ಗಡಿಗ್ರಾಮಗಳಿಂದ ‘ಲೋಕ’ಚುನಾವಣೆ ಬಹಿಷ್ಕರಿಸುವ ಬೆದರಿಕೆ

| Published : Mar 27 2024, 01:08 AM IST

ಗಡಿಗ್ರಾಮಗಳಿಂದ ‘ಲೋಕ’ಚುನಾವಣೆ ಬಹಿಷ್ಕರಿಸುವ ಬೆದರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ತಮಿಳುನಾಡು ಗಡಿಯಲ್ಲಿರುವ ಕದರಿನತ್ತ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಹಲವು ದಶಕಗಳಿಂದ ಕಾಡಾನೆಗಳ ಜೊತೆ ಸಂಘರ್ಷ ನಡೆಸಿಕೊಂಡು ಬರುತ್ತಿದ್ದಾರೆ. ಆನೆಗಳ ಹಾವಳಿಯಿಂದ ರೈತರು ಬೆಳೆದ ಬೆಳೆಗಳು ಹಾನಿಯಾಗುತ್ತಿವೆ. ಈ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಹಾಗೂ ರೈತ ಸಂಘದ ನೇತೃತ್ವದಲ್ಲಿ ಹಲವಾರು ಬಾರಿ ಹೋರಾಟಗಳನ್ನು ನಡೆಸಿ, ಜನಪ್ರತಿನಿಧಿಗಳಿಗೆ, ಅರಣ್ಯ ಇಲಾಖಾಧಿಕಾರಿಗಳಿಗೆ ಮನವಿಗಳನ್ನು ಸಲ್ಲಿಸಿದ್ದರೂ ಸಹ ಸಮಸ್ಯೆ ನೀಗಿಲ್ಲ ಹಾಗೂ ಕದರಿನತ್ತ ಗ್ರಾಮ ಸೌಲಭ್ಯಗಳಿಂದ ವಂಚನೆಗೊಳಗಾಗಿದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಗಡಿ ಭಾಗದ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ತಪ್ಪಿಸಲು ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸದಿದ್ದರೆ ಲೋಕಸಭೆ ಚುನಾವಣೆ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಅಧಿಕಾರಿಗಳು ಗಡಿಭಾಗದ ಕದರಿನತ್ತ ಗ್ರಾಮಕ್ಕೆ ದೌಡಾಯಿಸಿ ಗ್ರಾಮಸ್ಥರನ್ನು ಸಮಾಧಾನಪಡಿಸಿದರು.

ತಮಿಳುನಾಡು ಗಡಿಯಲ್ಲಿರುವ ಕದರಿನತ್ತ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಹಲವು ದಶಕಗಳಿಂದ ಕಾಡಾನೆಗಳ ಜೊತೆ ಸಂಘರ್ಷ ನಡೆಸಿಕೊಂಡು ಬರುತ್ತಿದ್ದಾರೆ. ಆನೆಗಳ ಹಾವಳಿಯಿಂದ ರೈತರು ಬೆಳೆದ ಬೆಳೆಗಳು ಹಾನಿಯಾಗುತ್ತಿವೆ. ಈ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಹಾಗೂ ರೈತ ಸಂಘದ ನೇತೃತ್ವದಲ್ಲಿ ಹಲವಾರು ಬಾರಿ ಹೋರಾಟಗಳನ್ನು ನಡೆಸಿ, ಜನಪ್ರತಿನಿಧಿಗಳಿಗೆ, ಅರಣ್ಯ ಇಲಾಖಾಧಿಕಾರಿಗಳಿಗೆ ಮನವಿಗಳನ್ನು ಸಲ್ಲಿಸಿದ್ದರೂ ಸಹ ಸಮಸ್ಯೆ ನೀಗಿಲ್ಲ ಹಾಗೂ ಕದರಿನತ್ತ ಗ್ರಾಮ ಸೌಲಭ್ಯಗಳಿಂದ ವಂಚನೆಗೊಳಗಾಗಿದೆ. ಆದ್ದರಿಂದ ಆನೆಗಳ ಹಾವಳಿ ತಪ್ಪಿಸಿ, ಗ್ರಾಮಕ್ಕೆ ಅಗತ್ಯ ಸೌಲಭ್ಯ ಕಲ್ಪಿಸದಿದ್ದರೆ ಲೋಕಸಭೆ ಚುನಾವಣೆ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಬೆದರಿಕೆ ಹಾಕಿದ್ದರು.

ಗ್ರಾಮಸ್ಥರ ಮನವೊಲಿಸಿ ಮತದಾನದಿಂದ ದೂರ ಉಳಿಯದಂತೆ ತಡೆಯಲು ಗ್ರಾಮಕ್ಕೆ ತಹಸೀಲ್ದಾರ್ ರಶ್ಮಿ, ಸಹಾಯಕ ಚುನಾವಣಾಧಿಕಾರಿ ಶಿವಕುಮಾರ್, ತಾಪಂ ಇಒ ರವಿ ಕುಮಾರ್ ತೆರಳಿ ಸಮಸ್ಯೆಗಳನ್ನು ಆಲಿಸಿದರು.

