ಮನೆ ದೇವರ ದರ್ಶನಕ್ಕೆ ಈ ಭಾರಿಯೂ 50 ಸಾವಿರಕ್ಕೂ ಅಧಿಕಭಕ್ತರು ಆಗಮಿಸಿ ಚೆಲುವನಾರಾಯಣಸ್ವಾಮಿ ಮತ್ತು ಬೆಟ್ಟದೊಡೆಯ ಯೋಗಾನರಸಿಂಹಸ್ವಾಮಿಯ ದರ್ಶನ ಪಡೆದು ಪುನೀತರಾದರು. ದೇವರ ಒಕ್ಕಲಿನ ಭಕ್ತರು ಕುಟುಂಬ ಸಮೇತ ಆಗಮಿಸಿ ದೇವರಿಗೆ ಮುಡಿಹರಕೆ ಸಮರ್ಪಿಸಿ ನಾಮಧರಸಿ ದರ್ಶನಕ್ಕೆ ಆಗಮಿಸುತ್ತಿದ್ದ ದೃಶ್ಯ ಇಡೀದಿನ ಕಂಡು ಬಂತು.
ಕನ್ನಡಪ್ರಭ ವಾರ್ತೆ ಮೇಲುಕೋಟೆ
ಕೊನೇ ಶ್ರಾವಣ ಶನಿವಾರ ಅಂಗವಾಗಿ ಮೇಲುಕೋಟೆಯಲ್ಲಿ ಸಹಸ್ರಾರು ಭಕ್ತರು ನೆರೆದು ಚೆಲುವನಾರಾಯಣಸ್ವಾಮಿ ದರ್ಶನ ಪಡೆದರು. ಸಂಜೆ ಸ್ವಾಮಿಗೆ ಕುದುರೆ ವಾಹನೋತ್ಸವದೊಂದಿಗೆ ಕೃಷ್ಣಜನ್ಮಾಷ್ಟಮಿ ಆಚರಣೆ ಪ್ರಯುಕ್ತ ಉರಿಯಡಿ ಉತ್ಸವ ಸಹ ವೈಭವದಿಂದ ನೆರವೇರಿತು.ಕೃಷ್ಣಜನ್ಮಾಷ್ಟಮಿ ವಿಶೇಷಗಳು ಶುಕ್ರವಾರ ತಡರಾತ್ರಿಯವರೆಗೆ ನಡೆದರೂ ಕೊನೇ ಶ್ರಾವಣ ಶನಿವಾರದ ಕಾರಣ ಬೆಳಗಿನ 5 ಗಂಟೆಗೆ ದೇವಾಲಯವನ್ನು ತೆಗೆದು ನಿತ್ಯಪೂಜಾ ಕೈಂಕರ್ಯಗಳನ್ನು ಮುಕ್ತಾಯ ಮಾಡಿ ಬೆಳಗ್ಗೆ 8ಗಂಟೆಯಿಂದಲೇ ಭಕ್ತರದರ್ಶನಕ್ಕೆ ಅವಕಾಶ ನೀಡಲಾಗಿತ್ತು.
ಮನೆ ದೇವರ ದರ್ಶನಕ್ಕೆ ಈ ಭಾರಿಯೂ 50 ಸಾವಿರಕ್ಕೂ ಅಧಿಕಭಕ್ತರು ಆಗಮಿಸಿ ಚೆಲುವನಾರಾಯಣಸ್ವಾಮಿ ಮತ್ತು ಬೆಟ್ಟದೊಡೆಯ ಯೋಗಾನರಸಿಂಹಸ್ವಾಮಿಯ ದರ್ಶನ ಪಡೆದು ಪುನೀತರಾದರು. ದೇವರ ಒಕ್ಕಲಿನ ಭಕ್ತರು ಕುಟುಂಬ ಸಮೇತ ಆಗಮಿಸಿ ದೇವರಿಗೆ ಮುಡಿಹರಕೆ ಸಮರ್ಪಿಸಿ ನಾಮಧರಸಿ ದರ್ಶನಕ್ಕೆ ಆಗಮಿಸುತ್ತಿದ್ದ ದೃಶ್ಯ ಇಡೀದಿನ ಕಂಡು ಬಂತು.ದೇವರದರ್ಶನ ಮುಗಿಸಿ ಹೊರಬರುತ್ತಿದ್ದಂತೆ ಶ್ರಾವಣಮಾಸದ ವಿಶೇಷ ತಿನಿಸಾದ ಕಡಲೆಪುರಿ, ಜಿಲೇಬಿ ಬತಾಸು ಕಲ್ಯಾಣ ಸೇವೆಯನ್ನು ತಪ್ಪದೆ ಖರೀದಿಸುತ್ತಿದ್ದ ಭಕ್ತರು ಮನೆಮಂದಿಯೊಂದಿಗೆ ಮನೆದೇವರ ಸನ್ನಿಧಿಯಲ್ಲಿ ಶ್ರಾವಣ ಸಂಭ್ರಮದ ಸವಿ ಅನುಭವಿಸಿದರು.
