ಸಾರಾಂಶ
ಆನ್ ಲೈನ್ ಗೇಮ್ ದಾಸರಾಗಿರುವ ಯುವಕರು ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ಬಂದು ನಿಂತಿರುವುದು ಆತಂಕಕಾರಿ ಬೆಳವಣಿಗೆ. ಯುವಕರ ಆತ್ಮಹತ್ಯೆಯಿಂದ ಆತನನ್ನೇ ನಂಬಿದ ಕುಟುಂಬದವರು ಇಂದು ಬೀದಿ ಪಾಲಾಗುತ್ತಿದ್ದಾರೆ. ಅಲ್ಲದೇ, ಈ ಚಟಕ್ಕೆ ಬಿದ್ದವರು ತಮಗೆ ಅರಿವಿಲ್ಲದಂತೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಶಿಕ್ಷೆಗೆ ಒಳಗಾಗುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಮದ್ದೂರು
ಅನಧಿಕೃತ ಆನ್ ಲೈನ್ ಗೇಮ್‌ಗೆ ಕಡಿವಾಣ ಹಾಕಲು ಸರ್ಕಾರ ಚಿಂತನೆ ನಡೆಸಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬುಧವಾರ ಹೇಳಿದರು.ತುಮಕೂರಿನಿಂದ ಮಂಡ್ಯದಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳುವ ಮಾರ್ಗ ಮಧ್ಯೆ ತಾಲೂಕಿನ ಸೋಮನಹಳ್ಳಿ ಸಮೀಪ ಶೋಷಿತ ಸಮುದಾಯ ವೇದಿಕೆ ರಾಜ್ಯಾಧ್ಯಕ್ಷ ಸುರೇಶ್ ಕಂಠಿ ಮತ್ತು ಮುಖಂಡರಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಆನ್ ಲೈನ್ ಗೇಮ್ ದಾಸರಾಗಿರುವ ಯುವಕರು ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ಬಂದು ನಿಂತಿರುವುದು ಆತಂಕಕಾರಿ ಬೆಳವಣಿಗೆ. ಯುವಕರ ಆತ್ಮಹತ್ಯೆಯಿಂದ ಆತನನ್ನೇ ನಂಬಿದ ಕುಟುಂಬದವರು ಇಂದು ಬೀದಿ ಪಾಲಾಗುತ್ತಿದ್ದಾರೆ. ಅಲ್ಲದೇ, ಈ ಚಟಕ್ಕೆ ಬಿದ್ದವರು ತಮಗೆ ಅರಿವಿಲ್ಲದಂತೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಶಿಕ್ಷೆಗೆ ಒಳಗಾಗುತ್ತಿದ್ದಾರೆ ಎಂದರು.ಆನ್ ಲೈನ್ ಗೇಮ್ ಅನ್ನು ರಾಜ್ಯದಲ್ಲಿ ಸಂಪೂರ್ಣ ಮಟ್ಟ ಹಾಕಲು ತೀರ್ಮಾನಿಸಿರುವ ಸರ್ಕಾರ ಬೆಂಗಳೂರಿನಲ್ಲಿ ಕಳೆದ ಮಂಗಳವಾರ ಕಾನೂನು ಸಚಿವ ಎಚ್.ಕೆ.ಪಾಟೀಲ್, ಐಟಿಬಿಟಿ ಸಚಿವ ಪ್ರಿಯಾಂಕ ಖರ್ಗೆ ನೇತೃತ್ವದಲ್ಲಿ ನಡೆದ ಸಭೆ ನಡೆಸಲಾಗಿದೆ ಎಂದರು.
ಈ ಸಂಬಂಧ ಒಂದು ತಿಂಗಳ ಒಳಗಾಗಿ ನಿಯಮ ರೂಪಿಸಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲಾಗುವುದು. ಆನಂತರ ಕಾಯ್ದೆ ಸ್ವರೂಪ ಹೇಗಿರಬೇಕು ಎಂಬುದನ್ನು ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.ಈ ವೇಳೆ ಶೋಷಿತ ಸಮುದಾಯಗಳ ರಾಜ್ಯ ಕಾರ್ಯದರ್ಶಿ ಸಿದ್ದರಾಮು, ಗ್ಯಾರಂಟಿ ಯೋಜನೆಗಳ ಜಿಲ್ಲಾ ಉಪಾಧ್ಯಕ್ಷ ರಾಜೇಂದ್ರ, ಗ್ರಾಪಂ ಮಾಜಿ ಸದಸ್ಯ ಸುರೇಶ, ಕಾಂಗ್ರೆಸ್ ಮುಖಂಡರಾದ ಮಹದೇವಯ್ಯ, ಪ್ರಸನ್ನ , ನಗರಕೆರೆ ಪುಟ್ಟ, ಮರಿದೇವ್ರು, ಗಂಗಾಧರ, ಸತೀಶ್ ಸೋಮನಹಳ್ಳಿ, ಸುನಿಲ್ ಮತ್ತಿತ ರರು ಇದ್ದರು.