ಗಂಗಾವತಿ ಉದ್ಯಮಿ ದರೋಡೆ ಕೇಸು ಮೂವರ ಬಂಧನ

| Published : Jun 01 2024, 12:45 AM IST

ಸಾರಾಂಶ

ಕಾರನ್ನು ದುಷ್ಕರ್ಮಿಗಳು ಮತ್ತೊಂದು ಕಾರಿನಲ್ಲಿ ಹಿಂಬಾಲಿಸಿ ದರೋಡೆಗೈದ ಬಗ್ಗೆ ಪ್ರಕರಣ ದಾಖಲಾಗಿತ್ತು.

ಹರಪನಹಳ್ಳಿ: 15 ದಿನಗಳ ಹಿಂದೆ ತಾಲೂಕಿನ ಕಂಚಿಕೇರಿ ರಸ್ತೆಯಲ್ಲಿನ ಉಪ ಕಾರಾಗೃಹ ಬಳಿ ನಡೆದಿದ್ದ ದರೋಡೆ ಪ್ರಕರಣವನ್ನು ಭೇದಿಸಿರುವ ಇಲ್ಲಿಯ ಪೊಲೀಸರು ಮೂವರನ್ನು ಬಂಧಿಸಿ ಶುಕ್ರವಾರ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಗಂಗಾವತಿಯ ರವಿ ಅಲಿಯಾಸ್‌ ಬಾದ್‌ಷಾ ರವಿ (29), ವಿ.ಸುನಿಲಕುಮಾರ (32), ಬಳ್ಳಾರಿಯ ರಾಜಾಹುಸೇನ್ (25) ಬಂಧಿತ ಆರೋಪಿಗಳು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಿವೈಎಸ್ಪಿ ವೆಂಕಟಪ್ಪ ನಾಯಕ, ಗಂಗಾವತಿಯ ಉದ್ಯಮಿಯೊಬ್ಬರು ಮೇ 16ರಂದು ನಸುಕಿನಜಾವ 2 ಗಂಟೆ ಸುಮಾರಿಗೆ ಕಂಚಿಕೇರಿ ರಸ್ತೆಯಲ್ಲಿ ಗಂಗಾವತಿಯಿಂದ ದಾವಣಗೆರೆಗೆ ₹46 ಲಕ್ಷ ನಗದನ್ನು ಕಾರಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದರು. ಈ ಕಾರನ್ನು ದುಷ್ಕರ್ಮಿಗಳು ಮತ್ತೊಂದು ಕಾರಿನಲ್ಲಿ ಹಿಂಬಾಲಿಸಿ ದರೋಡೆಗೈದ ಬಗ್ಗೆ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಕೊನೆಗೂ ಪ್ರಕರಣ ಬೇಧಿಸಿದ್ದಾರೆ.

ಉದ್ಯಮಿ ಇದ್ದ ಕಾರಿನಲ್ಲಿಯೇ ಕುಳಿತು ಸಂಚು ರೂಪಿಸಿದ್ದ ಒಬ್ಬನನ್ನು ಸೇರಿದಂತೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಮಂದಿಯಲ್ಲಿ ಮೂವರನ್ನು ಬಂಧಿಸಲಾಗಿದೆ. ಇನ್ನುಳಿದ ಮೂವರು ತಲೆಮರೆಸಿಕೊಂಡಿದ್ದಾರೆ.

ಬಂಧಿತರಿಂದ ದರೋಡೆ ಮಾಡಿದ ಹಣದಲ್ಲಿ ₹10.33 ಲಕ್ಷ ನಗದು, 20 ಸಾವಿರ ಬೆಲೆಬಾಳುವ 2 ಮೊಬೈಲ್‌, ₹14 ಲಕ್ಷ ಬೆಲೆಬಾಳುವ 2 ಕಾರು, ಕೃತ್ಯಕ್ಕೆ ಬಳಸಿದ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ. ತನಿಖಾ ಕಾರ್ಯ ಮುಂದುವರೆದಿದೆ.

ಪತ್ತೆ ಕಾರ್ಯದಲ್ಲಿ ತನಿಖಾಧಿಕಾರಿ ಸಾಬಯ್ಯ ನೇತೃತ್ವದಲ್ಲಿ ಪಿಎಸ್‌ಐಗಳಾದ ಶಂಭುಲಿಂಗ ಹಿರೇಮಠ, ರಂಗಯ್ಯ, ಕಿರಣಕುಮಾರ, ಮಾಲಕಸಾಬ್‌ ಕಲಾರಿ, ಸಿಬ್ಬಂದಿ ಕೊಟ್ಟುರೇಶ, ಮುಬಾರಕ್, ರವಿದಾದಾಪುರ, ಆನಂದ, ಮಾಲತೇಶ ಬಿಳಿಚೋಡು, ನಾಗರಾಜ, ಗುರುರಾಜ, ಚಂದ್ರಕಾಂತ ಯಾದವ್, ವಿಜಯಕುಮಾರ, ಮಲ್ಲಿಕಾರ್ಜುನ, ಕುಮಾರ ನಾಯ್ಕ ಪಾಲ್ಗೊಂಡಿದ್ದರು.