ವಿಚಾರವಂತ ನಾಯಕರು ರಾಜಕಾರಣಕ್ಕೆ ಅಗತ್ಯ

| Published : Oct 31 2023, 01:16 AM IST

ಸಾರಾಂಶ

ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್‌. ಪಟೇಲರ 93ನೇ ಜನ್ಮದಿನಾಚರಣೆ ಹಾಗೂ ಸಾವಯವ ರಾಜಕಾರಣ
ಕನ್ನಡಪ್ರಭ ವಾರ್ತೆ, ಭದ್ರಾವತಿ ರಾಜಕಾರಣದಲ್ಲಿ ಆಲೋಚನಾಶಕ್ತಿ, ವಿಚಾರಶಕ್ತಿ ಹೊಂದಿರುವ ನಾಯಕರ ಅಗತ್ಯವಿದೆ. ಆದರೆ, ಇಂದು ಎಲ್ಲ ಪಕ್ಷಗಳಲ್ಲೂ ವ್ಯಾಪಾರಿ ಮನೋಭಾವ ಹೆಚ್ಚುತ್ತಿದೆ. ಹಣವಿದ್ದವರು ಪ್ರಬಲ, ಹಣವಿಲ್ಲದವರು ದುರ್ಬಲ ಎಂಬ ಮನೋಭಾವನೆ ಬೆಳೆದುಬಿಟ್ಟಿದೆ. ಈ ರೀತಿಯ ಭಾವನೆ ಸರಿಯಲ್ಲ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಹೇಳಿದರು. ನಗರದ ಶ್ರೀವೀರಭದ್ರೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ಜೆ.ಎಚ್. ಪಟೇಲ್ ಫೌಂಡೇಷನ್ ವತಿಯಿಂದ ಆಯೋಜಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್‌. ಪಟೇಲರ 93ನೇ ಜನ್ಮದಿನಾಚರಣೆ ಹಾಗೂ ಸಾವಯವ ರಾಜಕಾರಣ, ಚುನಾವಣೆ- ಸುಧಾರಣೆ ವಿಷಯ ಕುರಿತು ಹಮ್ಮಿಕೊಳ್ಳಲಾಗಿದ್ದ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಣವೇ ಮೇಲುಗೈ ಸಾಧಿಸುತ್ತಿರುವ ಹೊಟ್ಟೆಪಾಡಿನ ರಾಜಕಾರಣದಿಂದ ರಾಜ್ಯ, ರಾಷ್ಟ್ರದ ಏಳಿಗೆ ಅಸಾಧ್ಯ. 1983ರ ಚುನಾವಣೆಯಲ್ಲಿ ನಾಯಕರಿಗೆ ಹಣವಿಲ್ಲದಿದ್ದರೂ ಜನರೇ ಬಟ್ಟೆ ಹೊಲಿಸಿ, ಹಣ ನೀಡಿ ಚುನಾವಣೆಗೆ ನಿಲ್ಲಿಸುತ್ತಿದ್ದರು. ಆದರೆ ಇಂದು ಮತದಾರರು ಹಣ ಪಡೆಯುವ ಮೂಲಕ ಪ್ರಶ್ನಿಸುವ ನೈತಿಕತೆ ಕಳೆದುಕೊಳ್ಳುತ್ತಿದ್ದಾರೆ ಎಂದರು. ಅಧಿಕಾರ ಇದ್ದಾಗಲೂ, ಇಲ್ಲದಿದ್ದಾಗಲೂ ಪ್ರಾಮಾಣಿಕವಾಗಿ ರಾಜಕಾರಣ ಮಾಡಿದ ಕೆಲವೇ ಕೆಲವು ರಾಜಕಾರಣಿಗಳಲ್ಲಿ ಜೆ.