ಉಪನಗರ ರೈಲ್ವೆಗಾಗಿ ದಾಖಲೆಯ 31 ಮೀ. ಉದ್ದದ ಯು-ಗರ್ಡರ್‌

| Published : Jan 08 2024, 01:45 AM IST

ಉಪನಗರ ರೈಲ್ವೆಗಾಗಿ ದಾಖಲೆಯ 31 ಮೀ. ಉದ್ದದ ಯು-ಗರ್ಡರ್‌
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಅತೀ ಉದ್ದದ ಯು-ಗರ್ಡರ್‌ಅನ್ನು ಬೆಂಗಳೂರು ಉಪನಗರ ರೈಲ್ವೆಗಾಗಿ ದೇವನಹಳ್ಳಿಯಲ್ಲಿ ನಿರ್ಮಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ಉಪನಗರ ರೈಲ್ವೆ ಯೋಜನೆಯ ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ನಡುವಿನ ‘ಮಲ್ಲಿಗೆ’ ಮಾರ್ಗದ ಎಲಿವೆಟೆಡ್‌ ಕಾರಿಡಾರ್‌ಗಾಗಿ ದೇಶದಲ್ಲೇ ಮೊದಲ ಬಾರಿಗೆ 31 ಮೀಟರ್‌ ಉದ್ದದ ಯು-ಗರ್ಡರ್‌ (ಸಿಮೆಂಟ್- ಕಬ್ಬಿಣದ ತೊಲೆ) ಸಿದ್ಧಪಡಿಸಲಾಗಿದೆ.

‘ದೇಶದ ಮೆಟ್ರೋಗಳಲ್ಲಿ 28 ಮೀ. ಉದ್ದದ ಯು ಗರ್ಡರ್ ತಯಾರಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಬೆಂಗಳೂರು ಉಪನಗರ ರೈಲು ಯೋಜನೆಯಲ್ಲಿ ಈ ದಾಖಲೆಯನ್ನು ಮುರಿಯಲಾಗಿದೆ. ‘ಯು’ ಆಕಾರದಲ್ಲಿರುವ ಇಂತಹ 450 ‘ಯು-ಗರ್ಡರ್’ಗಳು ಮಲ್ಲಿಗೆ ಮಾರ್ಗಕ್ಕೆ ಬೇಕಾಗಿವೆ. ಇದನ್ನು ಯಶವಂತಪುರ-ಹೆಬ್ಬಾಳ ನಡುವಿನ 8 ಕಿ.ಮೀ. ಮಾರ್ಗದಲ್ಲಿ ಶೀಘ್ರವೇ ಅಳವಡಿಸಲಾಗುತ್ತಿದೆ.

ಕಾರಿಡಾರ್-2ರಲ್ಲಿ ಅಳವಡಿಕೆ ಆಗಲಿರುವ 31 ಮೀ. ಉದ್ದದ ಯು-ಗರ್ಡರ್ ಅನ್ನು ದೇವನಹಳ್ಳಿಯಲ್ಲಿರುವ ಕಾಮಗಾರಿ ಸ್ಥಾವರದಲ್ಲಿ (ಕಾಸ್ಟಿಂಗ್ ಯಾರ್ಡ್) ಶನಿವಾರ ಸಿದ್ಧಪಡಿಸಲಾಗಿದೆ. ಒಂದು ಯು ಗರ್ಡರ್ ತಯಾರಿಕೆಗೆ ಎಂ60 ಗುಣಮಟ್ಟದ 69.5 ಕ್ಯೂಬಿಕ್ ಮೀಟರ್ ಕಾಂಕ್ರೀಟ್ ಬೇಕಾಗುತ್ತದೆ. ಈ ಗರ್ಡರ್‌ 178 ಟನ್ ತೂಕವಿರಲಿದೆ.

ಈ ರೀತಿಯ ಗರ್ಡರ್‌ ನಿರ್ಮಾಣದಿಂದ ಇವುಗಳ ಅಳವಡಿಕೆಗೆ ತಗುಲುವ ಸಮಯ ಸಾಕಷ್ಟು ಉಳಿಯಲಿದೆ. ಉದ್ದದ ಗರ್ಡರ್ ಬಳಕೆಯಿಂದ ನೇರವಾಗಿ ಹಳಿಗಳನ್ನು ಅಳವಡಿಸಲು ಸಾಧ್ಯವಾಗಲಿದೆ. ಇದನ್ನು ಆಸ್ ಸಿಸ್ಟಮ್ ಕಂಪನಿಯು ಉಪನಗರ ರೈಲು ಯೋಜನೆಗಾಗಿ ವಿನ್ಯಾಸ ಮಾಡಿದೆ. ಚೆನ್ನೈನ ಐಐಟಿ ಮತ್ತು ಜನರಲ್ ಕನ್ಸಲ್ಟೆಂಟ್ ಕಂಪನಿಗಳು ಕೂಡ ಇದರಲ್ಲಿ ಸಕ್ರಿಯ ಪಾತ್ರ ವಹಿಸಿ, ಗುಣಮಟ್ಟವನ್ನು ಖಾತ್ರಿಪಡಿಸಿವೆ ಎಂದು ಪ್ರಕಟಣೆ ತಿಳಿಸಿದೆ.31 ಮೀ. ಯು-ಗರ್ಡರ್ ಸಿದ್ಧಪಡಿಸಿರುವುದು ಎಂಜಿನಿಯರಿಂಗ್‌ನ ತಾಂತ್ರಿಕ ಅದ್ಭುತ. ಸರ್ಕಾರಿ ಸ್ವಾಮ್ಯದ ಕೆ-ರೈಡ್ ಇದರ ಉಸ್ತುವಾರಿ, ಗುಣಮಟ್ಟ ನೋಡುತ್ತಿದೆ.

-ಎಂ.ಬಿ.ಪಾಟೀಲ್‌, ಮೂಲಸೌಕರ್ಯ ಅಭಿವೃದ್ಧಿ ಸಚಿವ