ಗಣಿಗಾರಿಕೆಯಿಂದ ಹುಲುಕುಡಿ ಪರಂಪರೆಗೆ ಧಕ್ಕೆ: ಡಾ.ಎಸ್.ವೆಂಕಟೇಶ್

| Published : Jan 21 2025, 12:30 AM IST

ಸಾರಾಂಶ

ಸ್ಥಳೀಯ ಪರಂಪರೆ ಹಾಗೂ ಪ್ರಕೃತಿ ಉಳಿಸುವಲ್ಲಿ ನಾವು ಹೊಣೆಗಾರಿಕೆ ತೋರದೆ ನಮ್ಮ ಪ್ರದೇಶಗಳನ್ನು ವಾಣಿಜ್ಯೀಕರಿಸುತ್ತಿರುವುದು ಸಂಸ್ಕೃತಿ ನಾಶಕ್ಕೆ ಕಾರಣವಾಗುತ್ತಿದೆ ಎಂದೂ ಆತಂಕ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಹುಲುಕುಡಿ ಬೆಟ್ಟದ ಸುತ್ತ ಗಣಿಗಾರಿಕೆ, ಅತಿಕ್ರಮಣದಿಂದಾಗಿ ಆದಿ ಮಾನವ ಚರಿತ್ರ ಹೆಗ್ಗುರುತುಗಳನ್ನು ಹೊಂದಿರುವ ಈ ಪ್ರದೇಶ ಸಾಂಸ್ಕೃತಿಕವಾಗಿ ಹಾಗೂ ಭೌಗೋಳಿಕವಾಗಿ ವಿನಾಶ ಹೊಂದುತ್ತಿದೆ ಎಂದು ಸಂಶೋಧಕ ಡಾ.ಎಸ್.ವೆಂಕಟೇಶ್ ತಿಳಿಸಿದರು. ದೊಡ್ಡಬಳ್ಳಾಪುರದ ಡಾ.ಡಿ.ಆರ್ ನಾಗರಾಜ್ ಬಳಗದ ನೇತೃತ್ವದಲ್ಲಿ ಹುಲುಕುಡಿ ಬೆಟ್ಟದಲ್ಲಿ ಆಯೋಜಿಸಿದ್ದ ‘ಕಾವ್ಯ ಚಾರಣ’ದ ಅತಿಥಿಯಾಗಿ ಅವರು ಮಾತನಾಡಿದರು.

ದೊಡ್ಡಬಳ್ಳಾಪುರದ ಇತಿಹಾಸ ಪೂರ್ವದ ಆದಿಮ ಮಾನವರ ಕುರುಹುಗಳನ್ನು ಉಳಿಸುವಲ್ಲಿ ಸರ್ಕಾರವಾಗಲಿ, ಸ್ಥಳೀಯರಾಗಲಿ ಕೆಲಸ ಮಾಡುತ್ತಿಲ್ಲ ಎಂದು ವಿಷಾದಿಸಿದರು.

ಸ್ಥಳೀಯ ಪರಂಪರೆ ಹಾಗೂ ಪ್ರಕೃತಿ ಉಳಿಸುವಲ್ಲಿ ನಾವು ಹೊಣೆಗಾರಿಕೆ ತೋರದೆ ನಮ್ಮ ಪ್ರದೇಶಗಳನ್ನು ವಾಣಿಜ್ಯೀಕರಿಸುತ್ತಿರುವುದು ಸಂಸ್ಕೃತಿ ನಾಶಕ್ಕೆ ಕಾರಣವಾಗುತ್ತಿದೆ ಎಂದೂ ಆತಂಕ ವ್ಯಕ್ತಪಡಿಸಿದರು.

