ಕನ್ನಡಪ್ರಭ ವಾರ್ತೆ ಬೆಳಗಾವಿ

ಸಿಇಐಆರ್ ಪೋರ್ಟಲ್‌ನಲ್ಲಿ ನೋಂದಾಯಿಸಿದ್ದ ಕದ್ದ ಮತ್ತು ಕಳೆದುಹೋಗಿದ್ದ ಮೊಬೈಲ್‌ ಫೋನ್‌ಗಳನ್ನು ಜಿಲ್ಲಾ ಸಿಇಎನ್ ಅಪರಾಧ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ. ಅಲ್ಲದೇ, ಅವುಗಳನ್ನು ಮಾಲೀಕರಿಗೆ ಸೋಮವಾರ ಹಸ್ತಾಂತರಿಸಿದ್ದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ರಾಮರಾಜನ್‌ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ವಿವಿಧ ಸಿಇಎನ್‌ ಅಪರಾಧ ಠಾಣೆಗಳಲ್ಲಿ 2023ರಿಂದ ಈವರೆಗೆ 3 ಸಾವಿರಕ್ಕೂ ಅಧಿಕ ಮೊಬೈಲ್‌ ಕಳುವಾದ ಮತ್ತು ಕಳೆದುಹೋದ ಬಗ್ಗೆ ಪ್ರಕರಣ ದಾಖಲಾಗಿದ್ದವು. ಈ ಪೈಕಿ ಈಗಾಗಲೇ 1 ಸಾವಿರಕ್ಕೂ ಅಧಿಕ ಮೊಬೈಲ್‌ಗಳನ್ನು ವಶಕ್ಕೆ ಪಡೆದು, ಮಾಲೀಕರಿಗೆ ಹಸ್ತಾಂತರಿಸಿರುವುದಾಗಿ ತಿಳಿಸಿದರು.

ಅಥಣಿ, ಚಿಕ್ಕೋಡಿ, ರಾಮದುರ್ಗ, ಗೋಕಾಕ ಮತ್ತು ಬೈಲಹೊಂಗಲ ಉಪ ವಿಭಾಗಗಳಲ್ಲಿ ಕಳುವಾಗಿದ್ದ ಮತ್ತು ಕಳೆದುಹೋಗಿದ್ದ ಮೊಬೈಲ್‌ ವಶಕ್ಕೆ ಪಡೆದು, ಮಾಲೀಕರಿಗೆ ವಿತರಿಸುತ್ತಿದ್ದೇವೆ. ಈ ತಿಂಗಳಲ್ಲಿ ಜಿಲ್ಲೆಯಲ್ಲಿ 300ಕ್ಕೂ ಅಧಿಕ ಫೋನ್‌ಗಳನ್ನು ಮಾಲೀಕರಿಗೆ ಹಸ್ತಾಂತರಿಸಲಿದ್ದೇವೆ. ಫೋನ್‌ ಕಳೆದುಹೋಗಿದ್ದರೆ ಅಥವಾ ಕಳುವಾಗಿದ್ದರೆ, ಜನರು ಸಿಇಐಆರ್ ಪೋರ್ಟಲ್‌ನಲ್ಲಿ ದೂರು ದಾಖಲಿಸುತ್ತಾರೆ. ಅದನ್ನು ಆಧರಿಸಿ ತನಿಖೆ ಕೈಗೊಳ್ಳುತ್ತೇವೆ. ಆ ಫೋನ್‌ಗಳಲ್ಲಿ ಯಾರಾದರೂ ತಮ್ಮ ಸಿಮ್‌ ಕಾರ್ಡ್‌ ಹಾಕಿದ ತಕ್ಷಣ ನಮಗೆ ಮಾಹಿತಿ ಸಿಗುತ್ತದೆ. ಅವರಿಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿ, ಫೋನ್‌ ಹಿಂತಿರುಗಿಸುವಂತೆ ಕೇಳುತ್ತೇವೆ ಎಂದರು.

-------


ಬಾಕ್ಸ್‌

ವಂಚಿಸಿದ್ದ ₹1 ಲಕ್ಷ ನಗದು ಜಪ್ತಿ

ಆನ್‌ಲೈನ್ ಗೇಮ್‌ ವ್ಯಸನಿಯಾಗಿದ್ದ ರಾಯಬಾಗ ತಾಲೂಕಿನ ಯಡ್ರಾಂವದ ಸಂತೋಷ ಪಡಲಾಲೆ ಎಂಬಾತ, ಸಾಲ ಮಂಜೂರು ಮಾಡಿಸುವುದಾಗಿ ನಂಬಿಸಿ ಜನರನ್ನು ವಂಚಿಸಿದ್ದಾನೆ. ಆತನನ್ನು ಬಂಧಿಸಿ ₹1 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ ಎಂದು ಕೆ.ರಾಮರಾಜನ್‌ ತಿಳಿಸಿದರು.

