ಬಂಗಾರದ ಮೋಸಕ್ಕೆ ಮೂವರ ಆತ್ಮಹತ್ಯೆ

| Published : Jul 10 2025, 01:46 AM IST

ಸಾರಾಂಶ

ಗೋಲ್ಡ್‌ ಚೀಟಿ (ಚಿಟ್‌ ಫಂಡ್‌ ಮಾದರಿಯಲ್ಲಿ) ಮಾಡುತ್ತಿದ್ದವರಿಗೆ ಚಿನ್ನದ ವ್ಯಾಪಾರಿಯೊಬ್ಬ ಮೋಸ ಮಾಡಿದನೆಂದು ಮನನೊಂದ ಒಂದೇ ಕುಟುಂಬದ ನಾಲ್ವರು ಡೆಟ್‌ನೋಟ್‌ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಮೂವರು ಮೃತಪಟ್ಟಿರುವ ಮನಕಲಕುವ ಘಟನೆ ಬೆಳಗಾವಿಯ ಖಾಸಭಾಗದ ಜೋಶಿ ಮಾಳದಲ್ಲಿ ಬುಧವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಗೋಲ್ಡ್‌ ಚೀಟಿ (ಚಿಟ್‌ ಫಂಡ್‌ ಮಾದರಿಯಲ್ಲಿ) ಮಾಡುತ್ತಿದ್ದವರಿಗೆ ಚಿನ್ನದ ವ್ಯಾಪಾರಿಯೊಬ್ಬ ಮೋಸ ಮಾಡಿದನೆಂದು ಮನನೊಂದ ಒಂದೇ ಕುಟುಂಬದ ನಾಲ್ವರು ಡೆಟ್‌ನೋಟ್‌ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಮೂವರು ಮೃತಪಟ್ಟಿರುವ ಮನಕಲಕುವ ಘಟನೆ ಬೆಳಗಾವಿಯ ಖಾಸಭಾಗದ ಜೋಶಿ ಮಾಳದಲ್ಲಿ ಬುಧವಾರ ನಡೆದಿದೆ.

ಖಾಸಭಾಗದ ಜೋಶಿ ಮಾಳದ‌ ಮಂಗಳಾ ಕುರಡೇಕರ್ (70) ಇವರ ಪುತ್ರ ಸಂತೋಷ ಕುರಡೇಕರ್ (44), ಪುತ್ರಿ ಸುವರ್ಣ ಕುರಡೇಕರ್(42) ಮೃತಪಟ್ಟವರು. ಇನ್ನೋರ್ವ ಪುತ್ರಿ ಸುನಂದಾ ಕುರಡೇಕರ್ (20) ಅವರೂ ವಿಷ ಸೇವಿಸಿದ್ದು ಅವರ ಸ್ಥಿತಿ ‌ಚಿಂತಾ ಜನಕ‌ವಾಗಿದೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯಲ್ಲಿ ತಾಯಿ ಮತ್ತು ಮೂವರು ಮಕ್ಕಳು ಕೂಡಿಕೊಂಡು ಬೆಳಗ್ಗೆ 9 ಗಂಟೆ ಸುಮಾರಿಗೆ ವಿಷ ಸೇವಿಸಿದ್ದಾರೆ. ಮೂವರೂ ಮಕ್ಕಳ‌ ಮದುವೆ ಆಗಿರಲಿಲ್ಲ. ಕಳೆದ ಹಲವಾರು ವರ್ಷಗಳಿಂದ ಜೋಶಿ ಮಾಳದಲ್ಲಿ ತಾಯಿ‌ ಜೊತೆಗೆ ಎಲ್ಲರೂ ಬಾಡಿಗೆ ಮನೆಯಲ್ಲಿ ವಾಸವಿದ್ದರು.ಏನಿದು ಘಟನೆ?:

