ಮಹಾಲಯ ಅಮಾವಾಸ್ಯೆ ಪ್ರಯುಕ್ತ ತಿಲತರ್ಪಣ, ಶಾಂತಿ ಹೋಮ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ ಅಪರ ಕರ್ಮಗಳನ್ನು ನೆರವೇರಿಸಿ ಪಿಂಡ ಪ್ರದಾನ ಮಾಡುವ ಮೂಲಕ ತಮ್ಮ ಪೂರ್ವಜರ ಆತ್ಮಗಳಿಗೆ ಜೀವನದಿ ಕಾವೇರಿ ತೀರದಲ್ಲಿ ಕುಳಿತು ಸದ್ಗತಿ ಪ್ರಾಪ್ತಿಗೆ ಪ್ರಾರ್ಥನೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಮಹಾಲಯ ಅಮಾವಾಸ್ಯೆ ಪ್ರಯುಕ್ತ ತಮ್ಮ ಪೂರ್ವಜರಿಗೆ ಪಿಂಡ ಪ್ರದಾನ ನೆರವೇರಿಸಲು ಸಹಸ್ರಾರು ಭಕ್ತರು ಪಟ್ಟಣದ ಕಾವೇರಿ ತೀರಕ್ಕೆ ಶನಿವಾರ ಹರಿದು ಬಂದಿತ್ತು.ಪಟ್ಟಣದ ಕಾವೇರಿ ಸ್ನಾನಘಟ್ಟ, ಜಿ.ಬಿಹೊಳೆ, ಗಂಜಾಂನ ಸಂಗಮ, ಗೋಸಾಯ್ ಘಾಟ್ ಹಾಗೂ ಸಮೀಪದ ಪಶ್ಚಿಮವಾಹಿನಿಯ ನದಿ ತೀರಗಳಲ್ಲಿ ನೆರದಿದ್ದ ವೈದ್ಧಿಕರುಗಳಿಂದ ರಾಜ್ಯ ಹಾಗೂ ಹೊರ ರಾಜ್ಯದ ವಿವಿಧೆಡೆಯಿಂದ ಮುಂಜಾನೆಯಿಂದ ಆಗಮಿಸಿದ್ದ ಜನರು ತಮ್ಮ ಸಂಪ್ರದಾಯ ಬದ್ಧ ಪೂಜೆ ಸಲ್ಲಿಸಿದರು.
ತಿಲತರ್ಪಣ, ಶಾಂತಿ ಹೋಮ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ ಅಪರ ಕರ್ಮಗಳನ್ನು ನೆರವೇರಿಸಿ ಪಿಂಡ ಪ್ರದಾನ ಮಾಡುವ ಮೂಲಕ ತಮ್ಮ ಪೂರ್ವಜರ ಆತ್ಮಗಳಿಗೆ ಜೀವನದಿ ಕಾವೇರಿ ತೀರದಲ್ಲಿ ಕುಳಿತು ಸದ್ಗತಿ ಪ್ರಾಪ್ತಿಗೆ ಪ್ರಾರ್ಥಿಸಿದರು.ಪಟ್ಟಣದ ಸುತ್ತಲು ಹರಿವ ಕಾವೇರಿ ನದಿ ವಿವಿಧ ತೀರಗಳಲ್ಲಿ ಅಸ್ಥಿ ವಿಸರ್ಜನೆ, ಪಿಂಡ ಪ್ರದಾನ, ಧಾರ್ಮಿಕ ಅಪರ ಕ್ರಿಯೆ ನಡೆಸಲು ಸ್ಥಳಿಯ ಪುರಸಭೆಯಿಂದ ಹರಾಜು ಪ್ರಕ್ರಿಯೆ ಮೂಲಕ ಟೆಂಡರ್ ನೀಡಿರುವ ಹಿನ್ನಲೆ ಆಯಾ ವ್ಯಾಪ್ತಿಯ ಗುತ್ತಿಗೆದಾರರಿಗೆ ಭರ್ಜರಿ ಹಣ ಸಂಗ್ರಹವಾಗಿದೆ ಎನ್ನಲಾಗಿದೆ.