ಜಾನಪದ ಅಕಾಡೆಮಿ ಸದಸ್ಯ, ಲೇಖಕ ಡಾ.ರವಿಕುಮಾರ್ ನೀಹ ಮಾತನಾಡಿ, ಕಥೆ, ಕವಿತೆ ಇವುಗಳು ನಮ್ಮದೇ ಬದುಕು ಹಾಗೂ ಜೀವನ ಪರಿಸರವನ್ನು ಜೈವಿಕವಾಗಿ ಒಳಗೊಂಡಿರುತ್ತವೆ. ಚಾರಣಗಳು ಇಂದು ಕಮರ್ಷಿಯಲ್ ಆಗಿ ಬೆಳೆದು ನಮ್ಮ ನೆಲ, ಜಲ ಹಾಗೂ ಜನ ಪರಂಪರೆಯನ್ನು ಮಾರಾಟದ ಸರಕನ್ನಾಗಿಸಿ ಮೂಲ ನೆಲೆಗಳನ್ನು ಕಳೆದುಕೊಂಡು ನಿರ್ಗತಿಕ ಸಮುದಾಯವಾಗುತ್ತಿದ್ದೇವೆ. ಡಿ.ಆರ್.ಎನ್. ಬಳಗ ಈ ದಿಶೆಯಲ್ಲಿ ವಿನೂತನವಾದ ಸಾಂಸ್ಕೃತಿಕ ಪ್ರಜ್ಞೆಯನ್ನು ಬಿತ್ತುವ ಕಾರ್ಯರೂಪಿಸಿದೆ. ಇದು ನಮಗೆ ಬೇಕಾಗಿರುವ ಸಾಂಸ್ಕೃತಿಕ ಹೊಣೆಗಾರಿಕೆಯ ಕೆಲಸವಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕಾವ್ಯ ವಾಚನ ಮಾಡಿ ಮಾತನಾಡಿದ ಕರ್ನಾಟಕ ನಾಟಕ ಅಕಾಡಮಿಯ ಸದಸ್ಯ ಡಾ.ಟಿ.ಎಚ್ ಲವಕುಮಾರ್, ಇಂದಿನ ಕಾವ್ಯ ಮನುಷ್ಯರ ಭಯಮೂಲವನ್ನು ತೋರುತ್ತಿದೆ. ಭಯವೇ ಕವಿತೆ ಬರೆಯಲು ಕಾರಣವಾಗುತ್ತಿದೆ. ಅದರಲ್ಲಿಯೂ ಈ ಯುಗ ಜನಸಮೂಹವನ್ನು ಅನೂಹ್ಯ ಭಯದ ವಾತಾವರಣಕ್ಕೆ ದೂಡಿದೆ. ಕಾವ್ಯ ಈ ಮನುಷ್ಯ ಜನಾಂಗದ ಭಯವನ್ನು ಎದುರಾಗಬೇಕು ಎಂದು ಆಶಿಸಿದರು.‌

ಶಿವಪ್ರಸಾದ್ ಪಟ್ಟಣಗೆರೆ, ಹೇಮಂತ್ ಲಿಂಗಪ್ಪ, ಮಂಜುನಾಥ್ ಕಗ್ಗರೆ, ಶಿವಶಂಕರ್ ಸೀಗೆಹಟ್ಟಿ, ಕಾಂತ್ ರಾಜ್ ಗುಪ್ಪಟ್ಣ, ಲಕ್ಷ್ಮೀನಾರಾಯಣ್ ಕೆ ವಾಣಿಗರಹಳ್ಳಿ, ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ ಕಾವ್ಯ ವಾಚನ ಮಾಡಿದರು.

ದೇಶಿ ಪದ ಪಲ್ಲಂಗದ ಭಾಗವಾಗಿ ಚಿನ್ನುಪ್ರಕಾಶ್ ಶ್ರೀರಾಮನಹಳ್ಳಿ ಹಾಗೂ ಸ್ಥಳೀಯ ಕಲಾವಿದ ಲೋಕೇಶ್ ಸಿ.ವಿ ದೇಶಿ ಗೀತೆಗಳನ್ನು ಪ್ರಸ್ತುತಪಡಿಸಿ ಸ್ಥಳೀಯರ ಗಮನ ಸೆಳೆದರು.

