ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಆತ್ಮಹತ್ಯೆ ಮಾಡಿಕೊಂಡಿರುವ ಬೀದರ್ ಮೂಲದ ಗುತ್ತಿಗೆದಾರ್ ಪಂಚಾಳ ಕೇಸ್‌ನಲ್ಲಿ ತಾವು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ, ಅವರ ಆಪ್ತರ ಗ್ಯಾಂಗ್ ವಿರುದ್ಧ ನೀಡಿರುವ ಹೇಳಿಕೆಗಳನ್ನು ಖಂಡಿಸಿ ಕೆಲವರು ತಮ್ಮ ವೈಯಕ್ತಿಕ ಮೋಬೈಲ್ ನಂಬರ್‌ಗೆ ಧಮ್ಕಿ ನೀಡಿರುವ, ಅವಾಚ್ಯವಾಗಿ ನಿಂದಿಸಿರುವ ವಿಡಿಯೋ ಕಳುಹಿಸಿ ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ಸಾಕ್ಷಿ ಸಮೇತ ಜೇವರ್ಗಿ ಪೊಲೀಸರಿಗೆ ದೂರು ಕೊಟ್ಟು 4 ದಿನವಾದರೂ ಇಂದಿಗೂ ಎಫ್‌ಐಆರ್ ದಾಖಲಾಗಿಲ್ಲ. ಕೇಳಿದರೆ ಜಿಲ್ಲಾ ಎಸ್ಪಿಯವರ ಅಭಿಪ್ರಾಯಕ್ಕಾಗಿ ಕಳುಹಿಸಿದ್ದೇವೆಂದು ಸಮಜಾಯಿಷಿ ನೀಡುತ್ತಿದ್ದಾರೆಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷರು, ಆಂದೋಲಾ ಕರುಣೇಶ್ವರ ಮಠದ ಪೀಠಾಧಿಪತಿಗಳೂ ಆಗಿರುವ ಸಿದ್ದಲಿಂಗ ಶ್ರೀಗಳು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ವಾಡಿಯಿಂದ ಗುರುಪ್ರಸಾದ್ ಹಾಗೂ ದಲಿತ ಯುವ ಮುಖಂಡನೆಂದು ಹೇಳಿಕೊಂಡಿರುವ ಡಾ.ಮಹೇಶ ತೆಲಗಿ ಎಂಬಿಬ್ಬರು ತಮಗೆ ವಿಡಿಯೋ ಕಳುಹಿಸಿ ಅವಾಚ್ಯವಾಗಿ ನಿಂದಿಸಿದ್ದಾರೆ. ಅಸಂವಿಧಾನಿಕ ಪದ ಬಳಸಿದ್ದಾರೆ. ಇವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಲು ಸಹ ಜೇವರ್ಗಿ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆಂದು ಧ್ವನಿ ಸುರುಳಿಯನ್ನು ಮಾಧ್ಯಮಗೋಷ್ಠಿಯಲ್ಲಿ ಕೇಳಿಸಿದರು.
ಹಿಂದೆ ಖರ್ಗೆ ಸಾಹೇಬರು ತಮ್ಮ ತಾಯಿಗೆ ಯಾರೋ ತೇಜೋವಧೆ ಮಾಡಿದ್ದಾರೆಂದು ಕೋಪಗೊಂಡಿದ್ದರು. ಈಗ ನಮ್ಮದು ತೇವಜೋವಧೆಯಾಗುತ್ತಿದೆ. ಸಂವಿಧಾನಾತ್ಮಕವಾಗಿ ಪ್ರಕರಣ ದಾಖಲಿಸಲು ಹೋದರೂ ಪೊಲೀಸರು ಮೀನಮೇಷ ಎಣಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಯಾಕೆ ಇದನ್ನೆಲ್ಲ ನೋಡೋದಿಲ್ಲ. ಪೊಲೀಸ್ ಪ್ರಕರಣ ದಾಖಲಿಸೋದು ನೊಂದವರು, ಹಾನಿಗೊಳಗಾದವರ ಹಕ್ಕಾದರೂ ಕಲಬುರಗಿಯಲ್ಲಿ ಜನರಿಂದ ಆ ಹಕ್ಕು ಕಸಿಯಲಾಗಿದೆ ಎಂದು ದೂರಿದರು.ವಿಜಯಪುರದಲ್ಲಿ ವ್ಯಕ್ತಿಯೋರ್ವ ಪೇಜಾವರ ಶ್ರೀಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿ ಭೀಮಾ ಕೋರೆಗಾಂವ್ 2ನೇ ಹೋರಾಟ ಮಾಡೋದಾಗಿ ಹೇಳಿಕೆ ನೀಡಿದ್ದ. ಸ್ವಾಮಿಗಳಿಗೆ ಹೀಗೆ ಬೆದರಿಸುವ ತಂತ್ರ ನಡೆಯುತ್ತಿದ್ದರೂ ಪ್ರಕರಣ ದಾಖಲಿಸಲು ಪೊಲೀಸರಿಗೆ ಏನು ತೊಂದರೆ?
