ಕೃಷ್ಣಾ ತಟದಲ್ಲಿ ಹೋಳಿಗೆ ಊಟ ಸವಿದ ಸಹಸ್ರಾರು ಜನ

| Published : Apr 24 2025, 12:00 AM IST

ಸಾರಾಂಶ

ಗೋಕಾಕ ತಾಲೂಕಿನ ತಳಕಟನಾಳ ಗ್ರಾಮ ದೇವತೆ ಲಕ್ಷ್ಮೀದೇವಿಗೆ ಕೃಷ್ಣೆಯ ದಡದಲ್ಲಿ ವಿಶೇಷ ಪೂಜೆ ನಿಮಿತ್ತ ಮಂಗಳವಾರ ಮಧ್ಯಾಹ್ನ ೩ ಕ್ವಿಂಟಲ್ ಕಡಲೆ ಬೇಳೆಯ ಹೋಳಿಗೆ ತಯಾರಿಸಿ ಪ್ರಸಾದ ರೂಪದಲ್ಲಿ ಜನತೆ ಸವಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಗೋಕಾಕ ತಾಲೂಕಿನ ತಳಕಟನಾಳ ಗ್ರಾಮ ದೇವತೆ ಲಕ್ಷ್ಮೀದೇವಿಗೆ ಕೃಷ್ಣೆಯ ದಡದಲ್ಲಿ ವಿಶೇಷ ಪೂಜೆ ನಿಮಿತ್ತ ಮಂಗಳವಾರ ಮಧ್ಯಾಹ್ನ ೩ ಕ್ವಿಂಟಲ್ ಕಡಲೆ ಬೇಳೆಯ ಹೋಳಿಗೆ ತಯಾರಿಸಿ ಪ್ರಸಾದ ರೂಪದಲ್ಲಿ ಜನತೆ ಸವಿದರು. ಮಧ್ಯಾಹ್ನ 500ಕ್ಕೂ ಅಧಿಕ ಮಹಿಳೆಯರಿಗೆ ಉಡಿ ತುಂಬುವ ಕಾರ್ಯ ನಡೆಯಿತು. ನಂತರ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಹೋಳಿಗೆ ಪ್ರಸಾದ ಜರುಗಿತು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಬಸಪ್ಪ ಸವತಿಹಾರ, ಬಾಳಪ್ಪ ಜಕ್ಕನ್ನವರ, ಹಣಮಂತ ಹೊನ್ನನ್ನವರ, ಶೇಖರ ಹೊಳಿಕಡೆ ಸೇರಿದಂತೆ ಅನೇಕರಿದ್ದರು. ಸುಮಾರು ೨ ಶತಮಾನಗಳಿಂದ ತಲೆತಲಾಂತರದಿಂದ ತಳಕಟನಾಳ ಗ್ರಾಮ ಗ್ರಾಮದೇವತೆ ಮಹಾಲಕ್ಷ್ಮೀದೇವಿಗೆ ಕೃಷ್ಣೆಯ ತೀರದಲ್ಲಿ ವಿಶೇಷ ಪೂಜೆ ಸಲ್ಲಿಸುವ ಹಾಗೂ ಉಡಿ ತುಂಬುವ ಕಾಯಕ ನಡೆಯುತ್ತ ಬಂದಿದೆಯಂತೆ. ಇದು ಪ್ರತಿ 3 ವರ್ಷಕ್ಕೊಮ್ಮೆ ಮಾತ್ರ ಗೋಕಾಕ ತಾಲೂಕಿನಿಂದ ರಬಕವಿ-ಬನಹಟ್ಟಿ ಸಮೀಪದ ಕೃಷ್ಣಾನದಿ ತೀರದಲ್ಲಿ ಈ ಸಂಭ್ರಮ ಮಾಡಲಾಗುತ್ತದೆ.

-ಲಗಮಣ್ಣ ದೊಡಮನಿ,

ಗ್ರಾಮದ ಹಿರಿಯರು.

ಸೋಮವಾರ ರಾತ್ರಿ ಕೃಷ್ಣಾ ನದಿ ತಟಕ್ಕೆ ಬಂದು ರಾತ್ರಿಯಿಡೀ ಹೋಳಿಗೆ ಮಾಡಿ ಬೆಳಗ್ಗೆ ದೇವಿಗೆ ನೈವೇದ್ಯ ಅರ್ಪಿಸಲಾಗುತ್ತದೆ. ಹೀಗೆ ಮೂರು ದಿನಗಳ ಕಾಲ ಈ ಕಾರ್ಯ ನಡೆಯುತ್ತದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಊರಿಗೆ ಊರೇ ಕೀಲಿಹಾಕಿ ಇಲ್ಲಿಗೆ ಬರುತ್ತೇವೆ.

-ಬಾಲಪ್ಪ ಹಟ್ಟಿ,

ಗ್ರಾಮಸ್ಥರು.