ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡುತಾಲೂಕಿನ ಕಾರ್ಯ ಗ್ರಾಮದ ಶ್ರೀ ಸಿದ್ದೇಶ್ವರಸ್ವಾಮಿ ಬೆಟ್ಟದಲ್ಲಿ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಉತ್ಸವಮೂರ್ತಿಯ ರಥೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು.ರಾಜ್ಯದ ನಾನಾ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಭಕ್ತರು ರಥೋತ್ಸವ ಕಣ್ತುಂಬಿಕೊಂಡರು.ಬೆಳಗಿನ ಜಾವ ದೇವಾಲಯದ ಗರ್ಭಗುಡಿಯಲ್ಲಿ ವಿಶೇಷ ಪುಷ್ಪಾಲಂಕಾರ ಹಾಗೂ ಪೂಜಾ ಕೈಂಕರ್ಯ ಕೈಗೊಂಡು ಮಹಾಮಂಗಳಾತಿ ನೆರವೇರಿಸಿದ ನಂತರ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ದೇವಾಲಯ ಒಳಪ್ರವೇಶಿಸಲು ಸರತಿ ಸಾಲಿನಲ್ಲಿ ಭಕ್ತರ ಸಂಖ್ಯೆ ಏರಿಕೆ ಕಂಡಿದ್ದರಿಂದ ನೂಕುನುಗ್ಗಲು ಉಂಟಾಯಿತು.ಇದಕ್ಕೂ ಮುನ್ನ ಕಾರ್ಯ ಗ್ರಾಮದಲ್ಲಿ ಸಿದ್ಧೇಶ್ವರಸ್ವಾಮಿಯ ಉತ್ಸವಮೂರ್ತಿಯನ್ನು ಅಲಂಕರಿಸಿದ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಬಗೆಬಗೆಯ ಪುಷ್ಪಾಲಂಕಾರ, ಹೊಂಬಾಳೆ, ಚಾಮರ, ವಿವಿಧ ವರ್ಣದ ವಸ್ತ್ರಗಳಿಂದ ಸಿಂಗರಿಸಿದ ರಥಕ್ಕೆ ವಾಟಾಳು ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಚಾಲನೆ ನೀಡಿದರು.ಉತ್ಸಾಹ ಭರಿತರಾದ ಭಕ್ತರು ಜೈಕಾರ ಹಾಕುತ್ತಾ ರಥವನ್ನು ಬೆಟ್ಟದ ತಪ್ಪಲಿಗೆ ಎಳೆದು ತಂದರು. ನಂತರ ರಥದಿಂದ ಪಲ್ಲಕ್ಕಿಯನ್ನು ಬೇರ್ಪಡಿಸಿ ಭಕ್ತರು ಉತ್ಸವಮೂರ್ತಿ ಸಮೇತ ಪಲ್ಲಕ್ಕಿಯನ್ನು ಹೊತ್ತುಕೊಂಡು ಬೆಟ್ಟವನ್ನು ಏರಿದರು. ಬೆಟ್ಟದ ಮೇಲೆ ಹಾಗೂ ತಪ್ಪಲಿನ ಆಯಕಟ್ಟಿನ ಸ್ಥಳಗಳಲ್ಲಿ ಜಾತ್ರೆಗೆ ಆಗಮಿಸಿದ ಭಕ್ತರಿಗೆ ಸೇವಾರ್ಥದಾರರು ಪ್ರಸಾದ ವಿನಿಯೋಗ ಮಾಡಿದರು.ಜಾತ್ರಾ ಮಹೋತ್ಸವಕ್ಕೆ ಬೆಂಗಳೂರು, ಮೈಸೂರು ಹಾಗೂ ಚಾಮರಾಜನಗರ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯ ಜನರು ಭಾಗವಹಿಸಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
;Resize=(128,128))
;Resize=(128,128))
;Resize=(128,128))