ಎಚ್.ಪಟೇಲರು ಸಹ ಒಬ್ಬರಾಗಿದ್ದಾರೆ. ಜಾತಿ, ಧರ್ಮದ ಹೆಸರಿನಲ್ಲಿ ಪಟೇಲರು ಎಂದಿಗೂ ರಾಜಕಾರಣ ಮಾಡಲಿಲ್ಲ. ಪ್ರಸ್ತುತ ರೈತನಾಯಕರು ವಿಧಾನಸಭೆ ಪ್ರವೇಶಿಸುವುದು ಅಸಾಧ್ಯ ಎನ್ನುವ ವಾತಾವರಣ ನಿರ್ಮಾಣವಾಗಿದೆ. ನಾವುಗಳು ಅಧಿಕಾರಕ್ಕಾಗಿ ನೈತಿಕತೆ ಮೀರಿಲ್ಲ ಎಂದು ಹಳೆಯ ಘಟನೆಗಳನ್ನು ಸ್ಮರಿಸಿದರು. ಜೆ.ಎಚ್. ಪಟೇಲರ ಪುತ್ರ, ಮಾಜಿ ಶಾಸಕ ಮಹಿಮ ಜೆ. ಪಟೇಲ್, ವಿಧಾನ ಪರಿಷತ್ತು ಮಾಜಿ ಸದಸ್ಯ ಎಂ.ಪಿ.ನಾಡಗೌಡ, ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಕೆ.ಜಿ.ಎಲ್ ರವಿ, ಕಲ್ಪನ ಗೌಡ, ಆರ್.ಪಿ. ಯಶೋಧ, ಶಕುಂತಲ ಶೆಟ್ಟಿ, ಕರವೇ ಮಹಿಳಾ ಅಧ್ಯಕ್ಷೆ ಜ್ಯೋತಿ ಸೋಮಶೇಖರ್, ನಗರಸಭೆ ಸದಸ್ಯರಾದ ಆರ್. ಮೋಹನಕುಮಾರ್, ಜಾರ್ಜ್, ಮುಖಂಡರಾದ ಸಿದ್ದಲಿಂಗಯ್ಯ, ಡಿ.ಜೆ ಪ್ರಭು, ಮೋಸಸ್ ರೋಸಯ್ಯ, ಜಾನ್ ಬೆನ್ನಿ, ವೈ.ಶಶಿಕುಮಾರ್, ಯುವರಾಜ್, ಕಾರ್ಯಕ್ರಮದ ಆಯೋಜಕ ಹಾಗೂ ಜೆಡಿಯು ಮುಖಂಡ ಶಶಿಕುಮಾರ್ ಗೌಡ, ಬಾಬು ದೀಪಕ್‌ಕುಮಾರ್ ಇನ್ನಿತರರು ಉಪಸ್ಥಿತರಿದ್ದರು. - - - ಟಾಪ್‌ ಕೋಟ್‌ ಚಳವಳಿಗಳಿಗೆ ರಾಜಕಾರಣ ಬದಲಿಸುವ ಶಕ್ತಿ ಇದೆ. ಈ ಹಿಂದಿನ ಚಳವಳಿಗಳು ಇದಕ್ಕೆ ಉದಾಹರಣೆಯಾಗಿವೆ. ಚಳವಳಿಯಿಂದಲೇ ಎಲ್ಲವನ್ನು ಮಾಡಲು ಸಾಧ್ಯವಿಲ್ಲ. ರಾಜಕಾರಣಕ್ಕೆ ಬರಬೇಕೆಂಬ ಪಟೇಲರ ನಿಲುವು ಸರಿಯಾಗಿದ್ದು, ಅವರ ರಾಜಕಾರಣ ಇಂದಿಗೂ ಮಾದರಿಯಾಗಿದೆ - ಎಚ್‌.ಆರ್‌. ಬಸವರಾಜಪ್ಪ, ರೈತ ಮುಖಂಡ - - - -ಡಿ30ಬಿಡಿವಿಟಿ: ವಿಚಾರ ಸಂಕಿರಣವನ್ನು ರೈತ ಮುಖಂಡ ಎಚ್‌.ಆರ್. ಬಸವರಾಜಪ್ಪ ಉದ್ಘಾಟಿಸಿ ಮಾತನಾಡಿದರು.