ಸಾರಾಂಶ
ರಾಮನಗರ: ಹಾಸನ ಜಿಲ್ಲೆ ಆಲೂರು ಬಳಿ ನಾಲ್ವರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮಾಸುವ ಮುನ್ನವೇ ಅಂತಹುದೇ ದುರ್ಘಟನೆಯೊಂದು ರಾಮನಗರದಲ್ಲಿಯೂ ನಡೆದಿದೆ.
ರೀಲ್ಸ್ ಹುಚ್ಚಾಟಕ್ಕೆ ಮೂವರು ಅಮಾಯಕ ಬಾಲಕರು ನೀರಿನಲ್ಲಿ ಮುಳುಗಿ ಜೀವ ಕಳೆದುಕೊಂಡಿರುವ ದುರ್ಘಟನೆ ತಾಲೂಕಿನ ಅಚ್ಚಲು ಗ್ರಾಮದ ಜ್ಯೂಟ್ ಫ್ಯಾಕ್ಟರಿ ಬಳಿಯ ಬೆಟ್ಟದ ಸೊಣೆಯಲ್ಲಿ ಶುಕ್ರವಾರ ಮಧ್ಯಾಹ್ನ ಜರುಗಿದೆ.ನಗರದ ಮೆಹಬೂಬ್ ನಗರ ಬಡಾವಣೆ ವಾಸಿ ಸರ್ದಾರ್ ಖಾನ್ ಪುತ್ರರಾದ ಶಬಾಜ್ ಖಾನ್(14) ರಿಹಾನ್ ಖಾನ್(12),
ಇರ್ಷಾದ್ ಪುತ್ರ ಸೈಯದ್ ಶಾಹಿದ್ ಅಲಿಯಾಸ್ ಸುಲ್ತಾನ್(12) ಮೃತ ಬಾಲಕರು.ಈ ದುರ್ಘಟನೆಯಲ್ಲಿ ಸಹೋದರರಾದ ಶಬಾಜ್ ಖಾನ್ ಮತ್ತು ರಿಹಾನ್ ಖಾನ್ ಪ್ರಾಣ ತೆತ್ತಿರುವುದರಿಂದ ಸರ್ದಾರ್ ಖಾನ್ ಕುಟುಂಬದಲ್ಲಿ ನೀರವ ಮೌನ ಆವರಿಸಿದ್ದರೆ, ಇರ್ಷಾದ್ ಕುಟುಂಬ ಸೈಯದ್ ಶಾಹಿದ್ ಅಗಲಿಕೆಯಿಂದ ಕಣ್ಣೀರಿನಲ್ಲಿ ಮುಳುಗುವಂತೆ ಮಾಡಿದೆ.
ಮೆಹಬೂಬ್ ನಗರ ಬಡಾವಣೆಯಲ್ಲಿರುವ ಖಾದ್ರಿಯ ಮಸೀದಿಯಲ್ಲಿ ಮಧ್ಯಾಹ್ನ ಶಬಾಜ್ ಖಾನ್, ರಿಹಾನ್ ಖಾನ್, ಸೈಯದ್ ಶಾಹಿದ್, ಆಖಿಲ್, ಮಹಮ್ಮದ್, ಮಹಮ್ಮದ್ ಷರೀಫ್, ನವಾಜ್ ಹಾಗೂ ಜಬಿ ಅವರೆಲ್ಲರು ಪ್ರಾರ್ಥನೆ ಸಲ್ಲಿಸಿದ್ದಾರೆ.ಮಸೀದಿಯಿಂದ ಹೊರಟು 8 ಮಂದಿ ಬಾಲಕರು ಈಜಲು ಬಾಲಗೇರಿಯಿಂದ ಅರ್ಕಾವತಿ ನದಿ ದಾಟಿ ಅಚ್ಚಲು ಗ್ರಾಮದ ಜ್ಯೂಟ್ ಫ್ಯಾಕ್ಟರಿ ಸಮೀಪದ ಬೆಟ್ಟದ ಸೊಣೆ ಬಳಿಗೆ ಆಗಮಿಸಿದ್ದಾರೆ. ಈ ಸೊಣೆ ಸುಮಾರು 10 ಅಡಿ ಆಳವಿದ್ದು, ಹೂಳು ತುಂಬಿಕೊಂಡಿತ್ತು.
ಬೆಟ್ಟದ ಮೇಲಿಂದ ಸೊಣೆಗೆ ಜಿಗಿದು ಈಜಾಡುವ ದೃಶ್ಯಗಳ ರೀಲ್ಸ್ ಮಾಡಲು ಬಾಲಕರು ತೀರ್ಮಾನಿಸಿದ್ದಾರೆ. ಅದರಂತೆ ಶಬಾಜ್ ಖಾನ್, ರಿಹಾನ್ ಖಾನ್, ಸೈಯದ್ ಶಾಹಿದ್ ಸೇರಿ ಐವರು ಬಾಲಕರು ಬೆಟ್ಟದ ಮೇಲಕ್ಕೆ ತೆರಳಿದರೆ, ಉಳಿದ 3 ಬಾಲಕರು ಸೊಣೆ ಬಳಿ ನಿಂತಿದ್ದಾರೆ.ಬೆಟ್ಟದ ಮೇಲಿಂದ ಇಬ್ಬರು ಯುವಕರು ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದರೆ ಶಬಾಜ್, ರಿಹಾನ್, ಶಾಹಿದ್ ಒಬ್ಬರ ಹಿಂದೆ ಒಬ್ಬರು ಸೊಣೆಗೆ ಜಿಗಿದಿದ್ದಾರೆ. ಮೂವರು ನೀರಿನಿಂದ ಹೊರಗೆ ಎದ್ದು ಬರದಿದ್ದಾಗ ಉಳಿದ ಬಾಲಕರು ಗಾಬರಿಗೊಂಡಿದ್ದಾರೆ. ತಕ್ಷಣ ಬಾಲಕರು ಅಚ್ಚಲು ಗ್ರಾಮದ ರಸ್ತೆ ಬದಿಯಲ್ಲಿದ್ದ ಮನೆಯವರಿಗೆ ಘಟನೆ ಕುರಿತು ವಿಷಯ ತಿಳಿಸಿದ್ದಾರೆ. ಸೊಣೆ ಬಳಿಗೆ ಗ್ರಾಮಸ್ಥರು ಧಾವಿಸಿ ಬಾಲಕರಿಗಾಗಿ ಹುಡುಕಾಟ ನಡೆಸಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಅಗ್ನಿಶಾಮಕ ದಳ ಸಿಬ್ಬಂದಿ ಸಹಾಯದಿಂದ ಬಾಲಕರ ಶವಗಳನ್ನು ಹೊರಗೆ ತೆಗೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ರಾಮನಗರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಆಸ್ಪತ್ರೆ ಆವರಣದಲ್ಲಿ ಬಾಲಕರ ಕುಟುಂಬದವರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.17ಕೆಆರ್ ಎಂಎನ್ 6,7,8,9,10,11.ಜೆಪಿಜಿ6,7,8.ಬೆಟ್ಟದಲ್ಲಿರುವ ಸೊಣೆಯಲ್ಲಿ ಬಾಲಕರ ಶವಕ್ಕಾಗಿ ಹುಡುಕಾಟ ನಡೆದಿರುವುದು
9.ಶಬಾಜ್ ಖಾನ್10.ರಿಹಾನ್ ಖಾನ್
11.ಸೈಯದ್ ಶಾಹಿದ್ ಅಲಿಯಾಸ್ ಸುಲ್ತಾನ್