ಲಕ್ಷಾಂತರ ಸಂಖ್ಯೆಯ ಜನರ ಆಗಮನದಿಂದ ಸ್ಥಳಿಯ ಬೀದಿ ಬದಿ ವ್ಯಾಪಾರಿಗಳಾದ ಹಣ್ಣು-ಕಾಯಿ, ಹೂವು, ತರಕಾರಿ, ಪನ್ಸಾರಿ ಸಾಮಾಗ್ರಿಗಳ ಅಂಗಡಿಗಳ ಮಾರಾಟಗಾರರು ಸೇರಿದಂತೆ ಆಟೋ ಚಾಲಕರು ಹಾಗೂ ಸಣ್ಣ-ಪುಟ್ಟ ಟೀ ಅಂಗಡಿ, ಹೋಟೆಲ್‌ಗಳಿಗೂ ವ್ಯಾಪಾರ ವಾಹಿವಾಟು ನಡೆದಿದೆ.ಸಹಸ್ರಾರು ಸಂಖ್ಯೆ ವಾಹನಗಳಿಂದ ದಟ್ಟಣೆ:
ಪಟ್ಟಣಕ್ಕೆ ರಾಜ್ಯದ ವಿವಿಧೆಡೆಯಿಂದ ಜನರು ಹಾಗೂ ಪ್ರವಾಸಿಗರು ಮುಂಜಾನೆ 5 ರಿಂದಲೇ ಆಗಮಿಸುತ್ತಿದ್ದ ಸಂಖ್ಯೆ ಹೆಚ್ಚಾದ ಹಿನ್ನಲೆ ಪಟ್ಟಣದ ಮುಖ್ಯರಸ್ತೆ, ನದಿ ತೀರದ ರಸ್ತೆ ಹಾಗೂ ಶ್ರೀರಂಗನಾಥಸ್ವಾಮಿ ದೇವಾಲಯದ ಮೈದಾನ ತುಂಬೆಲ್ಲ ಜನಜಂಗುಳಿ ಹಾಗೂ ಸಾವಿರಾರು ಸಂಖ್ಯೆಯ ವಾಹನಗಳ ಟ್ರಾಫಿಕ್ ದಟ್ಟಣೆ ಹೆಚ್ಚಾಗಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು.ಟೌನ್ ಠಾಣೆಯ ಪೊಲೀಸರು ದಟ್ಟಣೆ ನಿವಾರಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವಲ್ಲಿ ನಿರಂತರವಾಗಿ ಶ್ರಮಿಸಿ ಹೈರಾಣಾದರು. ಅಗ್ನೀಶಾಮಕ ಸಿಬ್ಬಂದಿ ಸಹ ಮುಂಜಾಗ್ರತವಾಗಿ ನದಿ ತೀರಗಳಲ್ಲಿ ಎಚ್ಚರವಹಿಸಿದ್ದರು.ಸೋಮೇಶ್ವರ ದೇಗುಲದಲ್ಲಿ ಮಹಾಲಯ ಅಮಾವಾಸ್ಯೆಯ ವಿಶೇಷ ಪೂಜೆ
ಕನ್ನಡಪ್ರಭ ವಾರ್ತೆ ಹಲಗೂರುಭೀಮನದಿ ಸಮೀಪದ ಶ್ರೀಸೋಮೇಶ್ವರ ದೇವಸ್ಥಾನದಲ್ಲಿ ಶನಿವಾರ ಮಹಾಲಯ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗಿಸಲಾಯಿತು.ಅರ್ಚಕ ತೇಜಸ್ ಕುಮಾರ್ ಮಾತನಾಡಿ, ಮುಂಜಾನೆ ಸೋಮೇಶ್ವರ ದೇವರ ಮೂರ್ತಿಯನ್ನು ಶುಚಿಗೊಳಿಸಿ ಹಾಲಿನ ಅಭಿಷೇಕ, ಪಂಚಾಮೃತ ಅಭಿಷೇಕ, ಏಕವಾರು ಬಿಲ್ವ ರುದ್ರಾಭಿಷೇಕಗಳನ್ನು ನಡೆಸಿದ ನಂತರ ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷವಾಗಿ ಪೂಜೆ ಪುನಸ್ಕಾರ ನಡೆಸಿ ಬಂದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗಿಸಿದ್ದೇವೆ ಎಂದರು.ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿವಸ ವಿಶೇಷವಾಗಿ ಪೂಜೆ ಪುನಸ್ಕಾರಗಳನ್ನು ನಡೆಸಲಾಗುತ್ತಿದೆ. ಭಕ್ತರ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸುವ ಸೋಮೇಶ್ವರಸ್ವಾಮಿ ನಂಬಿ ಅಪಾರ ಭಕ್ತಾದಿಗಳು ಇಲ್ಲಿಗೆ ಬರುತ್ತಾರೆ ಎಂದರು.
ಭಕ್ತರಾದ ಎನ್.ಕೆ.ಕುಮಾರ್ ಮಾತನಾಡಿ, ಮುತ್ತತ್ತಿ ರಸ್ತೆಯ ಶ್ರೀಸೋಮೇಶ್ವರ ದೇವಸ್ಥಾನವು ಸುಮಾರು 900 ವರ್ಷಗಳ ಇತಿಹಾಸವಿರುವ ಪಾಂಡವರ ಕಾಲದಲ್ಲಿ ಪ್ರತಿಷ್ಠಾಪನೆಯಾಗಿರುವ ದೇವಸ್ಥಾನ ಇದನ್ನು ಜ್ಯೋತಿರ್ಲಿಂಗ ಎಂದು ಸಹ ಕರೆಯುತ್ತಾರೆ ಎಂದರು.ಶಿವನಿರುವ ಕಡೆ ಸ್ಮಶಾನವಿರುವಂತೆ ಈ ದೇವಸ್ಥಾನದ ಹಿಂಭಾಗ ಮತ್ತು ಮುಂಭಾಗದಲ್ಲಿ ಸ್ಮಶಾನವಿದೆ. ಪ್ರಾಂಗಣದಲ್ಲಿ ಕಾಲ ಭೈರವೇಶ್ವರ, ವೀರಭದ್ರೇಶ್ವರ, ಬಸವೇಶ್ವರ ಹಾಗೂ ಪಕ್ಕದಲ್ಲಿ ಅಘೋರಭದ್ರಕಾಳಿ ದೇವಸ್ಥಾನವಿದೆ ಎಂದರು.ಈ ಈ ವೇಳೆ ಭಕ್ತರಾದ ವಳಗೆರೆದೊಡ್ಡಿ ಶ್ರೀನಿವಾಸ, ಶಿವಲಿಂಗು ,ಎಸ್. ಸಚಿನ್, ಮಹಾದೇವಸ್ವಾಮಿ, ನಾಗೇಂದ್ರ, ಹೊನಗನಹಳ್ಳಿ ಮಹದೇವಯ್ಯ ಸೇರಿದಂತೆ ಇತರರು ಇದ್ದರು.