯತೆ ಇದ್ದು, ಭೀಮಸಮುದ್ರದಿಂದ ಜಿ.ಎಂ.ಸಿದ್ದೇಶ್ವರ್ ದಾವಣಗೆರೆಗೆ ಬಂದ ನಂತರ ಪಕ್ಷದಲ್ಲಿ ತತ್ವ, ಸಿದ್ಧಾಂತ, ಪ್ರಾಮಾಣಿಕತೆ ಮುಗಿದೆ ಹೋಗಿದೆ ಎಂದು ಹಿರಿಯ ಮುಖಂಡ ಮಟ್ಟಿಕಲ್ಲು ಆರ್.ಪ್ರತಾಪ್ ದೂರಿದರು.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಉಡಾಫೆ ಮಾತುಗಳನ್ನು ಸಂಸದರು ಮೊದಲು ಬಿಡಲಿ. ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದ ಹಿರಿಯ ಮುಖಂಡರು, ಕಾರ್ಯಕರ್ತರಿಗೆ ಗೌರವ ಕೊಡುವುದು ಕಲಿಯಲಿ ಎಂದರು. ನಾವು ಪಕ್ಷಕ್ಕಾಗಿ ಯಾವುದೇ ಸ್ವಾರ್ಥವಿಲ್ಲದೇ ದುಡಿದವರು, ಸ್ವಲ್ಪಮಟ್ಟಿಗೆ ಸಹಾಯ ಮಾಡಿರೆಂದರೆ, ಏನೇ ಕೇಳಿಕೊಂಡು ಹೋದರೂ ಹಳಬನಾದರೆ ಏನು ಎನ್ನುವಂತೆ ಮಾತನಾಡುತ್ತಾರೆ. ಎಲ್.ಕೆ.ಅಡ್ವಾಣಿ ಈಗ ಎಲ್ಲಿದ್ದಾರೆ ಗೊತ್ತಿಲ್ವಾ ಎಂಬ ಮಾತುಗಳನ್ನಾಡುತ್ತಾರೆ. ಬಿಜೆಪಿಯಲ್ಲಿ ಈಗಿನ ಬೆಳವಣಿಗೆ ನೋಡಿದರೆ, ಮನಸ್ಸಿಗೆ ನೋವಾಗುತ್ತದೆ ಎಂದು ಅಳಲು ತೋಡಿಕೊಂಡರು.
ತೊಂಬತ್ತರ ದಶಕದಲ್ಲಿ ಶ್ರೀರಾಮ ಜನ್ಮಭೂಮಿ ರಥಯಾತ್ರೆ ವೇಳೆ ನಡೆದ ಗೋಲಿಬಾರ್‌ನಲ್ಲಿ ಮೃತಪಟ್ಟ ಕಾರ್ಯಕರ್ತರ ಕುಟುಂಬಗಳು ಇಂದಿಗೂ ದಾವಣಗೆರೆಯಲ್ಲಿ ಕಣ್ಣೀರಿನಲ್ಲಿ ಕೈತೊಳೆಯುತ್ತಿವೆ. ಅಂತಹ ಕುಟುಂಬಗಳ ಬಡತನವೂ ಹಾಗೆಯೇ ಇದೆ. ಅಧಿಕಾರಕ್ಕೆ ಬಂದವರು ಅಂತಹವರನ್ನು ಗುರುತಿಸಿ, ಒಂದು ಆಶ್ರಯ ಸೂರು ಕಲ್ಪಿಸುವ ಮನಸ್ಸನ್ನೂ ಮಾಡಲಿಲ್ಲ. ಸಹಾಯ ಕೋರಿದರೆ ಅದಕ್ಕೂ ತಮಗೂ ಸಂಬಂಧವಿಲ್ಲದಂತೆ ವರ್ತಿಸುತ್ತಾರೆ. ನಮಗೆ ಬಿಜೆಪಿ ಮುಖ್ಯವೇ ಹೊರತು, ಅಭ್ಯರ್ಥಿಯಲ್ಲ. ಹಿಂದುತ್ವ, ಪಕ್ಷದ ತತ್ವ, ಸಿದ್ಧಾಂತಕ್ಕಾಗಿ ಎಲ್ಲರೂ ಕೆಲಸ ಮಾಡುತ್ತಾರೆ. ಬಿಜೆಪಿಯನ್ನು ಜಿಲ್ಲೆಯಲ್ಲಿ ಕಟ್ಟಿ ಬೆಳೆಸಿದವರು ಉಸಿರಾಡದ ಸ್ಥಿತಿಯಲ್ಲಿದ್ದಾರೆ. ಅಂತಹವರನ್ನು ಸೌಜನ್ಯಕ್ಕಾದರೂ ಕರೆದು ಸಾಂತ್ವನ ಹೇಳುವ, ಗುರುತಿಸುವ ಕೆಲಸ ಯಾವೊಬ್ಬ ನಾಯಕರೂ ಇಲ್ಲಿ ಮಾಡಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.