ಸಾರಾಂಶ
ಕುಮಾರ್ ಆಲಗೂರ ಕೊಲೆಗೆ ₹10 ಲಕ್ಷಕ್ಕೆ ಸುಪಾರಿ ನೀಡಿದ ಆರೋಪದ ಮೇಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಜಮಖಂಡಿ: ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕುಮಾರ ಆಲಗೂರ ಮೇಲೆ ಅಪರಿಚಿತರು ಹಲ್ಲೆಗೆ ವಿಫಲಯತ್ನ ನಡೆಸಿರುವ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕುರಿತು ಜಮಖಂಡಿ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಹಾರಾಷ್ಟ್ರದ ಸಾಂಗ್ಲಿ ಮೂಲದ ಅತುಲ್ ಜಾಧವ್, ವಿನಾಯಕ್ ಪುನೇಕರ್, ಜಹಾಂಗೀರ್ ಶೇಕ್ ಬಂಧಿತ ಆರೋಪಿಗಳು. ಬಂಧಿತರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕುಮಾರ ಆಲಗೂರ ಅವರನ್ನು ಹತ್ಯೆ ಮಾಡಲು ಸುಪಾರಿ ಪಡೆದಿದ್ದರು. ಕುಮಾರ್ ಆಲಗೂರ ಕೊಲೆಗೆ ₹10 ಲಕ್ಷಕ್ಕೆ ಸುಪಾರಿ ನೀಡಿದ ಆರೋಪದ ಮೇಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಕುಮಾರ ಅವರಿಗೆ ದೂರವಾಣಿ ಕರೆ ಮಾಡಿ ಮಹಾರಾಷ್ಟ್ರದ ಅಪರಿಚಿತ ವ್ಯಕ್ತಿಗಳು ಕರೆಸಿಕೊಂಡಿದ್ದಾರೆ. ನಿಮ್ಮ ಮೇಲೆ ಹಲ್ಲೆ ಮಾಡಲು ನಮಗೆ ಸುಪಾರಿ ನೀಡಿದ್ದಾರೆ. ನಮಗೆ ₹10 ಲಕ್ಷ ನೀಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಅಷ್ಟರಲ್ಲಿ ಎಚ್ಚೆತ್ತುಕೊಂಡ ಕುಮಾರ ಆಲಗೂರ ತಮ್ಮ ಸ್ನೇಹಿತರು ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಸಕಾಲಕ್ಕೆ ಆಗಮಿಸಿದ ಪೊಲೀಸರು ಮೂವರು ಮಹಾರಾಷ್ಟ್ರ ಮೂಲದ ವ್ಯಕ್ತಿಗಳನ್ನು ಬಂಧಿಸಿದ್ದಾರೆ.
ಹಿಂದಿ ಹಾಗೂ ಮರಾಠಿ ಭಾಷೆಯಲ್ಲಿ ಆರೋಪಿಗಳು ಮಾತನಾಡುತ್ತಿದ್ದರು. ನನ್ನ ಮೇಲೆ ಹಲ್ಲೆ ನಡೆಸಲು ಯಾರು ಸುಪಾರಿ ಕೊಟ್ಟಿದ್ದಾರೆ ಎಂಬುದು ಅರ್ಥವಾಗಿಲ್ಲ. ವ್ಯಕ್ತಿಗಳ ಬಗ್ಗೆ ಕೂಲಂಕಷ ತನಿಖೆ ನಡೆಸಿ ಇವರ ಹಿಂದಿರುವವರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿದೆ. ಯಾವುದೇ ಒತ್ತಡಕ್ಕೆ ಮಣಿಯದೇ ಪೊಲೀಸರು ಸೂಕ್ತ ಕ್ರಮ ಜರುಗಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಕುಮಾರ ಆಲಗೂರ ತಿಳಿಸಿದ್ದಾರೆ.