ಭಕ್ತರ ವಾಹನಗಳು ದೇವಾಲಯದ ಬಳಿ ಬರುವುದನ್ನು ನಿರ್ಭಂದಿಸಿ ಪಟ್ಟಣದ ಆಚೆಯೇ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಕಳೆದ ವರ್ಷದಂತೆ ಈ ಸಲವೂ ಭಕ್ತರು ಅನ್ನದಾನ ನೆರವೇರಿಸಿದರು. ಪಾರ್ವಟೆ ಆಂಜನೇಯಸ್ವಾಮಿಗೆ ಕೊನೆ ಶ್ರಾವಣಮಾಸದ ಪ್ರಯುಕ್ತ ಕೊಳಲು ಕೃಷ್ಣನ ಅಲಂಕಾರ ಮಾಡಲಾಗಿತ್ತು.ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ಮಾರ್ಗದರ್ಶನದಲ್ಲಿ ಪಾರುಪತ್ತೇಗಾರ್ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ, ಪರಿಚಾರಕ ಪಾರುಪತ್ತೇಗಾರ್ ಎಂ.ಎನ್ ಪಾರ್ಥಸಾರಥಿ ಎಲ್ಲಾ ಧಾರ್ಮಿಕ ಕೈಂಕರ್ಯಗಳ ವ್ಯವಸ್ಥೆ ಮಾಡಿದ್ದರು.
ಕೃಷ್ಣಜನ್ಮಾಷ್ಟಮಿ ವೈಭವ:ಚೆಲುವನಾರಾಯಣಸ್ವಾಮಿಯನ್ನು ಶ್ರೀಕೃಷ್ಣ-ಬಲರಾಮರು ಆರಾಧಿಸಿದ ಪ್ರತೀಕವಿದ್ದು ದೇವಾಲಯದಲ್ಲಿ ಶುಕ್ರವಾರ ರಾತ್ರಿ ಕೃಷ್ಣಜನ್ಮಾಷ್ಟಮಿ ಸಡಗರ ಸಂಭ್ರಮದಿಂದ ನೆರವೇರಿತು.
ರಾತ್ರಿ ದೇವಾಲಯದಲ್ಲಿರುವ ಶ್ರೀಕೃಷ್ಣನಿಗೆ ಅಭಿಷೇಕ ಅಲಂಕಾರ ನೆರವೇರಿಸಿ ಪಲ್ಲವಸ್ತ್ರದ ತೋರಣಗಳನ್ನು ಮಾಡಲಾಗಿತ್ತು. ಚಕ್ಕುಲಿ, ಮುಸ್ಸೂರೆ ತೇಂಗೊಳಲು ಮುಂತಾದ 30ಕ್ಕೂ ಹೆಚ್ಚುಬಗೆಯ ವಿಶೇಷ ತಿನಿಸುಗಳನ್ನು ಕೃಷ್ಣ-ಚೆಲುವನಾರಾಯಣಸ್ವಾಮಿಗೆ ನೈವೇಧ್ಯ ಮಾಡಿ ಭಕ್ತರಿಗೆ ವಿತರಿಸಲಾಯಿತು.ದೇವಾಲಯದ ಕೈಂಕರ್ಯಪರರೇ ಸೇರಿ ಶ್ರೀಕೃಷ್ಣನಿಗೆ ವಿಶೇಷ ನೈವೇಧ್ಯ ಸಮರ್ಪಣೆ ಮಾಡಿದ್ದು ವಿಶೇಷವಾಗಿತ್ತು. ಕೃಷ್ಣಜನ್ಮಾಷ್ಟಮಿ ಅಂಗವಾಗಿ ಶನಿವಾರ ಸಂಜೆ ಕೃಷ್ಣನಿಗೆ ಪಲ್ಲಕ್ಕಿ ಉತ್ಸವ ಚೆಲುವನಾರಾಯಣಸ್ವಾಮಿಗೆ ಕುದುರೆವಾಹನೋತ್ಸವ ಬಂಡಿಕಾರರಿಂದ ಉರಿಯಡಿ ಉತ್ಸವ ಆಚರಣೆಗಳು ನಡೆದವು.