ಸಂಸದರ ಮಂಡಿಗೆ ನಮಸ್ಕರಿಸಿದರೆ ಸಾಕು ಅಂತಹವರು ಬೆಳೆಯುತ್ತಾರೆ. ಇದು ಬಿಜೆಪಿಯ ಈಗಿನ ಪರಿಸ್ಥಿತಿ. ಆದರೆ, ಈ ಹಿಂದೆ ಹೀಗೆಲ್ಲಾ ಇರಲಿಲ್ಲ. ಬಿಜೆಪಿಗಾಗಿ ದುಡಿದವರಿಗೆ ಈಗ ಪಕ್ಷದಲ್ಲಿ ಯಾವುದೇ ಗೌರವವಿಲ್ಲ, ಯಾವುದೇ ಸೌಲಭ್ಯವೂ ಇಲ್ಲ. ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಬಳಿ ಹೋದರೆ, ಅಹವಾಲು ಆಲಿಸಿ, ಕೈಲಾದರೆ ನೆರವು ನೀಡುತ್ತಾರೆ. ತಮ್ಮಿಂದ ಸಾಧ್ಯವಾದರೆ ಯಾವುದೇ ಸಮಸ್ಯೆ ಪರಿಹರಿಸುತ್ತಾರೆ. ಸರ್ಕಾರದ ಕೆಲಸಗಳಿದ್ದರೆ ಮಾಡಿಸಿಕೊಡುತ್ತಾರೆ. ಆದರೆ, ಸಂಸದರ ಬಳಿ ಹೋದವರು ಉಡಾಫೆ ಮಾತು ಕೇಳಿಕೊಂಡು ಬರಬೇಕು ಎಂದರು.
ಪಕ್ಷದ ಮುಖಂಡರಾದ ಕಕ್ಕರಗೊಳ್ಳ ಕೆ.ಪಿ.ಕಲ್ಲಿಂಗಪ್ಪ, ಕಡೂರು ಉಮಾಪತಿ, ಪ್ರವೀಣ ಜಾಧವ್, ಅಣಜಿ ಬಸವರಾಜ, ಜಯರುದ್ರೇಶ ಇತರರಿದ್ದರು.ದಾವಣಗೆರೆ ಜಿಲ್ಲೆ ಮೂಲದವರಿಗೆ ಟಿಕೆಟ್ ನೀಡಿ
ಸಂಸದರಿಂದ ಉಡಾಫೆ ನಡವಳಿಕೆ ಸರಿಯಲ್ಲ. ನಾವೂ ಬಿಜೆಪಿ ಕೆಲಸ ಮಾಡುತ್ತೇವೆ. ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಬೇಕೆಂಬ ಗುರಿಯೊಂದಿಗೆ ಮತ ಚಲಾವಣೆಯಾಗುತ್ತದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನ್ನು ದಾವಣಗೆರೆ ಜಿಲ್ಲೆ ಮೂಲದವರಿಗೆ ನೀಡಬೇಕು. ಬೇರೆ ಜಿಲ್ಲೆಯವರಿಗೆ ಯಾಕೆ ಟಿಕೆಟ್ ನೀಡಬೇಕು? ಪಕ್ಷಕ್ಕಾಗಿ ದುಡಿದ ನಾಯಕರು, ಮುಖಂಡರು, ಕಾರ್ಯಕರ್ತರು ಇಲ್ಲಿ ಇಲ್ಲವೇ? ಅಂತಹವರನ್ನು ಗುರುತಿಸಿ, ಟಿಕೆಟ್ ನೀಡಿ ಎಂಬುದು ನಮ್ಮ ಬೇಡಿಕೆ ಎಂದು ಆರ್. ಪ್ರತಾಪ್ ಸ್ಪಷ್ಟಪಡಿಸಿದರು............