ಸಾರಾಂಶ
ಕನ್ನಡಪ್ರಭ ವಾರ್ತೆ ಮೂಲ್ಕಿ
ತುಳುನಾಡಿನಲ್ಲಿ ಕೋಟಿ ಚೆನಯ್ಯರಷ್ಟೇ ಕಾಂತಾಬಾರೆ-ಬೂದಾಬಾರೆಯವರ ಜನ್ಮಸ್ಥಾನ ಮೂಲ್ಕಿ ಸೀಮೆಯ ಕೊಲ್ಲೂರು ಕಾಂತಾಬಾರೆ ಬೂದಾಬಾರೆಯಲ್ಲಿದ್ದ ಸುಮಾರು 1 ಸಾವಿರ ವರ್ಷಗಳ ಇತಿಹಾಸದ ತಾಕೊಡೆ ಮರ ಧಾರಶಾಹಿಯಾಗಿದೆ.ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಅಪರೂಪಕ್ಕೆ ಕಾಣಸಿಗುವ ತಾಕೊಡೆ ಮರ ಕೊಲ್ಲೂರು ಕಾಂತಾಬಾರೆ ಬೂದಾಬಾರೆ ಜನ್ಮಕ್ಷೇತ್ರದಲ್ಲಿ ಪಾವಿತ್ರ್ಯತೆ ಪಡೆದಿದೆ. ಬೃಹದಾಕಾರದ ಈ ಮರ ಉರುಳಿಬಿದ್ದರೂ ಕ್ಷೇತ್ರದ ನ್ಯಾಯ ಚಾವಡಿ ಸಹಿತ ಆವರಣ ಗೋಡೆಗೆ ಯಾವುದೇ ಹಾನಿಯಾಗಿಲ್ಲ. ಸಹಸ್ರಮಾನದ ಇತಿಹಾಸದ ಜೀವಂತ ಸಾಕ್ಷಿಯಾಗಿ ಬೃಹತ್ತಾಗಿ ಬೆಳೆದು ನಿಂತಿದ್ದ ತಾಕೊಡೆ ಮರ ಶುಕ್ರವಾರ ಮಧ್ಯಾಹ್ನ ಬುಡಸಹಿತ ಧರೆಗುರುಳಿದಿದೆ. ಸುಮಾರು 800ರಿಂದ 1000 ವರ್ಷಗಳ ಹಿನ್ನೆಲೆಯು ಈ ತಾಕೊಡೆ ಮರಕ್ಕೆಇರುವುದು ಅಧ್ಯಯನಗಳಿಂದಲೂ ದೃಢಪಟ್ಟಿತ್ತು.
ತೊಟ್ಟಿಲು ತೂಗಿದ ಮರ: ಮೂಲ್ಕಿ ಸಾವಂತ ಅರಸರ ದಳವಾಯಿಗಳಾಗಿ ಕಾಂತಬಾರೆ- ಬೂದಬಾರೆಯರು ಇದ್ದರು ಅನ್ನುವುದು ಐತಿಹಾಸಿಕ ಸಾಕ್ಷಿಯಾದರೆ ಈ ಅವಳಿ ವೀರರು ಹುಟ್ಟಿದ್ದು ಇದೇ ತಾಕೊಡೆ ಮರದಡಿಯಲ್ಲಿ. ಆಗ ತಾನೆ ಹುಟ್ಟಿದ ಅವಳಿ ಮಕ್ಕಳನ್ನು ನೇಲೆ (ಬಟ್ಟೆಯ ತೊಟ್ಟಿಲು) ಹಾಕಿ ತೂಗಿದ್ದು ಇದೇ ತಾಕೊಡೆ ಮರದ ಪಡ್ಡಾಯಿ (ಪಡುವಣ- ಪಶ್ಚಿಮ) ಗೆಲ್ಲಿಗೆ ಅನ್ನುವುದು ಉಲ್ಲೇಖನೀಯ. ಬೃಹದಾಕಾರದ ಈ ಮರದ ಪಡ್ಡಾಯಿ ಗೆಲ್ಲು ( ಕೊಂಬೆ) ಕೆಲ ವರ್ಷಗಳ ಹಿಂದೆ ಭಾರಿ ಗಾಳಿ ಮಳೆಯ ಸಂದರ್ಭ ಬಿದ್ದಿತ್ತು. 2ರಿಂದ 3 ಮೀಟರ್‌ಗಳಷ್ಟು ವ್ಯಾಸವಿದ್ದ ಈ ಮರದ ಉತ್ತರ ದಿಕ್ಕಿನ ಕೊಂಬೆ ಕೆಲ ದಿನಗಳ ಹಿಂದೆ ಬಿದ್ದಿತ್ತು.ಹಳೆಬೇರು-ಹೊಸ ಚಿಗುರು: ಸುದೀರ್ಘ ಕಾಲಮಾನದಲ್ಲಿ ಈವರೆಗೂ ತಾಕೊಡೆ ಮರದ ಯಾವುದೇ ಗಿಡ ಚಿಗುರಿದರೂ ಜೀವಂತ ಉಳಿದಿರಲಿಲ್ಲ. ಆದರೆ ಅಂತ್ಯದ ಸೂಚನೆಯೋ ಎಂಬಂತೆ ಪರ್ಯಾಯವಾಗಿ ಪಕ್ಕದಲ್ಲಿ ತಾಕೊಡೆಯ ಗಿಡವೊಂದು ಭವಿಷ್ಯದ ಸಾಕ್ಷಿಯಾಗಿ ಗೋಚರವಾಗಿದೆ.
---ತಾಕೊಡೆ ಮರ ಜಿಲ್ಲೆಯಲ್ಲಿ ಕಾಣಸಿಗುವುದು ಅಪರೂಪವಾಗಿದ್ದು ಆಶ್ಚರ್ಯಕರವೆಂದರೆ ಧಾರಶಾಹಿಯಾದ ಮರದ ಬುಡದಲ್ಲಿ ಸಣ್ಣ ಗಿಡ ಬೆಳೆದಿದೆ. ಉರುಳಿಬಿದ್ದಿರುವ ತಾಕೊಡೆ ಮರ ನೋಡಲು ಭಕ್ತರ ದಂಡೇ ಕ್ಷೇತ್ರಕ್ಕೆ ಹರಿದು ಬರುತ್ತಿದ್ದು, ಇದೆಲ್ಲಾ ಜನ್ಮ ಕ್ಷೇತ್ರದ ಪವಾಡ. ಮುಂದಿನ ದಿನಗಳಲ್ಲಿ ಕ್ಷೇತ್ರದ ಪುರೋಹಿತ, ವಿದ್ವಾಂಸರು, ಆಡಳಿತ ಸಮಿತಿ ಹಾಗೂ ಸ್ಥಳೀಯರ ಜೊತೆ ಚರ್ಚಿಸಿ ಪ್ರಶ್ನೆಯ ಮೂಲಕ ಮರ ತೆರವುಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುವುದು
- ಗಂಗಾಧರ ಪೂಜಾರಿ, ಕಾಂತಾಬಾರೆ ಬೂದಾಬಾರೆ ಜನ್ಮ ಕ್ಷೇತ್ರದ ಅರ್ಚಕ