ಸನಾತನ ಧರ್ಮದ ಎಳೆಗಳು ಇಂದು ವಿಶ್ವವ್ಯಾಪಿ: ಚಿಂತಕಿ ವೀಣಾ ಬನ್ನಂಜೆ

| Published : Jun 26 2024, 12:35 AM IST

ಸನಾತನ ಧರ್ಮದ ಎಳೆಗಳು ಇಂದು ವಿಶ್ವವ್ಯಾಪಿ: ಚಿಂತಕಿ ವೀಣಾ ಬನ್ನಂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಸನಾತನ ಧರ್ಮದ ಎಳೆಗಳು ಇಂದು ವಿಶ್ವವ್ಯಾಪಿಯಾಗಿ ಹಬ್ಬುತ್ತಿವೆ ಎಂದು ಖ್ಯಾತ ವಾಗ್ಮಿ, ಆಧ್ಯಾತ್ಮಕ ಚಿಂತಕಿ ವೀಣಾ ಬನ್ನಂಜೆ ಅಭಿಪ್ರಾಯಪಟ್ಟರು. ಹಾಸನದಲ್ಲಿ ‘ಸನಾತನ ಧರ್ಮದಲ್ಲಿ ಮಹಿಳೆಯರ ಪಾತ್ರ’ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

117ನೇ ಹುಣ್ಣಿಮೆ ಕಾರ್ಯಕ್ರಮ । ಸನಾತನ ಧರ್ಮದಲ್ಲಿ ಮಹಿಳೆಯರ ಪಾತ್ರ ಉಪನ್ಯಾಸ

ಕನ್ನಡಪ್ರಭ ವಾರ್ತೆ ಹಾಸನ

ಸನಾತನ ಧರ್ಮದ ಎಳೆಗಳು ಇಂದು ವಿಶ್ವವ್ಯಾಪಿಯಾಗಿ ಹಬ್ಬುತ್ತಿವೆ ಎಂದು ಖ್ಯಾತ ವಾಗ್ಮಿ, ಆಧ್ಯಾತ್ಮಕ ಚಿಂತಕಿ ವೀಣಾ ಬನ್ನಂಜೆ ಅಭಿಪ್ರಾಯಪಟ್ಟರು.

ನಗರದ ಎಂ.ಜಿ ರಸ್ತೆಯ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆದ ‘ಗುರು ತೋರಿದ ದಾರಿ ತಿಂಗಳ ಮಾಮನ ತೇರು’ ೧೧೭ನೇ ಹುಣ್ಣಿಮೆ ಕಾರ್ಯಕ್ರಮದಲ್ಲಿ ‘ಸನಾತನ ಧರ್ಮದಲ್ಲಿ ಮಹಿಳೆಯರ ಪಾತ್ರ’ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಸನಾತನ ಧರ್ಮ ಎಲ್ಲವನ್ನು ಒಳಗೊಂಡಿದ್ದು, ಅದಕ್ಕೆ ಉಪ ಶೀರ್ಷಿಕೆಯನ್ನು ಕೊಟ್ಟರೆ ಅದು ಅಪೂರ್ಣವಾಗಲಿದೆ. ಸನಾತನ ಧರ್ಮ ಒಬ್ಬ ವ್ಯಕ್ತಿಯ ಜನನದಿಂದ ಮರಣದವರೆಗಿನ ಜೀವನ ಕ್ರಮ, ತತ್ವಗಳ ಬಗೆಗೆ ಪರಿಪೂರ್ಣ ಬೆಳಕು ಚೆಲ್ಲಿ ಸನ್ಮಾರ್ಗದ ದಾರಿ ತೋರುತ್ತದೆ. ಹಾಗಾಗಿ ಸನಾತನ ಧರ್ಮ ಇಡೀ ವಿಶ್ವಕ್ಕೆ ಅಗತ್ಯವಾಗಿದೆ ಎಂದು ಹೇಳಿದರು.

ವಿಶ್ವದ ಅತ್ಯಂತ ಪುರಾತನ ಧರ್ಮ ಸನಾತನ ಧರ್ಮ. ಹಿಂದೂ ಧರ್ಮದ ಮತ್ತೊಂದು ಹೆಸರು. ಸನಾತನ ಧರ್ಮದಲ್ಲಿ ಹಲವಾರು ವಿಭಿನ್ನ ತತ್ವಗಳು, ಸಂಪ್ರದಾಯಗಳು ಮತ್ತು ಪದ್ಧತಿಗಳಿವೆ. ಆದರೆ ಇವೆಲ್ಲದರ ಆಧಾರ ಒಂದೇ, ಆತ್ಮದ ಅಮರತ್ವ ಮತ್ತು ಮೋಕ್ಷ ಪ್ರಾಪ್ತಿ ಎಂದು ತಿಳಿಸಿದರು.

