ಸಾರಾಂಶ
- ಸಿ.ಟಿ.ರವಿ, ಪ್ರಮೋದ್ ಮುತಾಲಿಕ್, ಚಕ್ರವರ್ತಿ ಸೂಲಿಬೆಲೆ ಅವರಿಂದ ಸಮಾಜ ಒಡೆಯುವ ಹೇಳಿಕೆ । ದೇವರಾಜ್ ಆರೋಪ
----ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು: ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹಾಗೂ ಚಕ್ರವರ್ತಿ ಸೂಲಿಬೆಲೆ ಅವರು ದತ್ತ ಜಯಂತಿ ಹೆಸರಿನಲ್ಲಿ ಜಿಲ್ಲೆಯ ಕೋಮು ಸೌಹಾರ್ದತೆಗೆ ಧಕ್ಕೆ ತರುತ್ತಿದ್ದಾರೆ, ಸಮಾಜ ಒಡೆಯುವ ಹೇಳಿಕೆ ನೀಡಿ, ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ, ಸಂಘ ಪರಿವಾರದ ಮುಖಂಡರ ಈ ಹೇಳಿಕೆ ಆಧಾರ ರಹಿತ ಎಂದು ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದತ್ತ ಜಯಂತಿ ಹೆಸರಿನಲ್ಲಿ ಬಿಜೆಪಿ, ಸಂಘ ಪರಿವಾರದವರು ಆಡುತ್ತಿರುವ ನಾಟಕ ನಾಡಿನ ಜನತೆಗೆ ಅರ್ಥವಾಗಿದೆ. ಈ ಕಾರಣದಿಂದ ದತ್ತಜಯಂತಿ ಕಾರ್ಯಕ್ರಮಕ್ಕೆ ಬರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಈ ಬಾರಿ ಹಣ ಕೊಟ್ಟು ದತ್ತಜಯಂತಿಗೆ ಜನರನ್ನು ಕರೆ ತಂದಿದ್ದಾರೆ. ಬಿಜೆಪಿಯವರ ನಾಟಕ ಜನರಿಗೆ ಅರ್ಥವಾಗುತ್ತಿರುವುದರಿಂದ ಬಿಜೆಪಿ, ಆರೆಸೆಸ್, ಸಂಘಪರಿವಾರದ ಶಕ್ತಿ ಕ್ಷೀಣಿಸುತ್ತಿದೆ ಎಂದರು.ದತ್ತಜಯಂತಿ ಕಾರ್ಯಕ್ರಮದಲ್ಲಿ ಪ್ರಮೋದ್ ಮುತಾಲಿಕ್ ಮಾತನಾಡಿ, ಹಿಂದುಗಳು ಒಗ್ಗಟ್ಟಾದರೇ ಹಿಂದೂ ಧರ್ಮ ಹಿಂದುಗಳಿಗೆ ರಕ್ಷಣೆ ನೀಡುತ್ತದೆ ಎಂದು ಹೇಳಿದ್ದಾರೆ. ಹಿಂದುಗಳೂ ಸೇರಿದಂತೆ ಎಲ್ಲ ಧರ್ಮದ ನಾಗರಿಕರಿಗೆ ರಕ್ಷಣೆ ನೀಡುತ್ತಿರುವುದು ಡಾ.ಬಿ.ಆರ್.ಅಂಬೇಡ್ಕರ್ ಬರೆದಿರುವ ಸಂವಿಧಾನವೇ ಹೊರತು ಯಾವುದೇ ಧರ್ಮವಲ್ಲ. ಈ ದೇಶದಲ್ಲಿ ಹಿಂದುಗಳಿಗೆ, ಅಲ್ಪಸಂಖ್ಯಾತರಿಗೆ, ದಲಿತರಿಗೆಂದು ಪ್ರತ್ಯೇಕ ಸಂವಿಧಾನ ಇಲ್ಲ, ಎಲ್ಲರಿಗೂ ಇರುವುದು ಒಂದೇ ಸಂವಿಧಾನ. ಆ ಸಂವಿಧಾನ ಎಲ್ಲ ಧರ್ಮದವರಿಗೂ ರಕ್ಷಣೆ ನೀಡುತ್ತಿದೆ. ಅಂಬೇಡ್ಕರ್ ಸಂವಿಧಾನ ಬಿಟ್ಟು ಬದುಕಲು ಸಾಧ್ಯವಿಲ್ಲ. ಪ್ರಮೋದ್ ಮುತಾಲಿಕ್ ಜಿಲ್ಲೆಯ ಕೋಮು ಸಾಮರಸ್ಯವನ್ನು ಹದಗೆಡಿಸುವಲ್ಲಿ ಪ್ರತಿವರ್ಷ ದತ್ತಜಯಂತಿ ಸಂದರ್ಭ ಜಿಲ್ಲೆಗೆ ಬಂದು ಜನರ ಭಾವನೆ ಕೆರಳಿಸುತ್ತಿದ್ದಾರೆ. ಇದನ್ನು ನಿಲ್ಲಿಸದಿದ್ದಲ್ಲಿ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಸಿದರು.
