ಸಾರಾಂಶ
ಸವಣೂರು: ಇಂದಿನ ಯುವ ಸಮೂಹ ಮನೆಯಲ್ಲಿ ತಂದೆ-ತಾಯಿಯನ್ನು ಯಾರು ಭಯ ಭಕ್ತಿಯಿಂದ, ಹೃದಯದಿಂದ ಪೂಜಿಸುತ್ತಾರೋ ಅಂಥವರು ಜೀವನದಲ್ಲಿ ಮುಕ್ತಿಯನ್ನು ಹೊಂದಲು ಸಾಧ್ಯವೆಂದು ಕೂಡಲ ಗುರುನಂಜೇಶ್ವರ ಮಠ ಗುರುಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ತಾಲೂಕಿನ ಮಂತ್ರವಾಡಿ ಗ್ರಾಮದ ಶ್ರೀ ಗ್ರಾಮದೇವಿ ದೇವಸ್ಥಾನದ ಆವರಣದಲ್ಲಿ ೧೭ನೇ ವರ್ಷದ ಗ್ರಾಮದೇವಿ ಪುರಾಣ ಪ್ರವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀವರ್ಚನ ನೀಡಿದ ಶ್ರೀಗಳು, ಮನುಷ್ಯನ ದುರಾಸೆ ಬಹಳ ಕೆಟ್ಟದು ಅದನ್ನು ಹೋಗಲಾಡಿಸಲು ದೇವಿಯ ಪುರಾಣ, ಪ್ರವಚನ ಗ್ರಾಮೀಣ ಪ್ರದೇಶಗಳಲ್ಲಿ ಸಹಕಾರಿಯಾಗಿದೆ. ನಿಮ್ಮ ಜೀವನ ಪಾವನವಾಗಲು ಪುರಾಣ ಪ್ರವಚನದಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳುವುದು ಅವಶ್ಯವಿದೆ. ಸದ್ಭಕ್ತರು ಮಾತೆ ಗ್ರಾಮದೇವತೆಯ ಮಹಾತ್ಮೆಯನ್ನು ಆಲಿಸಿ ಮಾತೆಯ ಕೃಪೆಗೆ ಪಾತ್ರರಾಗಬೇಕೆಂದು ಉಪದೇಶ ನೀಡಿದರು.ಸತತ ೯ ದಿನಗಳ ಕಾಲದೇವಿ ಮಹಾತ್ಮೆಯ ಪ್ರವಚನ ಕೈಗೊಳ್ಳಲಿರುವ ಜೇವರ್ಗಿ ತಾಲೂಕಿನ ಅರಳಗುಂಡಗಿಯ ವೇ.ಮೂ. ಶಿವಯ್ಯಸ್ವಾಮೀಜಿ ೪ನೇ ಅಧ್ಯಾಯದಲ್ಲಿನ ಮಹತ್ವವನ್ನು ತಿಳಿಸಿ ಬಯಸಿದ ಆಸೆಗಳನ್ನು ಈಡೇರಿಸಿಕೊಳ್ಳಲು ನವರಾತ್ರಿಯ ಸಮಯದಲ್ಲಿ ಒಂಬತ್ತು ದಿನ ಭಕ್ತರು ಉಪವಾಸವನ್ನು ಮಾಡುತ್ತಾರೆ. ಕೆಲವರು ಅಲ್ಪ ಆಹಾರ ಸೇವಿಸಿ ಆಚರಿಸಿದರೆ ಇನ್ನೂ ಕೆಲವರು ಒಂದು ಹೊತ್ತಿನ ಆಹಾರವನ್ನು ಮಾತ್ರ ಸೇವಿಸಿ ಉಪವಾಸ ಆಚರಿಸುತ್ತಾರೆ. ಒಮ್ಮೆ ಭೂಮಿಯ ಮೇಲೆ ಅಂಧಕಾರ ಪಸರಿಸಿತ್ತು. ಆಗ ಭೂಮಿ ಮೇಲಿನ ಅಂಧಕಾರವನ್ನು ಹೋಗಲಾಡಿಸಿದ ಕೂಷ್ಮಾಂಡ ದೇವಿ ರಾಕ್ಷಸನನ್ನು ಸಂಹರಿಸಲು ಅವತರಿಸಿದ ದುರ್ಗೆಯ ನಾಲ್ಕನೇ ರೂಪ. ಈ ಸಮಯದಲ್ಲಿ ಜಗತ್ತು ಅಸ್ತಿತ್ವದಲ್ಲಿರಲಿಲ್ಲ. ಸುತ್ತಲೂ ಕತ್ತಲೆ ಆವರಿಸಿದ್ದ ಸಮಯದಲ್ಲಿ ದೇವಿ ಪ್ರತ್ಯಕ್ಷಳಾಗಿ, ಬಳಿಕ ಸೃಷ್ಟಿ ಬದಲಾಯಿತು. ಎಲ್ಲೆಡೆ ಬೆಳಕು ಆವರಿಸಿತು, ಹೀಗಾಗಿ ಈಕೆಯನ್ನು ಆದಿಸ್ವರೂಪ ಎಂದು ಕರೆಯಲಾಗುತ್ತದೆ. ಪುರಾಣಗಳ ಪ್ರಕಾರ ಕೂಷ್ಮಾಂಡಾ ದೇವಿಯ ದೇಹದ ತೇಜಸ್ಸು ಸೂರ್ಯನಂತಿದೆ. ಕೂಷ್ಮಂಡಾ ದೇವಿಯನ್ನು ಯಾರೂ ಹೃದಯದಿಂದ ಪೂಜಿಸುತ್ತಾರೋ ಅಂಥವರಿಗೆ ದೇವಿ ದುಃಖಗಳಿಂದ ಕಾಪಾಡುತ್ತಾಳೆ. ಶಕ್ತಿ, ಖ್ಯಾತಿ, ಆರೋಗ್ಯ ನೀಡುತ್ತಾಳೆ ಎಂದರು. ಜೇವರ್ಗಿಯ ವೀರೇಶಕುಮಾರ ಕಟ್ಟಿ ಸಂಗಾವಿ ತಬಲಾ ಸಾಥ್ ನೀಡಿದರು. ಖ್ಯಾತ ಗಾಯಕ ಶ್ರೀಶೈಲ ಹಡಗಲಿ ಅವರಿಂದ ಗಾನಸುಧೆ ಮೊಳಗಿತು.
ಪುರಾಣ ಪ್ರವಚನದ ಪ್ರಯುಕ್ತ ಜಗದೇಶ ಅಂಗಡಿ ಹಾಗೂ ಮಕ್ಕಳು ಪ್ರಸಾದ ಸೇವೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಗುರುಸಿದ್ದಯ್ಯ ಹಿರೇಮಠ, ಜಗದೇಶ ಅಂಗಡಿ, ಸತೀಶ ಅಂಗಡಿ, ಫಕ್ಕೀರೇಶ ನೆಲ್ಲೂರ ಹಾಗೂ ಗ್ರಾಮಸ್ಥರು ಇದ್ದರು. ಶಿಕ್ಷಕ ರವಿ ಅರಗೋಳ ಕಾರ್ಯಕ್ರಮ ನಿರ್ವಹಿಸಿದರು.