ಭಾರತ ದೇಶದಲ್ಲಿ ಮಾತ್ರ ಲಿಂಗ ಭೇದವಿಲ್ಲದೆ ಚಿಂತನೆ ನಡೆಸಲು ಸಾಧ್ಯ. ಸನಾತನ ಧರ್ಮದಲ್ಲೂ ಕೂಡ ಹೆಣ್ಣಿಗೆ ಗೌರವಾನ್ವಿತ ಸ್ಥಾನಮಾನವಿದ್ದದ್ದನ್ನು ಸ್ಪಷ್ಟೀಕರಿಸುತ್ತದೆ. ಹೆಣ್ಣು ಪುರುಷನಷ್ಟೇ ಸರ್ವ ಸಮಾನಳು. ಸನಾತನ ಧರ್ಮ ಮಹಿಳೆಯನ್ನು ದೇವತೆ, ಶಕ್ತಿಯ ಸಂಕೇತವೆಂದು ಪರಿಗಣಿಸುತ್ತದೆ. ಅದನ್ನು ಇಂದಿನ ಸಮಾಜ ಅರಿತು ನಡೆದರೆ ಸಾಕು ಎಂದು ತಿಳಿಸಿದರು.

ಹೆಣ್ಣಿನ ಅರ್ಹತೆಗಳನ್ನು ಅರಿಯುವುದು ಇಂದಿನ ದಿನಗಳಲ್ಲಿ ಅವಶ್ಯ ಎನಿಸುತ್ತಿದೆ. ಜಗತ್ತಿನ ಪ್ರಥಮ ಸೃಷ್ಟಿ ಹೆಣ್ಣು. ತಾಯಿ ಇಲ್ಲದೆ ಆಧ್ಯಾತ್ಮವಿಲ್ಲ ಎಂಬುದನ್ನು ಮನಗಾಣಬೇಕು. ಹೆಣ್ಣಿಲ್ಲದೆ ಸಮಾಜ ಸರಿ ದಾರಿಯಲ್ಲಿ ಸಾಗಲು ಸಾಧ್ಯವಿಲ್ಲ. ಮಹಿಳೆ ಸಮಾಜದಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸುತ್ತ ವಿವಿಧ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆ ನೀಡಿದ್ದಾಳೆ ಎಂದರು.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಮಠದ ಶಂಭುನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಗುರು-ಹಿರಿಯರ ಮಾರ್ಗದರ್ಶನ ಬದುಕಿಗೆ ದಾರಿ ದೀಪವಾಗಬೇಕು. ಮಹನೀಯರು ನಮ್ಮ ಸಂಸ್ಕೃತಿಗೆ ಸಾಕಷ್ಟು ಕೊಡುಗೆ ನೀಡಿದ್ದು, ಅದನ್ನು ಅರಿತು ಸಮಾಜದಲ್ಲಿ ಸಂಸ್ಕಾರವಂತರಾಗಿ ಬಾಳುವ ಕೆಲಸ ನಮ್ಮಿಂದಾಗಬೇಕಿದೆ ಎಂದರು.

‘ಮನುಷ್ಯ ಜನ್ಮ ಶ್ರೇಷ್ಠವಾದುದು. ಇಲ್ಲಿ ಉತ್ತಮ ಸಂಬಂಧಗಳನ್ನು ಬೆಸೆದುಕೊಂಡು ಸಮಾಜದ ಸತ್ಪ್ರಜೆಗಳಾಗಿ ಬಾಳಬೇಕು. ಆಧ್ಯಾತ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ಆ ಮೂಲಕ ನಾವು ಮಾಡುವ ಪಾಪ, ಕರ್ಮಗಳನ್ನು ಕಡಿಮೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ಶ್ರೀ ಮಠದ ಹುಣ್ಣಿಮೆ ಕಾರ್ಯಕ್ರಮ ಒಂದು ಯಾಗದಂತೆ ನಡೆದುಕೊಂಡು ಬರುತ್ತಿದೆ. ಇದೊಂದು ವಿಶೇಷವಾದ ಕಾರ್ಯಕ್ರಮವಾಗಿದ್ದು, ಗುರು ಪರಂಪರೆಯ ಬಗೆಗೆ ಬೆಳಕು ಚೆಲ್ಲುವ ಪ್ರಯತ್ನ ನಿರಂತರವಾಗಿ ಸಾಗುತ್ತಿದೆ. ಈ ಪವಿತ್ರ ಕಾರ್ಯಕ್ರಮದಲ್ಲಿನ ವಿಚಾರಧಾರೆಗಳನ್ನು ಎಲ್ಲರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಶ್ರೀ ಮಠದ ಹುಣ್ಣಿಮೆ ಕಾರ್ಯಕ್ರಮಗಳ ಸಂಚಾಲಕ ಎಚ್.ಬಿ ಮದನಗೌಡ, ಹರಿಹರಪುರ ಶ್ರೀಧರ್, ಪ್ರಾಂಶುಪಾಲ ಜಿ.ಡಿ. ನಾರಾಯಣ್, ಶ್ರೀ ಮಠದ ವ್ಯವಸ್ಥಾಪಕ ಚಂದ್ರಶೇಖರ್, ಕಸಾಪ ಗೌರವ ಕಾರ್ಯದರ್ಶಿ ಬಿ.ಆರ್.ಬೊಮ್ಮೇಗೌಡ ಇದ್ದರು.

ಭಾಗ್ಯಲಕ್ಷ್ಮೀ ಕಾರ್ಯಕ್ರಮದ ಪ್ರಾರ್ಥನೆ ನೆರವೇರಿದರು. ಉಪನ್ಯಾಸಕ ಎಚ್.ಕೆ ಲಕ್ಷ್ಮೀನಾರಾಯಣ ನಿರೂಪಣೆ ಮಾಡಿದರು.