ಚಕ್ರವರ್ತಿ ಸೂಲಿಬೆಲೆ ಹೇಳುವುದೆಲ್ಲವೂ ಸುಳ್ಳು, ಮೋದಿ ಪ್ರಧಾನಿಯಾದರೇ ದೇಶಾದ್ಯಂತ ಚಿನ್ನದ ರಸ್ತೆ ನಿರ್ಮಿಸುತ್ತಾರೆ ಎಂದು ಈ ಹಿಂದೆ ಅವರು ಹೇಳಿಕೆ ನೀಡಿದ್ದರು. ಚಿನ್ನದ ರಸ್ತೆ ಎಲ್ಲಿದೆ ಎಂದು ಅವರು ಹೇಳಬೇಕು. ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರನ್ನು ತುಷ್ಟೀಕರಣ ಮಾಡುತ್ತಿದೆ ಎಂದು ಆಧಾರ ರಹಿತ ಆರೋಪ ಮಾಡಿರುವುದನ್ನು ಪಕ್ಷ ಖಂಡಿಸುತ್ತದೆ ಎಂದರು.ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಎರಡು ಬಾರಿ ಮಂತ್ರಿಯೂ ಆಗಿದ್ದರು. ದತ್ತ ಜಯಂತಿ ಸಂದರ್ಭದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿರುವ ಅವರು, ದತ್ತಪೀಠದಲ್ಲಿರುವ ಗೋರಿಗಳನ್ನು ತೆರವು ಮಾಡಿ ನಾಗೇನಹಳ್ಳಿಗೆ ಸ್ಥಳಾಂತರ ಮಾಡಬೇಕು ಎಂದಿದ್ದಾರೆ. ಅಧಿಕಾರದಲ್ಲಿದ್ದ ಅವಧಿಯಲ್ಲಿ ಗೋರಿಗಳನ್ನು ತೆರವು ಮಾಡಲು ಅವರಿಂದ ಏಕೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದರು.
ಬಾಬಾಬುಡನ್ ದರ್ಗಾ, ದತ್ತಪೀಠದ ವಿಚಾರದಲ್ಲಿ ನ್ಯಾಯಾಲಯದ ಆದೇಶವಿದೆ. ವಿವಾದ ಇರುವ ಸ್ಥಳದ ವಿಚಾರ ಮಾತನಾಡುವ ಸಂದರ್ಭದಲ್ಲಿ ಸಿ.ಟಿ.ರವಿ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಮಾತನಾಡಿದ್ದಾರೆ. ಸಿ.ಟಿ.ರವಿಗೆ ಅಲ್ಲಿರುವ ಗೋರಿಗಳನ್ನು ಒಂದಿಂಚೂ ಅಲ್ಲಾಡಿಸಲು ಆಗುವುದಿಲ್ಲ. ತಾಕತ್ತಿದ್ದರೇ ಗೋರಿಗಳನ್ನು ಅಲ್ಲಾಡಿಸಲಿ ನೋಡೋಣ, ದತ್ತಪೀಠಕ್ಕಾಗಿ 25 ವರ್ಷಗಳಿಂದ ಹೋರಾಟ ಮಾಡಿದ್ದೇವೆ ಎನ್ನುವ ಸಿ.ಟಿ.ರವಿ ದತ್ತಪೀಠದ ವಿಚಾರದಲ್ಲಿ ಜನರ ಭಾವನೆ ಕೆರಳಿಸಿ ಅಧಿಕಾರ ಗಳಿಸಿದ್ದೇ ಸಾಧನೆ, ಮತ್ತೆ ಅಧಿಕಾರಕ್ಕಾಗಿಯೇ ದತ್ತಪೀಠದ ವಿಚಾರ ಮುಂದಿಟ್ಟುಕೊಂಡು ಜನರ ತಲೆಗೆ ಧರ್ಮದ ಮಧ ತುಂಬುತ್ತಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಹಿರೇಮಗಳೂರು ರಾಮಚಂದ್ರ, ಆನಂದ್ ಕೋಟೆ, ಜಯರಾಜ್ ಅರಸ್, ಶಾಂತಕುಮಾರ್, ಶಿವರಾಮ್, ಶ್ರೀನಿವಾಸ ದೇವಾಂಗ, ಬಿ.ಎಂ.ರಘು ಉಪಸ್ಥಿತರಿದ್ದರು.------
ಪೋಟೋ: 16 ಕೆಸಿಕೆಎಂ 4