ಶ್ರೀರಾಮಚಂದ್ರ ರಾಕ್ಷಸ ರಾವಣನನ್ನು ಸಂಹರಿಸಿದ ಪ್ರತೀಕವಾಗಿ ನಡೆಯುವ ವಿಜಯದಶಮಿಯಂದು ಮಹಾರಾಜಾ ಅಲಂಕಾರದಲ್ಲಿ ಕಂಗೊಳಿಸಿದ ಆರಾಧ್ಯದೈವ ಚೆಲುವನಾರಾಯಣಸ್ವಾಮಿ ದಿವ್ಯಮಂಗಳ ರೂಪವನ್ನು ನಾಡಿನ ವಿವಿದೆಡೆಯಿಂದ ಬಂದಿದ್ದ ಸಹಸ್ರರಾರು ಭಕ್ತರು ಕಣ್ತುಂಬಿಕೊಂಡರು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಶ್ರೀರಾಮಚಂದ್ರ ರಾಕ್ಷಸ ರಾವಣನನ್ನು ಸಂಹರಿಸಿದ ಪ್ರತೀಕವಾಗಿ ನಡೆಯುವ ವಿಜಯದಶಮಿಯಂದು ಮಹಾರಾಜಾ ಅಲಂಕಾರದಲ್ಲಿ ಕಂಗೊಳಿಸಿದ ಆರಾಧ್ಯದೈವ ಚೆಲುವನಾರಾಯಣಸ್ವಾಮಿ ದಿವ್ಯಮಂಗಳ ರೂಪವನ್ನು ನಾಡಿನ ವಿವಿದೆಡೆಯಿಂದ ಬಂದಿದ್ದ ಸಹಸ್ರರಾರು ಭಕ್ತರು ಕಣ್ತುಂಬಿಕೊಂಡರು.

ಹೊಯ್ಸಳರು ಮತ್ತು ವಿಜಯನಗರದ ಅರಸರ ಆರಾಧ್ಯದೈವ ನಾಡಹಬ್ಬ ದಸರಾ ನಡೆಯುವ ಮೈಸೂರು ಸಂಸ್ಥಾನದ ಕುಲದೈವ ಪೇಟ ಚಕ್ರ, ಶಂಖ, ಗಧೆ, ಕತ್ತಿ ಮುಂತಾದ ದಿವ್ಯಾಯುಧಗಳೊಂದಿಗೆ ಸಮಸ್ತ ಅನ್ಯಾಯಗಳನ್ನು ನಿರ್ಮೂಲನೆ ಮಾಡಲು ಧರೆಗಿಳಿದ ಚಕ್ರವರ್ತಿಯಂತೆ ಕಂಗೊಳಿಸಿದ ಶ್ರೀ ಚೆಲುವನಾರಾಯಣಸ್ವಾಮಿಯ ದಿವ್ಯಮಂಗಳ ರೂಪವನ್ನು ಕಣ್ತುಂಬಿಕೊಳ್ಳಲು ಇಡೀದಿನ ಮೇಲುಕೋಟೆಯಲ್ಲಿ ಭಕ್ತಸಾಗರವೇ ಆಗಮಿಸಿ ದರ್ಶನ ಪಡೆದರು.

ಬೆಟ್ಟದೊಡೆಯ ಶ್ರೀ ಯೋಗಾನರಸಿಂಹಸ್ವಾಮಿಗೂ ಸಹ ಮಹಾರಾಜರ ಸಾಂಪ್ರದಾಯಿಕ ಅಲಂಕಾರವನ್ನು ನೆರವೇರಿಸಲಾಗಿತ್ತು.

ಕಳೆದ ಹತ್ತು ದಿನಗಳಿಂದ ಮಹಾಲಕ್ಷ್ಮಿ ಕಲ್ಯಾಣನಾಯಕಿ ಅಮ್ಮನವರಿಗೆ ಬಂಗಾರದ ಶೇಷವಾಹನೋತ್ಸವ ನಡೆದವು.