ಸಂತೋಷ ಕುರಡೇಕರ್ ಚಿನ್ನದ ಚೀಟಿ ಮಾಡುತ್ತಿದ್ದರು. ಆದರೆ, ಚಿನ್ನದ ವ್ಯಾಪಾರಿ ಇವರಿಗೆ ಮೋಸ ಮಾಡಿದ್ದರಿಂದ ಚೀಟಿ ಹಾಕಿದವರು ನಿತ್ಯ ಕಿರುಕುಳ ನೀಡಲು ಆರಂಭಿಸಿದ್ದರು. ಇದರಿಂದ ಇಡೀ ಕುಟುಂಬ ಈ ಘಟನೆಗೆ ಕಾರಣವಾಗಿರಬಹುದು ಎಂಬ ಮಾಹಿತಿ ಲಭ್ಯವಾಗಿದೆ. ಸಂತೋಷ ಅವರು ಮೊದಲು ವಿಷ ಕುಡಿಯೋಣ ಎಂದು ಎಲ್ಲರಿಗೂ ಮನವರಿಕೆ ಮಾಡಿದ್ದಾರೆ. ಅದರಂತೆಯೇ ಮೂವರು ವಿಷ ಸೇವಿಸಿದ್ದಾರೆ. ಆದರೆ, ಸುನಂದಾ ವಿಷ ಸೇವಿಸಲು ಹಿಂಜರಿದಿದ್ದಾರೆ. ನಂತರ ವಿಷ ಸೇವಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಈ ವೇಳೆ ಸುನಂದಾ ಗೋಳಾಡುವುದನ್ನು ಕೇಳಿಸಿಕೊಂಡ ಅಕ್ಕಪಕ್ಕದವರು ಮನೆಗೆ ಬಂದಾಗ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ನಂತರ ಸ್ಥಳಕ್ಕೆ ಶಹಾಪುರ ಠಾಣೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದರು. ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೊರಸೆ ಭೇಟಿ ನೀಡಿ, ಘಟನೆಯ ಕುರಿತು ಮಾಹಿತಿ ಪಡೆದರು. ಈ ಕುರಿತು ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡೆತ್ ನೋಟ್ ನಲ್ಲಿ ಏನಿದೆ..?:

ಸಂತೋಷ ಕುರಡೇಕರ್ ಡೆತ್ ನೋಟ್ ಬರೆದಿದ್ದು, ಅದು ಮರಾಠಿ ಭಾಷೆಯಲ್ಲಿದೆ. ಅದರಲ್ಲಿ ನಾನು ಬಹಳಷ್ಟು ಜನರ ಬಳಿ ಗೋಲ್ಡ್ ಚೀಟಿ (ಚಿಟ್ ಫಂಡ್ ಮಾದರಿ) ಮಾಡುತ್ತಿದ್ದೆ. ಹಲವಾರು ಜನರಿಗೆ ಹಣ ನೀಡಬೇಕಾಗಿತ್ತು. ವಡಗಾವಿಯ ಗೋಲ್ಡ್ ಸ್ಮಿತ್ ರಾಜು ಕುಡತಲಕರ್ ಕಿರುಕುಳ ಕೊಟ್ಟಿದ್ದಾರೆ. ಅವರ ಬಳಿ 500 ಗ್ರಾಂ ಬಂಗಾರ ಕೊಟ್ಟಿದ್ದೇನೆ. ಮರಳಿ ಕೇಳಿದರೆ ಅವನ ಹೆಂಡತಿ ‌ಹಾಗೂ ಅವನು ಸೇರಿ ನಮಗೆ ಜೀವ ಬೆದರಿಕೆ ಹಾಕಿದ್ದಾರೆ. ಅದಲ್ಲದೇ ನಾನು ಬಂಗಾರವನ್ನು ತೆಗೆದುಕೊಂಡು ಊರು ಬಿಟ್ಟಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ನನ್ನ ಮಾನ ಹರಾಜು ಮಾಡಿದ್ದಾರೆ. ಇದರಿಂದ ನನಗೆ ಬದುಕಲು ಕಷ್ಟವಾಗಿದೆ. ಹಲವಾರು ಜನ ನನ್ನ ಮನೆಗೆ ಬಂದು ಟಾರ್ಚರ್ ಕೊಟ್ಟಿದ್ದಾರೆ. ಅದಕ್ಕಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಪೊಲೀಸರು ರಾಜು ಕುಡತಲಕರ್ ಅವರಿಂದ ಚಿನ್ನವನ್ನು ಪಡೆದುಕೊಂಡು ನಾನು ಕೊಡಬೇಕಾದ ಜನರಿಗೆ ನೀಡಬೇಕು. ಅದೇ ರೀತಿ ರಾಜು ಕುಡತಲಕರ್‌ಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಡೆತ್‌ನೋಟ್‌ನಲ್ಲಿ ಆಗ್ರಹಿಸಿದ್ದಾರೆ.ಸಾಮೂಹಿಕವಾಗಿ ಆತ್ಮಹತ್ಯೆಗೆ ಯತ್ನಿಸಿ ಮೂವರು ಸಾವನ್ನಪ್ಪಿದ್ದು, ಒಬ್ಬರು ಬದುಕುಳಿದಿದ್ದಾರೆ. ಅವರ ಸ್ಥಿತಿಯೂ ಗಂಭೀರವಾಗಿದೆ. ಸ್ಥಳದಲ್ಲಿ ಡೆತ್‌ನೋಟ್‌ ಸಿಕ್ಕಿದ್ದು, ಅದನ್ನು ಆಧರಿಸಿ ತನಿಖೆ ನಡೆಸಲಾಗುತ್ತಿದೆ.

- ಭೂಷಣ್ ಬೊರಸೆ,
ಪೊಲೀಸ್ ಆಯುಕ್ತ, ಬೆಳಗಾವಿ