ಕುಂಚ ಕಲಾವಿದ ಹರೀಶ್ ಹುಲುಕುಡಿಯ ಪ್ರಾಕೃತಿಕ ಸನ್ನಿವೇಶಗಳನ್ನು ಜಲವರ್ಣದ ಮೂಲಕ ಸ್ಥಳದಲ್ಲೇ ಚಿತ್ರಿಸಿ ನೋಡುಗರಲ್ಲಿ ಅಚ್ಚರಿ ಮೂಡಿಸಿದರು.

ತತ್ವಪದಗಾಯನ, ಕಥಾ ವಾಚನಗಳು, ರಂಗಾಭಿನಯ, ಹೀಗೆ ಹಲವು ಸಾಂಸ್ಕೃತಿಕ ಚಟುವಟಿಕೆಗಳು ಈ ಕಾರ್ಯಕ್ರಮದಲ್ಲಿ ಗಮನ ಸೆಳೆದವು.

ಇಂತಹ ಕಾರ್ಯಕ್ರಮಗಳ ಮೂಲಕ ಡಿ.ಆರ್.ನಾಗರಾಜ್ ರವರ ಚಿಂತನೆಯನ್ನು ಸಾಂಸ್ಕೃತಿಕವಾಗಿ ತಲುಪಿಸುವುದು ನಮ್ಮ ಉದ್ಧೇಶವಾಗಿದೆ ಎಂದು ಬಳಗದ ಸಂಚಾಲಕ ಹೇಮಂತ್ ಲಿಂಗಪ್ಪ ಪ್ರಸ್ತಾಪಿಸಿದರು.

ಡಿ ಆರ್.ಎನ್ ಹೇಳಿದಂತೆ ವಿಶಿಷ್ಟತೆಯಿಂದ ವಿಶ್ವಾತ್ಮಕತೆಗೆ ತಲುಪಲು ನಾವು ನಮ್ಮ ಸ್ಥಳೀಯ ಚರಿತ್ರೆ ಮತ್ತು ಪರಂಪರೆಯ ವಿಚಾರಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕ್ರಿಯಾಶೀಲರಾಗಬೇಕಾಗುತ್ತದೆ. ಈ ವಿಚಾರದಲ್ಲಿ ಸ್ಥಳೀಯ ಸಾಹಿತ್ಯಾಸಕ್ತರು, ಶಿಕ್ಷಣ ಸಂಸ್ಥೆಗಳು ಹಾಗೂ ಪರಿಸರ ಹೋರಾಟಗಾರರ ಜೊತೆ ಬಳಗವೂ ಕ್ರಿಯಾಶೀಲವಾಗುತ್ತದೆ ಎಂದು ಡಾ.ಪ್ರಕಾಶ್ ಮಂಟೇದ ಪ್ರಸ್ತಾಪಿಸಿದರು.

ಡಿ.ಆರ್.ಎನ್ ಬಳಗದ ಡಾ.ಸತ್ಯಪ್ರಕಾಶ್ , ಹುಲುಕುಡಿ ವೀರಭದ್ರಸ್ವಾಮಿ ಟ್ರಸ್ಟ್ ನ ರಾ. ಭೈರೇಗೌಡ, ದಯಾನಂದ ಗೌಡ, ವೆಂಕಟೇಶ್ ಕೊನಘಟ್ಟ , ಚಂದ್ರಶೇಖರ್ , ಕೆ.ಸಿ ಮುನಿರಾಜು, ಡಾ.ಸತೀಶ್, ಯುವ ರೈತ ರೋಹಿತ್ ಜೊತೆಗೆ ಕವಿಗಳು, ಅಧ್ಯಾಪಕರು, ಕಲಾವಿದರು, ಇಂಜಿನಿಯರ್ಗಳು, ಅಧಿಕಾರಿಗಳು, ವಿದ್ಯಾರ್ಥಿಗಳು, ಮಕ್ಕಳು ಹಾಗೂ ಹೊರಗಿನ ಚಾರಣಾಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.