ದೇವಿಗೆ ಹತ್ತು ದಿನಗಳ ಕಾಲ ವಿಶೇಷ ತೋಮಾಲೆ ಸೇವೆಗಳು, ಮಂಗಳವಾದ್ಯ ಮತ್ತು ದಿವ್ಯಪ್ರಬಂಧ ಪಾರಾಯಣದೊಂದಿಗೆ ನಡೆದ ಪಲ್ಲಕ್ಕಿ ಉತ್ಸವ ಹಾಗೂ ಬಂಗಾರದ ಶೇಷವಾಹನೋತ್ಸವ ಭಕ್ತರಿಗೆ ದೈವೀಕ ಅನುಭೂತಿ ನೀಡಿದವು.

ದೇವಾಲಯದ ಇಒ ಶೀಲಾ ಮಾರ್ಗದರ್ಶನದಲ್ಲಿ ಪಾರುಪತ್ತೇಗಾರರುಗಳಾದ ಸ್ಥಾನಾಚಾರ್ಯಶ್ರೀನಿವಾಸನರಸಿಂಹನ್ ಗುರೂಜಿ ಮತ್ತು ಎಂ.ಎನ್ ಪಾರ್ಥಸಾರಥಿ ಎಲ್ಲಾ ಸಿಬ್ಬಂದಿ ಸಹಕಾರದಲ್ಲಿ ಧಾರ್ಮಿಕ ಉತ್ಸವಗಳನ್ನು ಶಾಸ್ರ್ತೋಕ್ತವಾಗಿ ನಡೆಸಿದರು.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೂಚನೆಯಂತೆ ನವರಾತ್ರಿ ಅಂಗವಾಗಿ ಉತ್ಸವಬೀದಿ ಹಾಗೂ ರಾಜಗೋಪುರಕ್ಕೆ ದೀಪಾಲಂಕಾರ, ದಿನನಿತ್ಯ ಬಾಳೆಕಂಬದೊಂದಿಗೆ ತಳಿರುತೋರಣ, ಉತ್ಸವಕ್ಕೆ ವಿಶೇಷ ಮಂಗಳವಾದ್ಯ, ಅ.16ರಿಂದ 19ರವರೆಗೆ 4 ದಿನಗಳ ಕಾಲ ಸಂಗೀತ - ನೃತ್ಯ ಕಾರ್ಯಕ್ರಮಗಳು, ರಂಗವಲ್ಲಿ, ವೇಷಭೂಷಣ, ಚಿತ್ರಕಲೆ, ಪ್ರಬಂಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ವಿಜಯದಶಮಿಯಂದು ಚೆಲುವನಾರಾಯಣಸ್ವಾಮಿಯ ಕುದುರೆ ವಾಹನೋತ್ಸವದ ಜಂಬೂಸವಾರಿಗೆ ಪೊಲೀಸ್‌ ವಂಧನೆ, ಬ್ರಾಸ್ ಬ್ಯಾಂಡ್, ಜಾನಪದ ಕಲಾತಂಡಗಳ ನಿಯೋಜನೆ, ಬಾಣಬಿರುಸುಗಳ ವ್ಯವಸ್ಥೆ ಮಾಡುವ ಮೂಲಕ ನವರಾತ್ರಿ-ವಿಜಯದಶಮಿ ಉತ್ಸವ ಆಕರ್ಷಣೆ ಹೆಚ್ಚಿಸಲು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕನಗೋನಹಳ್ಳಿ ಪರಮೇಶಗೌಡ, ಸದಸ್ಯರಾದ ವಿ.ವೆಂಕಟರಾಮೇಗೌಡ, ಕದಲಗೆರೆ ಕೆ.ಎಚ್ ಪುಟ್ಟಸ್ವಾಮಿಗೌಡ ವಕೀಲ ಕಾಡೇನಹಳ್ಳಿ ಸತೀಶ್, ವೆಂಕಟೇಶ್, ಬಚ್ಚಿಕೊಪ್ಪಲು ರಾಜು, ಶೋಭಾರಾಮಚಂದ್ರ ಶ್ರಮಿಸಿದರು. ಮೇಲುಕೋಟೆ ಪೊಲೀಸ್ ಇನ್ಸ್‌ಪೆಕ್ಟರ್ ಆನಂದಗೌಡ ನೇತೃತ್ವದಲ್ಲಿ ನವರಾತ್ರಿ-ವಿಜಯದಶಮಿಗೆ ಪೊಲೀಸ್ ಭದ್ರತೆ ನೀಡಲಾಗಿತ್ತು.