ಸಾರಾಂಶ
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಅಯೋಧ್ಯೆಯ ಶ್ರೀರಾಮ ಮಂದಿರದ ಉದ್ಘಾಟನೆ ಮತ್ತು ರಾಮಲಲ್ಲಾ ಮೂರ್ತಿ ಪ್ರಾಣಪ್ರತಿಷ್ಠಾಪನೆಯ ಐತಿಹಾಸಿಕ ಗಳಿಗೆಯನ್ನು ದೊಡ್ಡಬಳ್ಳಾಪುರದಲ್ಲಿ ಸಹಸ್ರಾರು ಮಂದಿ ಏಕಕಾಲಕ್ಕೆ ಕಣ್ತುಂಬಿಕೊಂಡರು.ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿದ್ದ ಬೃಹತ್ ರಾಮ ಮಂದಿರ ಮಾದರಿ ಸೆಟ್ ನಲ್ಲಿ 2 ದಿನಗಳಿಂದ ನಡೆದ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಹಾಗೂ ರಾಮ ತಾರಕ ಹೋಮ ಸೋಮವಾರ ಬೆಳಗಿನಿಂದಲೇ ಆರಂಭವಾಯಿತು. ಸಾವಿರಾರು ಜನರು ತಂಡೋಪತಂಡವಾಗಿ ಆಗಮಿಸಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದರು.
ನಗರದ ವಿವಿದೆಡೆಗಳಿಂದ ತಂದು ಪ್ರತಿಷ್ಠಾಪಿಸಲಾಗಿದ್ದ ಶ್ರೀರಾಮ-ಸೀತಾ ಲಕ್ಷ್ಮಣ, ಹನುಮ ಸಹಿತ ಉತ್ಸವ ಮೂರ್ತಿಗಳಿಗೆ ವಿಶೇಷವಾಗಿ ಅಲಂಕರಿಸಿ ಪೂಜಿಸಲಾಯಿತು. ನಿರಂತರ 4 ಗಂಟೆಗಳ ಕಾಲ ನಡೆದ ರಾಮ ತಾರಕ ಹೋಮದ ಪೂರ್ಣಾಹುತಿಯಲ್ಲಿ ಶಾಸಕ ಧೀರಜ್ ಮುನಿರಾಜ್ ಕುಟುಂಬ ಸದಸ್ಯರೊಂದಿಗೆ ಪಾಲ್ಗೊಂಡರು. ಹಲವು ಹಿರಿಯರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.ಅಯೋಧ್ಯಾ ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ನೇರ ಪ್ರಸಾರವನ್ನು ದೊಡ್ಡ ಎಲ್‌ಇಡಿ ಪರದೆ ಮೂಲಕ ವೀಕ್ಷಿಸಲಾಯಿತು.
ರಾಮರಾಜ್ಯದ ಗುರಿ: ಶಾಸಕಈ ವೇಳೆ ಮಾತನಾಡಿದ ಶಾಸಕ ಧೀರಜ್ ಮುನಿರಾಜು, 500 ವರ್ಷಗಳ ಕಾಲ ನಡೆದ ಸುದೀರ್ಘ ಹೋರಾಟದ ಪ್ರತಿಫಲ ಇಂದು ಸಾಕಾರಗೊಂಡಿದೆ. ಇದರಲ್ಲಿ ಲಕ್ಷಾಂತರ ಕಾರ್ಯಕರ್ತರ ಶ್ರಮ, ಹಲವು ಕರಸೇವಕರ ಬಲಿದಾನ, ತ್ಯಾಗ, ಪ್ರಾರ್ಥನೆ ಸೇರಿದೆ. ಮುಂದಿನ ದಿನಗಳಲ್ಲಿ ದೇಶ ರಾಮರಾಜ್ಯವಾಗಲಿದೆ ಎಂದರು.
ಕರಸೇವಕರಿಗೆ ಸನ್ಮಾನಅಯೋಧ್ಯೆ ಹೋರಾಟದಲ್ಲಿ ಭಾಗಿಯಾಗಿದ್ದ ತಾಲೂಕಿನ 30ಕ್ಕೂ ಹೆಚ್ಚು ಕರಸೇವಕರನ್ನು ಸಮಾರಂಭದಲ್ಲಿ ಶ್ರೀರಾಮೋತ್ಸವ ಸಮಿತಿಯಿಂದ ಅಭಿನಂದಿಸಲಾಯಿತು. ಶ್ರೀರಾಮ, ಸೀತೆ, ಆಂಜನೇಯ, ಶಬರಿ ಮುಂತಾದ ರಾಮಾಯಣದ ಪಾತ್ರಗಳ ವೇಷಭೂಷಣಗಳನ್ನು ಮಕ್ಕಳು ಧರಿಸಿ, ನೆರೆದಿದ್ದ ಸಭಿಕರಿಗೆ ಮುದ ನೀಡಿದರು.
ಶಾಸಕ ಧೀರಜ್ ಮುನಿರಾಜ್, ಕೇಂದ್ರ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಪುರಸಭೆ ಮಾಜಿ ಉಪಾಧ್ಯಕ್ಷ ಡಿ.ವಿ.ನಾರಾಯಣಶರ್ಮ, ಸಮಿತಿಯ ಸಂಚಾಲಕ ಡಿ.ಪಿ.ಲೋಕೇಶ್, ಗೋಪಿ, ನಾಗೇಶ್, ಪುಷ್ಪಾಶಿವಶಂಕರ್, ಎನ್.ಕೆ.ರಮೇಶ್, ಆನಂದಮೂರ್ತಿ, ಉಮಾಮಹೇಶ್ವರಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಕೆ.ಬಿ.ಮುದ್ದಪ್ಪ, ಗ್ರಾಮಾಂತರ ಅಧ್ಯಕ್ಷ ಕೆ.ನಾಗೇಶ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಿ.ಸಿ.ನಾರಾಯಣಸ್ವಾಮಿ, ನಗರಸಭೆ ಸದಸ್ಯ ಎಂ.ಜಿ.ಶ್ರೀನಿವಾಸ್, ಬಂತಿವೆಂಕಟೇಶ್, ಪದ್ಮನಾಭ್, ವತ್ಸಲಾ, ಭಾಸ್ಕರ್ ಮಧುಬೇಗಲಿ ಮತ್ತಿತರರು ಪಾಲ್ಗೊಂಡಿದ್ದರು.