ಕಲಬುರಗಿ, ವಿಜಯಪುರದಲ್ಲಿ ಪೊಲೀಸರು ಇದನ್ನೆಲ್ಲ ಗಾಳಿಗೆ ತೂರಿ ರಾಜಕಾರಣಿಗಳ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆಂದು ಆಂದೋಲಾ ಗುರುಗಳು ದೂರಿದರು. ತಕ್ಷಣ ದೂರನ್ನು ದಾಖಲಿಸಿಕೊಳ್ಳದ ಪೊಲೀಸರ ನಡೆ ಖಂಡಿಸಿದ ಗುರುಗಳು ಇನ್ನಾರೂ ಪೊಲೀಸರು ಜನಪರವಾಗಿರಲಿ, ತಕ್ಷಣ ದೂರು ದಾಖಲಿಸಿ ಕಿರುಕುಳ ಕೊಡುವವರನ್ನು ಬಂಧಿಸಿ ಕಾನೂನು ಕ್ರಮಕ್ಕೆ ಮುಂದಾಗಲಿ ಎಂದರು.ಸುಪಾರಿ ಸೇನೆಯಷ್ಟು ಡೇಂಜರ್ ಅಲ್ಲ:
ತಮ್ಮನ್ನು ಸಚಿವ ಖರ್ಗೆ ಡ್ರಾಮಾ ಸೇನೆ ಎಂದು ಲೇವಡಿ ಮಾಡಿದ್ದಾರೆ. ನಾವು ಡ್ರಾಮಾ ಸೇನೆಯೇ ಆಗಿದ್ದರೂ ಸುಪಾರಿ ಸೇನೆಯಷ್ಟು ಡೇಂಜರ್ ಕೆಲಸ ಮಾಡೋರಲ್ಲವೆಂದು ತಿವಿದರು. ಈಶ್ವರಪ್ಪ ಹೆಸರು ಬರೆದು ಸಾವನ್ನಪ್ಪಿದ್ದ ಗುತ್ತಿಗೆದಾರನ ಬಗ್ಗೆ ಖರ್ಗೆ ತುಂಬ ದುಃಖಿತರಾಗಿದ್ದರು. ಇದೀಗ ಬೀದರ್ ಗುತ್ತಿಗೆದಾರನ ಕೇಸ್‌ನಲ್ಲಿ ಯಾಕೆ ಭಿನ್ನರಾಗ ಹಾಡುತ್ತಿದ್ದಾರೆಂದು ಪ್ರಶ್ನಿಸಿದರು.ಸಚಿನ್ ಸಾವಿಗೆ ಕಾರಣವಾದ ಅಷ್ಟ ಗ್ರಹಗಳು ಸ್ವಚ್ಛಂದವಾಗಿವೆ:
ಬೀದರ್‌ನ ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೆ ಕಾರಣರಾಗಿರುವ ಸಚಿವ ಪ್ರಿಯಾಂಕ್ ಆಪ್ತರಾಗಿರುವ ರಾಜು ಕಪನೂರ್ ಸೇರಿದಂತೆ 8 ಜನರನ್ನು ಅಷ್ಟಮ ಗ್ರಹಗಳೆಂದು ಬಮ್ಣಿಸುತ್ತ ಈ ಗ್ರಹಗಳು ಹಾಗ ವಿಹರಿಸುತ್ತಿವೆ. ಇವರಿಗೆಲ್ಲರಿಗೂ ಉಚ್ಚ ಸ್ಥಾನದಲ್ಲಿರುವ ಗುರು ಗ್ರಹದಿಂದಾಗಿ ಇವು ಬಚಾವ್ ಆಗುತ್ತಿವೆ ಎಂದು ಸಚಿವ ಖರ್ಗೆ ಗುರುಗ್ರಹಕ್ಕೆ ಹೋಲಿಕೆ ಮಾಡಿ ಲೇವಡಿ ಮಾಡಿದರು.ಡೆತ್‌ನೋಟ್‌ನಲ್ಲಿ ಹೆಸರು ಪ್ರಸ್ತಾಪವಾಗಿರುವ ಆರೋಪಿಗಳನ್ನು ಬಂಧಿಸದೆ ಸಿಐಡಿ ಬೀದರ್, ಕಲಬುರಗಿ, ಯಾದಗಿರಿ ಸುತ್ತಾಡಿದ್ದರ ಫಲವಾದರೂ ಏನೂ? ಇದೆಲ್ಲವೂ ವ್ಯರ್ಥ ಕಸರತ್ತೆಂದರು. ಸಿಐಡಿ ಮೇಲೆ ನಂಬಿಕೆ ಇಲ್ಲ ಘಟನೆಯ ತನಖೆ ಸಿಬಿಐಗೆ ಒಪ್ಪಿಸುವಂತೆ ಈಗಾಗಲೇ ಬಿಜೆಪಿ ಶಾಸಕ ಬಸವರಾಜ ಮತ್ತಿಮಡು ಗೃಹ ಸಚಿವರಿಗೆ ಪತ್ರ ಸಲ್ಲಿಸಿ ಆಗ್ರಹಿಸಿದ್ದಾರೆ. ಅವರೇನು ನಿರ್ಣಯ ಮಾಡುತ್ತಾರೋ ಕಾದು ನೋಡೋಣವೆಂದರು.
ಸುದ್ದಿಗೋಷ್ಠಿಯಲ್ಲಿದ್ದ ಮಾಜಿ ಸಂಸದ ಡಾ.ಉಮೇಶ ಜಾದವ್, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಬಿಜೆಪಿ ವಕ್ತಾರೆ ಡಾ.ಸುಧಾ ಹಾಲಕಾಯಿ ಮಾತನಾಡುತ್ತ, ಮರಣ ಪತ್ರದಲ್ಲಿ ಹೆಸರು ಉಲ್ಲೇಖವಾದರೂ ಆರೋಪಿಗಳನ್ನು ಬಂಧಿಸದೆ ಹಾಗೇ ಬಿಟ್ಟಿರೋದರ ಹಿಂದೆ ಸಾಕ್ಷಿನಾಶಕ್ಕೆ ಅವರಿಗೆ ನೆರವು ನೀಡುವ ಪೊಲೀಸರ ಸಂಚು ಅಡಗಿದೆ ಎಂದು ದೂರಿದರು.