ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
5ನೇ ದಿನದ ‘ಕೊಡವಾಮೆ ಬಾಳೊ’ಪಾದಯಾತ್ರೆಗೆ ಸಹಸ್ರಾರು ಸಂಖ್ಯೆಯ ಜನ ಬೆಂಬಲ ಕಂಡುಬಂತು. ಗುರುವಾರ ಬೆಳಗ್ಗೆ ಬೇತ್ರಿ ನೆಲ್ಲಿಮಾನಿಯಿಂದ ಮುಂದುವರೆದ ಕೊಡವಾಮೆ ಬಾಳೊ ಪಾದಯಾತ್ರೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಕೊಡವ ಮತ್ತು ಕೊಡವ ಭಾಷಿಕರು ಪಾಲ್ಗೊಂಡರು.ಕುಟ್ಟದಿಂದ ಮಡಿಕೇರಿಗೆ 82 ಕಿ. ಮೀ.ಕೊಡವಾಮೆ ಬಾಳೊ ಪಾದಯಾತ್ರೆ, ಅಖಿಲ ಕೊಡವ ಸಮಾಜ ಆಶ್ರಯದಲ್ಲಿ ಕೊಡವ ಮತ್ತು ಕೊಡವ ಭಾಷಿಕ ಜನಾಂಗದ ಬೆಂಬಲದೊಂದಿಗೆ 2 ರಿಂದ ಆರಂಭವಾಗಿರುವ ಪಾದಯಾತ್ರೆ ಗುರುವಾರ ಸಂಜೆ ಸುಮಾರು 77 ಕಿ. ಮೀ. ಕ್ರಮಿಸಿ ಕಗ್ಗೋಡ್ಲು ಸಮೀಪ ಮೇಕೇರಿಯಲ್ಲಿ ತಂಗಿದ್ದು, ನಾಳೆ ಮೇಕೇರಿಯಿಂದ ಮಡಿಕೇರಿವರೆಗೆ ಪಾದಯಾತ್ರೆ ಮುಂದುವರೆಯಲಿದೆ.
ಅಲ್ಪಸಂಖ್ಯಾತ, ತಮ್ಮ ಜನಾಂಗದ ಅಸ್ತಿತ್ವ ಮತ್ತು ಭದ್ರತೆಗೆ ಉಂಟಾಗಿರುವ ಬೆದರಿಕೆ ಹಾಗೂ ಸಂಚಕಾರಕ್ಕೆ ಸ್ವಯಂ ಪ್ರೇರಿತರಾಗಿ ಸರ್ಕಾರದ ಗಮನ ಸೆಳೆದು, ತಮ್ಮ ಧಾರ್ಮಿಕ, ಸಾಂಸ್ಕೃತಿಕ, ಪಾರಂಪಾರಿಕ, ಸಾಂವಿಧಾನಿಕ ಭದ್ರತೆಗಾಗಿ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಭಾರಿ ಬಿರು ಬಿಸಿಲಿನ ನಡುವೆಯೂ ಹೆಜ್ಜೆ ಹಾಕಿದರು.ಫೆಬ್ರವರಿ 2 ರಿಂದ ಆರಂಭವಾಗಿ ಫೆಬ್ರವರಿ 7 ರವರೆಗೆ ಕುಟ್ಟದಿಂದ ಮಡಿಕೇರಿಯವರೆಗೆ 82 ಕಿಲೋಮೀಟರ್ ನಡೆಯಲಿರುವ ಪಾದಯಾತ್ರೆ ಇದುವರೆಗೆ ಸುಮಾರು 77 ಕಿ. ಮೀ. ಕ್ರಮಿಸಿದೆ.
ಎಂ. ಬಾಡಗದಲ್ಲಿ ಅಖಿಲ ಕೊಡವ ಸಮಾಜ ಅಧ್ಯಕ್ಷರು ಪರದಂಡ ಸುಬ್ರಮಣಿ ಅವರು ಸಾಂಪ್ರದಾಯಿಕ ಬಾಳೆ ಕಡಿದು, ಪಾದಯಾತ್ರೆ ಮುಂದೆ ಸಾಗಿತು. ಎಂ. ಬಾಡಗದಲ್ಲಿ ಕೊಡವ ಭಾಷಿಕ ಜನಾಂಗ ಒಕ್ಕೂಟದ ಅಧ್ಯಕ್ಷ ಡಾ. ಸುಭಾಷ್ ನಾಣಯ್ಯ ಅವರು ಪಾದಯಾತ್ರೆಯನ್ನು ಸ್ವಾಗತಿಸಿದರು.ಸಾಂಪ್ರದಾಯಿಕ ಉಡುಪಿನಲ್ಲಿ ಪಾಲ್ಗೊಂಡಿರುವ ಸಹಸ್ರಾರು ಕೊಡವರು ಹಾಗೂ ಕೊಡವ ಭಾಷಿಕರು ಮೂರ್ನಾಡುವಿಗೆ ಕಾಲಿಟ್ಟಾಗ ಭಾರಿ ಜನ ಬೆಂಬಲ ವ್ಯಕ್ತವಾಯಿತು.
