ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಹೃದಯಾಘಾತ ಪ್ರಕರಣ ಹೆಚ್ಚಾಗುತ್ತಿರುವಂತೆಯೇ ನಗರದ ಜಯದೇವ ಆಸ್ಪತ್ರೆಗೆ ಭೇಟಿ ನೀಡುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಆಸ್ಪತ್ರೆ ಅಧಿಕಾರಿಗಳು ಪೊಲೀಸರ ಮೊರೆ ಹೋಗಿದ್ದಾರೆ.ಏಕಾಏಕಿ ಸಾವಿರಾರು ಮಂದಿ ಆಸ್ಪತ್ರೆಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆ ಸಿಬ್ಬಂದಿ ಪೊಲೀಸರ ನೆರವು ಪಡೆದಿದ್ದಾರೆ. ಹೊರ ರೋಗಿಗಳ ನಿಯಂತ್ರಣಕ್ಕೆ ಅವರು ಸರದಿ ಸಾಲಿನಲ್ಲಿ ನಿಂತು ತಪಾಸಣೆಗೆ ಒಳಗಾಗಲು ಆಸ್ಪತ್ರೆ ಸಿಬ್ಬಂದಿ ಜತೆ ಪೊಲೀಸರು ಕೈ ಜೋಡಿಸಿದ್ದಾರೆ.ಹಾಸನದಲ್ಲಿ ತಿಂಗಳ ಅಂತರದಲ್ಲಿ 20ಕ್ಕೂ ಜನ ಹಾರ್ಟ್ ಅಟ್ಯಾಕ್ ಗೆ ಬಲಿಯಾದ ಪರಿಣಾಮ ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆ ಮೇಲೆ ಒತ್ತಡ ಹೆಚ್ಚಾಗಿದೆ. ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ, ಕೊಡಗು ಸೇರಿದಂತೆ ವಿವಿಧೆಡೆಯಿಂದ ರೋಗಿಗಳು ಆಗಮಿಸಿ ತಪಾಸಣೆಗೆ ಒಳಗಾಗುತ್ತಿದ್ದಾರೆ.ಪ್ರತಿನಿತ್ಯ ಒಂದುವರೆ ಸಾವಿರಕ್ಕೂ ಅಧಿಕ ರೋಗಿಗಳು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ರೋಗಿಗಳನ್ನು ನಿಯಂತ್ರಿಸಲಾಗದೆ ಹೈರಾಣಾದ ಆಸ್ಪತ್ರೆ ಸಿಬ್ಬಂದಿಯು ರೋಗಿಗಳ ನಿಯಂತ್ರಣಕ್ಕೆ ಪೊಲೀಸರನ್ನು ಬಳಸಿಕೊಂಡಿದ್ದಾರೆ. ಅಲ್ಲದೆ ಪ್ರತಿನಿತ್ಯ 500 ಮಂದಿಗೆ ಮಾತ್ರವೇ ತಪಾಸಣೆಗೆ ಅವಕಾಶ ಎಂಬ ನಿಯಮ ವಿಧಿಸಲಾಗಿತ್ತು. ಆದರೆ ಒತ್ತಾಡ ಹೆಚ್ಚಾದ ಹಿನ್ನೆಲೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಮಂದಿಯನ್ನು ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ.ಎರಡು ಪ್ರತ್ಯೇಕ ಸಾಲುಗಳನ್ನು ಮಾಡಿ ನಿಯಂತ್ರಣದಲ್ಲಿ ಹೋಗಲು ರೋಗಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಬುಧವಾರ ಕೂಡ ಸುಮಾರು ಎರಡು ಸಾವಿರ ಮಂದಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ರೋಗಿಗಳು ಮುಂಜಾನೆಯಿಂದಲೇ ಆಸ್ಪತ್ರೆ ಬಳಿ ಕಾಯುವುದು ಸಾಮಾನ್ಯವಾಗಿದೆ. ಜಿಲ್ಲಾಸ್ಪತ್ರೆಯಲ್ಲೂ ರೋಗಿಗಳ ಸಂಖ್ಯೆ ಹೆಚ್ಚಳಜಯದೇವ ಆಸ್ಪತ್ರೆ ಮಾತ್ರವಲ್ಲದೆ ಸಾಮಾನ್ಯ ಹೃದ್ರೋಗ ಪರೀಕ್ಷೆಗಳಾದ ಬಿಪಿ, ರಕ್ತಪರೀಕ್ಷೆ, ಇಸಿಜಿ ಪರೀಕ್ಷೆಗೆ ಒಳಗಾಗಲು ರೋಗಿಗಳು ಜಿಲ್ಲಾಆಸ್ಪತ್ರೆ ಮುಂದೆಯೂ ಸಾಲುಗಟ್ಟಿ ನಿಂತಿದ್ದಾರೆ.ಹಿಂದಿಗಿಂತ ಈಗ ರೋಗಿಗಳ ಸಂಖ್ಯೆ ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚಾಗಿದೆ. ಅಲ್ಲಿಯೂ ರೋಗಿಗಳ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಎರಡು ಸರದಿ ಸಾಲಿನ ಮೂಲಕ ರೋಗಿಗಳನ್ನು ತಪಾಸಣೆಗೆ ಒಳಪಡಿಸಲಾಯಿತು.