ಸಾರಾಂಶ
ದಾಬಸ್‍ಪೇಟೆ: ಗುಂಡಿ ತಪ್ಪಿಸಲು ಹೋಗಿ ಮೂರು ಕಾರು ಹಾಗೂ ಲಾರಿ ನಡುವೆ ಸರಣಿ ಅಪಘಾತವಾಗಿ ಕಾರು ಜಖಂಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ-48ರ ಬೆಂಗಳೂರು-ತುಮಕೂರು ರಸ್ತೆಯ ಕೆಂಗಲ್ ಕೆಂಪೋಹಳ್ಳಿ ಬಳಿ ನಡೆದಿದೆ.
ದಾಬಸ್‍ಪೇಟೆ: ಗುಂಡಿ ತಪ್ಪಿಸಲು ಹೋಗಿ ಮೂರು ಕಾರು ಹಾಗೂ ಲಾರಿ ನಡುವೆ ಸರಣಿ ಅಪಘಾತವಾಗಿ ಕಾರು ಜಖಂಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ-48ರ ಬೆಂಗಳೂರು-ತುಮಕೂರು ರಸ್ತೆಯ ಕೆಂಗಲ್ ಕೆಂಪೋಹಳ್ಳಿ ಬಳಿ ನಡೆದಿದೆ. ತುಮಕೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗುವ ಸರ್ವಿಸ್ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ಸೋಮವಾರ ಮಧ್ಯಾಹ್ನ ಈ ರಸ್ತೆಯಲ್ಲಿ ಕಾರೊಂದು ಚಲಿಸುವಾಗ ಗುಂಡಿಯನ್ನು ತಪ್ಪಿಸಲು ಬ್ರೇಕ್ ಹಾಕಿದ್ದು, ಹಿಂಬದಿಯಿಂದ ಎರಡು ಕಾರು ಹಾಗೂ ಲಾರಿ ಡಿಕ್ಕಿ ಹೊಡೆದಿವೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಯಾವುದೇ ಅನಾಹುತಗಳು ಸಂಭವಿಸಿಲ್ಲ.
ಕೆಲ ದಿನಗಳ ಹಿಂದೆಯಷ್ಟೇ ಸರ್ವಿಸ್ ರಸ್ತೆ ನಿರ್ಮಿಸಿದ್ದು, ಕಳಪೆ ಕಾಮಗಾರಿ ಮಾಡಿದ ಪರಿಣಾಮ ರಸ್ತೆಯಲ್ಲೆಲ್ಲಾ ಗುಂಡಿಗಳು ಬಿದ್ದಿವೆ. ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ವಾಹನಗಳನ್ನು ಸರ್ವಿಸ್ ರಸ್ತೆಯಲ್ಲಿ ಚಲಿಸಲು ಅನುವು ಮಾಡಿಕೊಡಲಾಗಿತ್ತು. ಘಟನಾ ಸ್ಥಳಕ್ಕೆ ನೆಲಮಂಗಲ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.