ಸಂತೋಷ ತಮಗೆ ಕರೆ ಮಾಡಿ ಹಣಕಾಸು ಸಂಸ್ಥೆಯ ಮೂಲಕ ಸಾಲ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದ. ಇದಕ್ಕಾಗಿ ಕ್ಯೂಆರ್ ಕೋಡ್ ಮೂಲಕ ಮೊದಲ ಕಂತಿನ ಹಣ ತಮಗೆ ಕಳುಹಿಸುವಂತೆ ಹೇಳಿದ್ದ. ಅದನ್ನು ನಂಬಿ ₹ 5,150 ಕಳುಹಿಸಿ ವಂಚನೆಗೆ ಒಳಗಾಗಿದ್ದೇನೆ ಎಂದು ಸವದತ್ತಿ ತಾಲೂಕಿನ ರುದ್ರಾಪುರ ತಾಂಡೆ ನಿವಾಸಿ ಸಕ್ಕುಬಾಯಿ ಲಮಾಣಿ ಪೊಲೀಸರಿಗೆ ದೂರು ನೀಡಿದ್ದರು. ಈತ 17 ಜನರಿಗೆ ₹2.17 ಲಕ್ಷ ವಂಚಿಸಿರುವುದು ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದರು.

-----

ಬಾಕ್ಸ್‌

ಜಿಲ್ಲೆಯಲ್ಲಿ 1,400 ಶಂಕಿತ ಖಾತೆಗಳು

ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲೇ ಸುಮಾರು 1,400 ಶಂಕಿತ ಖಾತೆಗಳು ಬಳಕೆಯಲ್ಲಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದರು. ಇಂಥ ಖಾತೆಗಳಿಗೆ, ಸೈಬರ್‌ ವಂಚಕರು ಮೊದಲು ಹಣ ಹಾಕಿಸಿಕೊಂಡು, ನಂತರ ಇತರೆ ಖಾತೆಗಳಿಗೆ ವರ್ಗಾಯಿಸುತ್ತಿದ್ದರು. ಇಂಥ ಮೂರು ಪ್ರಕರಣಗಳಲ್ಲಿ ಪ್ರಕರಣ ದಾಖಲಿಸಿದೆ. ಆರೋಪಿಗಳಾದ ನಿಪ್ಪಾಣಿಯ ಶುಭಂ ಲಕ್ಕನ್ನವರ, ಅಮಿತ ಶಿಂಧೆ, ರಾಹುಲ ಹಂಚನಾಳ, ಅಕ್ಷಯ ಪಸರೆ ಮತ್ತು ಗಜಾನನ ಧರ್ಮೋಡೆ ಎಂಬುವರು, ವಿವಿಧ ಬ್ಯಾಂಕ್‌ಗಳಲ್ಲಿ ಐದು ಖಾತೆ ತೆರೆದು ಬೇರೆ ರಾಜ್ಯಗಳ ಸೈಬರ್ ವಂಚಕರಿಗೆ ಬಾಡಿಗೆಗೆ ನೀಡಿದ್ದರು. ಅವರ ಖಾತೆಗಳಲ್ಲಿ ₹46.12 ಲಕ್ಷ ವಹಿವಾಟು ನಡೆದಿದೆ ಎಂದು ತಿಳಿಸಿದರು.

ಚಿಕ್ಕೋಡಿ ತಾಲೂಕಿನ ಕೆರೂರಿನ ಸಿದ್ದು ಡಾಂಗ ಮತ್ತು ಕುಲದೀಪ ಬ್ಯಾಳೆ ಎಂಬುವರು ತಮ್ಮ ಪರಿಚಿತರ ಹೆಸರಿನಲ್ಲಿ 15 ಬ್ಯಾಂಕ್ ಖಾತೆ ತೆರೆದಿದ್ದರು. ಅವುಗಳ ಪಾಸ್‌ಬುಕ್, ಎಟಿಎಂ ಕಾರ್ಡ್‌ ಮತ್ತು ಸಿಮ್‌ ಕಾರ್ಡ್‌ ತಮ್ಮ ಬಳಿ ಇರಿಸಿಕೊಂಡಿದ್ದರು. ಅವರ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ, ₹42.13 ಲಕ್ಷ ವಹಿವಾಟು ನಡೆದಿದೆ. ವಂಚನೆಗೆ ಸಂಬಂಧಿಸಿ ಇವರ ವಿರುದ್ಧ ದೇಶದ ವಿವಿಧೆಡೆ 68 ಪ್ರಕರಣ ದಾಖಲಾಗಿವೆ. ಆರೋಪಿಗಳ ಮನೆಗಳಲ್ಲಿ ಶೋಧ ನಡೆಸಿದಾಗ, ಇನ್ನೂ ಅನೇಕ ಖಾತೆ ತೆರೆದು ವಂಚಿಸಿರುವುದು ಬೆಳಕಿಗೆ ಬಂದಿದೆ ಎಂದಿರುವುದರ ಬಗ್ಗೆ ಮಾಹಿತಿ ನೀಡಿದರು.

ಈ ವೇಳೆ ಜಿಲ್ಲಾ ಸಿಇಎನ್ ಉಪ ಪೊಲೀಸ್ ವರಿಷ್ಠಾಧಿಕಾರಿ ವೀರೇಶ ದೊಡಮನಿ, ಇನ್‌ಸ್ಪೆಕ್ಟರ್‌ ಸುನೀಲಕುಮಾರ್ ಸೇರಿದಂತೆ ಪೊಲೀಸ್‌ ಸಿಬ್ಬಂದಿ ಹಾಜರಿದ್ದರು.