ಗಡಿಯಲ್ಲಿರುವ ಗ್ರಾಮಗಳು ರಸ್ತೆ, ಶಾಲೆ, ಆಸ್ಪತ್ರೆ, ಸ್ಮಶಾನ ಜಾಗ, ಬೀದಿದೀಪ, ಸಾರಿಗೆ ವ್ಯವಸ್ಥೆ ಹೀಗೆ ಹಲವು ಸಮಸ್ಯೆಗಳಿಂದ ವಂಚಿತವಾಗಿದೆ. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳಿಗೆ ಕದರಿನತ್ತ ಎಲ್ಲಿದೆ ಎಂಬುದು ಕೂಡ ಅರಿವಿಲ್ಲದಂತಾಗಿದೆ ಎಂದು ಗ್ರಾಮಸ್ಥರ ಪರವಾಗಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ತರಾಟೆಗೆ ತೆಗೆದುಕೊಂಡರು.

ಕಾಡಾನೆ - ಮಾನವನ ಸಂಘರ್ಷ ನಿರಂತರವಾಗಿ ಮುಂದುವರೆಯುತ್ತಲೇ ಇದೆ, ಅಧಿಕಾರಿಗಳು ಬರುತ್ತಾರೆ, ಹೋಗುತ್ತಾರೆ, ಜನಪ್ರತಿನಿಧಿಗಳು ಗೊತ್ತಿದ್ದು ಮೌನವಾಗಿದ್ದಾರೆ. ಅಧಿಕಾರಿಗಳು ಮೇಲಾಧಿಕಾರಿಗಳಿಗೆ ಅರ್ಜಿಗಳನ್ನು ಸಲ್ಲಿಸಿದರೆ ಸಾಲದು, ಅಭಿವೃದ್ಧಿ ಕಾರ್ಯಗತವಾಗಲು ಕ್ರಮಕೈಗೊಳ್ಳಬೇಕು. ಆಗ ಮಾತ್ರ ಪ್ರತಿಫಲ ಕಂಡುಕೊಳ್ಳಲು ಸಾಧ್ಯ ಎಂದು ತಿಳಿಸಿದರು.

ಅರಣ್ಯ ಭಾಗದಲ್ಲಿ ಹಾದು ಹೋಗಿರುವ ಕಾಲುವೆಯಲ್ಲಿ ಅಲ್ಲಲ್ಲಿ ಚೆಕ್​ ಡ್ಯಾಂ ನಿರ್ಮಿಸಿದರೆ ಕಾಡು ಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬಹುದು, ಅಂತರ್ಜಲವು ವೃದ್ಧಿಯಾಗುತ್ತದೆ. ನೈಸರ್ಗಿಕವಾಗಿ ಕಾಡಾನೆಗಳಿಗೆ ಕಡಿವಾಣ ಹಾಕಬಹುದಿತ್ತು ಎಂದರು.

ನಂತರ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಹಾಗೂ ಸಹಾಯಕ ಚುನಾವಣಾಧಿಕಾರಿ ಶಿವಕುಮಾರ್​ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಬಹಿಷ್ಕರಿಸುವುದು ಸರಿಯಲ್ಲ. ಗ್ರಾಮಸ್ಥರು ತಮ್ಮ ನಿರ್ಧಾರವನ್ನು ವಾಪಸ್​ ಪಡೆಯಬೇಕು. ಚುನಾವಣಾ ನೀತಿ ಸಂಹಿತೆ ಮುಗಿದ ನಂತರ ಹಂತಹಂತವಾಗಿ ಸಮಸ್ಯೆ ಬಗೆಹರಿಸಲಾವುದು ಎಂದು ಭರವಸೆ ನೀಡಿದರು.

ತಹಸೀಲ್ದಾರ್​ ರಶ್ಮಿ ಮಾತನಾಡಿ, ಗ್ರಾಮದ ಸ್ಮಶಾನಕ್ಕಾಗಿ ಮನವಿ ಸಲ್ಲಿಸಿದ್ದಾಗ ಆದ್ಯತೆ ಮೇರೆಗೆ 15 ಗುಂಟೆ ಜಾಗ ಗುರುತಿಸಲಾಗಿದೆ. ಜೂನ್​ 6 ಕ್ಕೆ ನೀತಿ ಸಂಹಿತಿ ಪೂರ್ಣಗೊಂಡ ನಂತರ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಕ್ಕೆ ತರಲು ಒತ್ತು ನೀಡುವ ಭರವಸೆ ನೀಡಿದರು.