ಪಾದಯಾತ್ರೆಯನ್ನು ತಳಿಯತಕ್ಕಿ ಬೊಳಕ್, ಕೊಂಬು ಕೊಟ್ಟ್ ವಾಲಗ, ಸಾಂಪ್ರದಾಯಿಕ ಬಾಳೆ ಬೇಂಗುವ ಮೂಲಕ ಸ್ವಾಗತಿಸಿದ ಉತ್ತರ ಕೊಡಗಿನ ಸಹಸ್ರಾರು ಕೊಡವ ಮತ್ತು ಕೊಡವ ಭಾಷಿಕ ಜನರು, ಅಲ್ಲಲ್ಲಿ ಕುಡಿಯುವ ನೀರು ಪಾನೀಯ, ಹಣ್ಣು ಹಂಪಲು ನೀಡಿ ಅಭಿಮಾನದಿಂದ ಉಪಚರಿಸಿದರು.ಮೂರ್ನಾಡುವಿನಲ್ಲಿ ಕೊಡವ ಸಾಂಸ್ಕೃತಿಕ, ಮತ್ತು ಧಾರ್ಮಿಕ ಕೇಂದ್ರವಾದ ಪಾಂಡಾಣೆ ಮಂದ್ ನಲ್ಲಿ ತಕ್ಕ ಮುಖ್ಯಸ್ಥರೊಂದಿಗೆ ಪ್ರಾರ್ಥಿಸಲಾಯಿತು.
ಪಾದಯಾತ್ರೆ ನೆಲ್ಲಿಮಾನಿ, ಎಂ. ಬಾಡಗ, ಮೂರ್ನಾಡು, ಮುತ್ತರ್ಮುಡಿ, ಕಗ್ಗೊಡ್ಲು, ಹಾಕತ್ತೂರು, ಮೇಕೇರಿಯಲ್ಲಿ ಸ್ಥಳೀಯ ಕೊಡವ ಮತ್ತು ಭಾಷಿಕ ಕುಟುಂಬದಿಂದ ತಳಿರು ತೋರಣ ಕಟ್ಟಿ ಭವ್ಯ ಸ್ವಾಗತ ನೀಡಲಾಯಿತು.ಮೂರ್ನಾಡು ಗ್ರಾಮದ ಹೊದ್ದೂರು ನಿವಾಸಿ 96 ವರ್ಷದ ಮಂಡೇಪಂಡ ಕರುಂಬಯ್ಯ ಪಾದಯಾತ್ರೆಯಲ್ಲಿ ಭಾಗವಹಿಸಿ ಅಭಿಮಾನ ಮೆರೆದರು. ಮುತ್ತರ್ಮುಡಿಯಲ್ಲಿ ಸಾವಿರಾರು ಪಾದಯಾತ್ರೆಗರಿಗೆ ಕೆಂಬಡತಂಡ ಕುಟುಂಬದ ಜಾಗದಲ್ಲಿ ಮೂರ್ನಾಡು ಕೊಡವ ಸಮಾಜ ಮಧ್ಯಾಹ್ನದ ಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು.
ಸಂಜೆ 4 ಗಂಟೆಗೆ ಪಾದಯಾತ್ರೆ ಮೇಕೇರಿಗೆ ತಲುಪಿದ್ದು, ಅಲ್ಲಿ ಗುರುವಾರ ತಂಗಲಿದ್ದು, ಶುಕ್ರವಾರ ಇಲ್ಲಿಂದ ಮಡಿಕೇರಿಗೆ ಮುಂದುವರೆದು ಅಂತ್ಯಗೊಳ್ಳಲಿದೆ.ಇಂದು ಮದ್ಯ ಮಾರಾಟ ನಿಷೇಧ: ಮಡಿಕೇರಿ : ಫೆ.7 ರಂದು ನಡೆಯುವ ಕೊಡವಾಮೆ ಬಾಳೋ ಪಾದಯಾತ್ರೆ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಅಬಕಾರಿ ಕಾಯ್ದೆ 1965ರ ಕಲಂ 21 ರಲ್ಲಿ ದತ್ತವಾಗಿರುವ ಅಧಿಕಾರದಂತೆ ಫೆ.7 ರ ಬೆಳಗ್ಗೆ 6 ಗಂಟೆಯಿಂದ ಅದೇ ದಿನ ಮಧ್ಯರಾತ್ರಿ 12 ಗಂಟೆಯವರೆಗೆ ಮಡಿಕೇರಿ ನಗರ ವ್ಯಾಪ್ತಿಯಲ್ಲಿರುವ ಎಲ್ಲಾ ರೀತಿಯ ಮದ್ಯದ ಅಂಗಡಿ, ಬಾರ್, ಹೊಟೇಲ್ ಮತ್ತು ಕ್ಲಬ್‌ಗಳಲ್ಲಿ ಎಲ್ಲಾ ವಿಧದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ ಆದೇಶಿಸಿದ್ದಾರೆ.