ಪಾದಯಾತ್ರೆಯ ನಂತರ ಶ್ರೀಗವಿಸಿದ್ಧೇಶ್ವರ ಕತೃ ಗದ್ದುಗೆ ಹಾಗೂ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳ ಗದ್ದುಗೆಯ ದರ್ಶನ ಪಡೆದು ಧನ್ಯರಾದರು

ಕೊಪ್ಪಳ: ಶ್ರೀಗವಿಮಠದ ಲಿಂ. ಶ್ರೀಶಿವಶಾಂತವೀರ ಶಿವಯೋಗಿಗಳ 23ನೇ ಪುಣ್ಯಾರಾಧನೆ ನಿಮಿತ್ತ ಗುರುವಾರ ಬೆಳಗ್ಗೆ ಶ್ರೀಗವಿಸಿದ್ದೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಪಾದಯಾತ್ರೆಯಲ್ಲಿ ಸಾವಿರಾರು ಭಕ್ತರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು, ಇದರಿಂದ ಕಿಮೀ ಯುದ್ದಕ್ಕೂ ಪಾದಯಾತ್ರೆ ನಡೆಯಿತು.

ನಗರದ ಹೊರವಲಯದಲ್ಲಿರುವ ಶ್ರೀಮಳೇಮಲ್ಲೇಶ್ವರ ದೇವಸ್ಥಾನದಿಂದ ಬೆಳಗ್ಗೆ 6 ಗಂಟೆಗೆ ಆರಂಭವಾದ ಪಾದಯಾತ್ರೆ ಅಶೋಕ ಸರ್ಕಲ್‌ ಮೂಲಕ ಗಡಿಯಾರಕಂಬ ಸರ್ಕಲ್‌ ಮಾರ್ಗವಾಗಿ ಬೆಳಗ್ಗೆ 9 ಗಂಟೆಯ ವೇಳೆಗೆ ಶ್ರೀ ಗವಿಮಠ ತಲುಪಿತು. ಪಾದಯಾತ್ರೆಯುದ್ದದಕ್ಕೂ ಸಾವಿರಾರು ಭಕ್ತರು ಶ್ರೀಗವಿಸಿದ್ದೇಶ್ವರ ಹಾಗೂ ಶ್ರೀಶಿವಶಾಂತವೀರ ಶಿವಯೋಗಿಗಳ ನಾಮಸ್ಮರಣೆ ಮಾಡುತ್ತಾ ಸಾಗಿದರು.

ಪಾದಯಾತ್ರೆಯಲ್ಲಿ ಬಳಗಾನೂರಿನ ಶ್ರೀಶಿವಶಾಂತವೀರ ಶರಣರು, ಹೂವಿನಹಡಗಲಿಯ ಡಾ.ಹಿರಿಶಾಂತವೀರ ಮಹಾಸ್ವಾಮಿಗಳು,ಕಡಲಬಾಳಿನ ಮರಿಶಾಂತವೀರ ಮಹಾಸ್ವಾಮಿಗಳು, ಬಿಸರಳ್ಳಿಯ ಶಿವಶಾಂತವೀರ ಮಹಾಸ್ವಾಮಿಗಳು, ಚಿಕ್ಕಮ್ಯಾಗೇರಿ ಮೇಲುಗದ್ದುಗೆ ಹಿರೇಮಠದ ಗುರುಶಾಂತವೀರ ಸ್ವಾಮಿಗಳು, ನಗರದ ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು,ವಿದ್ಯಾರ್ಥಿಗಳು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಪಾದಯಾತ್ರೆಯ ನಂತರ ಶ್ರೀಗವಿಸಿದ್ಧೇಶ್ವರ ಕತೃ ಗದ್ದುಗೆ ಹಾಗೂ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳ ಗದ್ದುಗೆಯ ದರ್ಶನ ಪಡೆದು ಧನ್ಯರಾದರು.

ಪಾದಯಾತ್ರೆಯುದ್ದಕ್ಕೂ ಭಕ್ತರು ಶ್ರೀಗಳು ಸಾಗುವ ಹಾದಿಯಲ್ಲಿ ಹೂ ಮಳೆ ಸುರಿಸಿದರು.ದಾರಿಯುದ್ದಕ್ಕೂ ಹೂ ಚಲ್ಲಿ, ಗವಿಸಿದ್ಧನ ನಾಮಸ್ಮರಣೆ ಮಾಡಿದರು.

ಭಕ್ತರು ದಾರಿಯುದ್ದಕ್ಕೂ ರಂಗೋಲಿ ಹಾಕಿ,ಸ್ವಾಗತಿಸಿದರಲ್ಲದೆ ದಾರಿಯುದ್ದಕ್ಕೂ ತಂಪು ಪಾನೀಯ, ಬಾಳೆಹಣ್ಣು, ಬಿಸ್ಕಿಟ್ ಸೇರಿದಂತೆ ಅನೇಕ ತಿನಿಸು ವಿತರಣೆ ಮಾಡಲಾಯಿತು.

ದಾರಿಯುದ್ದಕ್ಕೂ ಭಕ್ತರು ಅಲ್ಲಲ್ಲಿ ಶ್ರೀಗಳ ದರ್ಶನ ಪಡೆಯುತ್ತಿರುವುದು ಸರ್ವೇ ಸಾಮಾನ್ಯವಾಗಿತ್ತು. ಸಾಗುವ ದಾರಿಯುದ್ದಕ್ಕೂ ಚಿಕ್ಕೇನಕೊಪ್ಪದ ಶರಣರು ಗವಿಸಿದ್ಧೇಶ್ವರ ಜಪ ಮಾಡಿದರು. ಶ್ರೀಮಠದ ದಾಸೋಹದಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೆ ಭಕ್ತಾಧಿಗಳು ಪ್ರಸಾದ ಸ್ವೀಕರಿಸಿದರು.

ಆರೋಗ್ಯ ಶಿಬಿರ:ಕೊಪ್ಪಳ ನಗರದ ಆರ್ಯುವೇದ ಮಹಾವಿದ್ಯಾಲಯಲ್ಲಿ ಪುಣ್ಯಸ್ಮರಣೆ ನಿಮಿತ್ತ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು, ಸಾವಿರಾರು ಜನರು ಸದುಪಯೋಗ ಪಡೆದರು.