ಸಾರಾಂಶ
ಕನ್ನಡಪ್ರಭ ವಾರ್ತೆ ಮಲ್ಪೆ
ಇತ್ತೀಚೆಗೆ ನಿಧನರಾದ ಕಥೊಲಿಕ ಕ್ರೈಸ್ತ ಸಮುದಾಯದ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರಿಗೆ ತೊಟ್ಟಂ ಸಂತ ಅನ್ನಮ್ಮ ಚರ್ಚಿನಲ್ಲಿ ಶುಕ್ರವಾರ ಪವಿತ್ರ ಬಲಿಪೂಜೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತುಈ ವೇಳೆ ಮಾತನಾಡಿದ ಚರ್ಚಿನ ಪ್ರಧಾನ ಧರ್ಮಗುರು ವಂ.ಡೆನಿಸ್ ಡೆಸಾ, ಪೋಪ್ ಫ್ರಾನ್ಸಿಸ್ ಎಲ್ಲಾ ಅರ್ಥದಲ್ಲೂ ಜನರ ಪೋಪ್ ಆಗಿದ್ದರು. ಅವರು ಎಲ್ಲರ ಬಗ್ಗೆ ಕಾಳಜಿ ವಹಿಸುತ್ತಿದ್ದರು ಮತ್ತು ಎಲ್ಲರನ್ನೂ ಹೃತ್ಪೂರ್ವಕವಾಗಿ ಅಪ್ಪಿಕೊಂಡರು ಎಂದರು.ಅವರು ದೀನ ದಲಿತರನ್ನು ಮತ್ತು ಪರಿತ್ಯಕ್ತರನ್ನು ಹೇಗೆ ಪ್ರೀತಿಸಬೇಕೆಂದು ಜಗತ್ತಿಗೆ ಕಲಿಸಿದರು. ನಮ್ರತೆ ಮತ್ತು ಮುಕ್ತತೆ, ಕರುಣೆ, ಬಡವರ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಕಾಳಜಿ, ಅಂತರ - ಧರ್ಮೀಯ ಸಂವಾದದ ಮೇಲಿನ ಒತ್ತು ನೀಡಿದ್ದರು ಮತ್ತು ಸಿದ್ಧಾಂತದಲ್ಲಿ ಅವರ ಸಂಪ್ರದಾಯವಾದದ ಹೊರತಾಗಿಯೂ ಉದಾರವಾದಿ ಪ್ರವೃತ್ತಿಯನ್ನು ಜಗತ್ತಿಗೆ ಸಾರಿದ್ದರು. ಧಾರ್ಮಿಕ ಸಾಮರಸ್ಯ ಮತ್ತು ಜಾಗತಿಕ ಶಾಂತಿಗೆ ಪೋಪ್ ಫ್ರಾನ್ಸಿಸ್ ಅವರ ಕೊಡುಗೆ ಅಪಾರವಾದುದು ಎಂದರು.
ಅಗಲಿದ ಪೋಪ್ ಅವರ ಆತ್ಮಕ್ಕೆ ಶಾಂತಿಯನ್ನು ಕೋರಿ ಪವಿತ್ರ ಬಲಿಪೂಜೆ ಸಮರ್ಪಿಸಲಾಯಿತು.ಈ ವೇಳೆ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಸುನೀಲ್ ಫರ್ನಾಂಡಿಸ್, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಯೋಜಕಿ ವನಿತಾ ಫರ್ನಾಂಡಿಸ್, ಕಾನ್ವೆಂಟಿನ ಮುಖ್ಯಸ್ಥ ಸಿಸ್ಟರ್ ಸುಶ್ಮಾ ಹಾಗೂ ಚರ್ಚಿನ ಭಕ್ತಾದಿಗಳು ಉಪಸ್ಥಿತರಿದ್ದರು.