ಹುಬ್ಬಳ್ಳಿ:

ಗುರುವಾರ ನಡೆಯಲಿರುವ ಜಗ್ಗಲಗಿ ಹಬ್ಬದ ಮೆರವಣಿಗೆಯಲ್ಲಿ ಒಂದು ಸಾವಿರ ವಾದ್ಯಮೇಳ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಈ ಹಬ್ಬದ ಯಶಸ್ಸಿಗೆ ಪ್ರತಿಯೊಬ್ಬರೂ ಕೈಜೋಡಿಸುವಂತೆ ಶಾಸಕ ಹಾಗೂ ಆಯೋಜಕ ಮಹೇಶ ಟೆಂಗಿನಕಾಯಿ ಹೇಳಿದರು.

ನಗರದ ಮೂರುಸಾವಿರ ಮಠದ ಆವರಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಕೊನೆ ಹಂತದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಪ್ರತಿ ತಂಡದಲ್ಲಿ ಸಮಿತಿಯ ಹತ್ತು ಜನ ಕಾರ್ಯಕರ್ತರು ಇರಲಿದ್ದಾರೆ. ಒಟ್ಟು 30 ತಂಡಗಳಿಗೆ 300 ಕಾರ್ಯಕರ್ತರು ಕಾರ್ಯಕ್ರಮ ಮೆರವಣಿಗೆ ಕಾರ್ಯಕ್ರಮ ಮುಗಿಯುವ ವರೆಗೂ ಆಯಾ ತಂಡಗಳ ಜತೆಗೆ ಇರಲಿದ್ದಾರೆ. ಈ ಬಾರಿಯ ಹಲಗಿ ಹಬ್ಬವು ವಿಶಿಷ್ಟ ರೀತಿಯಲ್ಲಿ ಆಚರಿಸಲು ನಿರ್ಧರಿಸಲಾಗಿದ್ದು, ಎಲ್ಲ ಸ್ವಯಂ ಸೇವಕರು ಅಚ್ಚುಕಟ್ಟಾಗಿ ಮೆರವಣಿಗೆಯ ಉದ್ದಕ್ಕೂ ತಂಡಗಳನ್ನು ತೆಗೆದುಕೊಂಡು ಹೋಗುವಂತೆ ಸಲಹೆ ನೀಡಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಈ ಕಾರ್ಯಕ್ರಮಕ್ಕೆ ಹಲಗೆ ಬಾರಿಸುವ ಮೂಲಕ ಚಾಲನೆ ನೀಡುವರು. ಈಗಾಗಲೇ ನಮ್ಮ ಸಮಿತಿಯ ಮಹಿಳಾ ಪ್ರಮುಖ ಕಾರ್ಯಕರ್ತರು ಮೆರವಣಿಗೆ ಸಾಗುವ ಮಾರ್ಗದ ಅಂಗಡಿಗಳಿಗೆ ತೆರಳಿ ಕರಪತ್ರಗಳನ್ನು ನೀಡಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ವಿನಂತಿಸಿದ್ದಾರೆ. ನಗರದ ವ್ಯಾಪಾರಸ್ಥರು, ಉದ್ಯಮಿಗಳು ಸ್ವಯಂ ಪ್ರೇರಣೆಯಿಂದ ನೀರು, ತಿಂಡಿ ತಿನಿಸುಗಳನ್ನು ವಿತರಿಸಲಿದ್ದಾರೆ ಎಂದರು.


ಈ ವೇಳೆ ಪಾಲಿಕೆ ಮಾಜಿ ಮೇಯರ್‌ ಡಿ.ಕೆ. ಚಹ್ವಾಣ, ತಿಪ್ಪಣ್ಣ ಮಜ್ಜಗಿ, ಶಶಿ ಬಿಜವಾಡ, ರಂಗಾ ಬದ್ಧಿ, ಕೃಷ್ಣ ಗಂಡಗಾಳೇಕರ್, ಶಿವು ಮೆಣಸಿನಕಾಯಿ, ಸತೀಶ್ ಶೇಜವಾಡಕರ್, ಜಗದೀಶ್ ಬಳ್ಳಾನವರ, ಪ್ರಕಾಶ್ ಕ್ಯಾರಕಟ್ಟಿ, ಸಿದ್ದು ಮೊಗಲಿಶೆಟ್ಟರ್, ರವಿ ನಾಯಕ, ಪ್ರಕಾಶ ಬಾಫನಾ, ಸಂತೋಷ್ ಅರೆಕೇರಿ ಸೇರಿದಂತೆ ಹಲವರಿದ್ದರು.